ಬೆಂಗಳೂರು | ಕ್ರಿಪ್ಟೋ ಕರೆನ್ಸಿ ಹೆಸರಿನಲ್ಲಿ ವಂಚನೆ: ನಾಲ್ವರು ಆರೋಪಿಗಳ ಬಂಧನ

Update: 2022-04-18 14:19 GMT

ಬೆಂಗಳೂರು, ಎ.18: ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶ ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ಆಮಿಷವೊಡ್ಡಿ ಕೋಟ್ಯಂತರ ರೂ.ಗಳನ್ನು ಸಾರ್ವಜನಿಕರಿಂದ ಹೂಡಿಕೆ ಮಾಡಿಕೊಂಡು ವಂಚನೆ ಮಾಡುತ್ತಿದ್ದ ಆರೋಪದಡಿ ನಾಲ್ವರನ್ನು ಸಿಸಿಬಿ ಪೊಲೀಸರು ಬಂಧಿಸಿ 17 ಕೋಟಿ ರೂ. ಜಪ್ತಿ ಮಾಡಿದ್ದಾರೆ.

ಶೇರ್ ಹ್ಯಾಶ್ ಅಪ್ಲಿಕೇಶನ್ ಮೂಲಕ ಹೀಲಿಯಂ ಕ್ರಿಪ್ಟೋ ಟೋಕನ್ ಕ್ರಿಪ್ಟೋ ಕರೆನ್ಸಿಗೆ ವರ್ಗಾಯಿಸುವುದಾಗಿ ಸಾರ್ವಜನಿಕರನ್ನು ನಂಬಿಸಿ ಹಣ ಸಂಗ್ರಹಿಸುತ್ತಿದ್ದರು. ಈ ಜಾಲದಲ್ಲಿದ್ದ ನಾಲ್ವರನ್ನು ಬಂಧಿಸಿ 44 ವಿವಿಧ ಬ್ಯಾಂಕ್ ಖಾತೆಗಳಲ್ಲಿದ್ದ ಸುಮಾರು 15 ಕೋಟಿ ರೂ., 1 ಕೆಜಿ 650 ಗ್ರಾಂ ತೂಕದ ಚಿನ್ನ ಹಾಗೂ 78 ಲಕ್ಷ ನಗದು ಸೇರಿ 17 ಕೋಟಿ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ತಿಳಿಸಿದರು.

ಬಂಧಿತ ಆರೋಪಿಗಳು 2021ರ ಕೋವಿಡ್-19 ಲಾಕ್‍ಡೌನ್ ವೇಳೆ ವಾಟ್ಸ್ ಆ್ಯಪ್ ಗ್ರೂಪ್ ಹಾಗೂ ಎಸ್‍ಎಂಎಸ್ ಮೂಲಕ ಶೇರ್ ಹ್ಯಾಶ್ ಅಪ್ಲಿಕೇಶನ್ ಇನ್‍ಸ್ಟಾಲ್ ಮಾಡಿಕೊಂಡು ಶೇರ್ ಹ್ಯಾಶ್ ಅಪ್ಲಿಕೇಶನ್ ಮೂಲಕ ಕ್ರಿಪ್ಟೋ ಕರೆನ್ಸಿಗೆ ಸಂಬಂಧಿಸಿದಂತೆ ಹೆಚ್ಚಿನ ಲಾಭಾಂಶವನ್ನು ನೀಡುವ ಕ್ರಿಪ್ಟೋ ಮೈನಿಂಗ್ ಯಂತ್ರ ನೀಡುವುದಾಗಿ ನಂಬಿಸಿದ್ದರು ಎನ್ನಲಾಗಿದೆ.

ಸಾರ್ವಜನಿಕರು ಗೂಗಲ್ ಪ್ಲೇ ಸ್ಟೋರ್ ಮೂಲಕ ಶೇರ್ ಹ್ಯಾಶ್ ಅಪ್ಲಿಕೇಶನ್ ಅನ್ನು ಇನ್‍ಸ್ಟಾಲ್ ಮಾಡಿಕೊಂಡು ಖಾತೆಯನ್ನು ತೆರೆದು ತಮ್ಮ ಉಳಿತಾಯ ಬ್ಯಾಂಕ್ ಖಾತೆಯಿಂದ ಯುಪಿಐ ಮತ್ತು ನೆಟ್ ಬ್ಯಾಂಕಿಂಗ್ ಮೂಲಕ ಬೆಂಗಳೂರು ಹಾಗೂ ವಿವಿಧ ರಾಜ್ಯಗಳಲ್ಲಿ ನೋಂದಣಿಯಾಗಿರುವ ಕಂಪೆನಿಗಳಾದ ಕೋಟಾಟ ಟೆಕ್ನಾಲಜಿ, ಶಿರಾಲೀನ್ ಟೆಕ್ ಸೆಲ್ಯೂಶನ್, ನೀಲನ್ ಇನ್ಪೋಟೆಕ್ ಪ್ರೈ ಲಿಮಿಟೆಡ್, ಮೋಲ್ಟರ್ಸ್ ಎಕ್ಸಿಮ್ ಪ್ರೈವೇಟ್ ಲಿಮಿಟೆಡ್ ಹಾಗೂ ಕ್ರಾಫಿನೇಷನ್ ಕಂಪೆನಿಗಳ ಬ್ಯಾಂಕ್ ಖಾತೆಗೆ ಹಣವನ್ನು ಹೂಡಿಕೆ ಮಾಡಿದ್ದರು.

ಆದರೆ, ಜ.11ರಂದು ಶೇರ್ ಹ್ಯಾಶ್ ಅಪ್ಲಿಕೇಶನ್ ದೋಷಯುಕ್ತ ವ್ಯವಸ್ಥೆಯನ್ನು ಹೊಂದಿದೆ ಮತ್ತು ಹೊಸ ವೈಶಿಷ್ಟ್ಯಗಳೊಂದಿಗೆ ತಮ್ಮ ಅಪ್ಲಿಕೇಶನ್ ಅನ್ನು ಅಪ್‍ಡೇಟ್ ಮಾಡುವ ಅಗತ್ಯವಿದೆ ಎಂದು ವಂಚಕರು ಪ್ರಕಟಿಸಿದ್ದಾರೆ.

ತದನಂತರ, ರಿಟರ್ನ್‍ಗಳನ್ನು ಇನ್-ಆ್ಯಪ್ ವ್ಯಾಲೆಟ್‍ಗೆ ಕ್ರೆಡಿಟ್ ಮಾಡಲಾಗುತ್ತಿದೆ ಎಂದು ನಂಬಿಸಿ ಆ್ಯಪ್ ಸಂವಹನವನ್ನೇ ಕಡಿತಗೊಳಿಸಲಾಗಿತ್ತು. ಈ ಸಂಬಂಧ ವಂಚನೆಗೈದ ದೂರಿನ ಮೇರೆಗೆ ನಗರ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. 
ದೂರಿನನ್ವಯ ಸಿಸಿಬಿ ಡಿಸಿಪಿ ಡಾ.ಶರಣಪ್ಪ ಅವರ ನೇತೃತ್ವದಲ್ಲಿ ವಿಶೇಷ ತಂಡ ಕಾರ್ಯಾಚರಣೆ ಕೈಗೊಂಡು ಜಾಲವನ್ನು ಭೇದಿಸಿ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದೆ ಎಂದು ಆಯುಕ್ತರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News