ಸಿಎಂ ನಿವಾಸದ ಎದುರು ಪ್ರತಿಭಟನೆ ವಿಚಾರ: ಮಾಜಿ ಸಚಿವ ಈಶ್ವರಪ್ಪ ಬೆಂಬಲಿಗರ ವಿರುದ್ಧ ದೂರು
ಬೆಂಗಳೂರು, ಎ.18: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸದ ಎದುರು ಯಾವುದೇ ಅನುಮತಿ ಇಲ್ಲದೆ, ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಪರವಾಗಿ ಪ್ರತಿಭಟನೆ ನಡೆಸಿದ ಬೆಂಬಲಿಗರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳುವಂತೆ ಇಲ್ಲಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಕೆಪಿಸಿಸಿ ಮಾನವ ಹಕ್ಕು ವಿಭಾಗದ ರಾಜ್ಯ ಪ್ರಧಾನ ಕಾರ್ಯದರ್ಶಿ ಬಿಂದುಗೌಡ ದೂರು ಸಲ್ಲಿಕೆ ಮಾಡಿದ್ದು, ಪ್ರಮುಖವಾಗಿ ಶಿವಮೊಗ್ಗ ಮೇಯರ್ ಸುನೀತಾ ಸೇರಿದಂತೆ ಹಲವರ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಅವರು ದೂರಿನಲ್ಲಿ ಒತ್ತಾಯಿಸಿದ್ದಾರೆ.
ಎ.15ರಂದು ಕೆ.ಎಸ್.ಈಶ್ವರಪ್ಪ ಅವರು ರಾಜೀನಾಮೆ ನೀಡುತ್ತಿರುವ ವಿರುದ್ಧ ಪ್ರತಿಭಟಿಸಲು ಈಶ್ವರಪ್ಪ ಅವರು ತಮ್ಮ ಸ್ವಕ್ಷೇತ್ರದಿಂದ 150 ಕಾರುಗಳ ಮೂಲಕ ಬೆಂಬಲಿಗರನ್ನು ಕರೆತಂದು ಅನುಮತಿಯಿಲ್ಲದೆ, ಮುಖ್ಯಮಂತ್ರಿಗಳ ನಿವಾಸದ ಎದುರು ಕಾನೂನು ಉಲ್ಲಂಘಿಸಿ ಪ್ರತಿಭಟನೆ ನಡೆಸಿದ್ದಾರೆ.ಇದನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಿ, ಕ್ರಮ ಕೈಗೊಳ್ಳುವಂತೆ ಅವರು ಆಗ್ರಹಿಸಿದ್ದಾರೆ.