ರಶ್ಯ ಯೋಧರನ್ನು ಅಶ್ಲೀಲ ಪದದಿಂದ ಅಣಕಿಸಿದ್ದ ಚಿತ್ರವಿರುವ ಸ್ಟ್ಯಾಂಪ್‌ಗೆ ಉಕ್ರೇನ್‌ನಲ್ಲಿ ಭಾರೀ ಬೇಡಿಕೆ

Update: 2022-04-22 16:04 GMT
Photo: Twitter/@doctor_oxford

 ಕೀವ್, ಎ.22: ದೇಶದ ವಿರುದ್ಧ ರಶ್ಯ ನಡೆಸುತ್ತಿರುವ ಆಕ್ರಮಣವನ್ನು ಎದುರಿಸಿ ಶೌರ್ಯ ಮೆರೆದ ತನ್ನ ಯೋಧರ ಗೌರವಾರ್ಥ ಉಕ್ರೇನ್ ಸರಕಾರ ಜಾರಿಗೆ ತಂದಿರುವ ಪೋಸ್ಟ್ ಸ್ಟ್ಯಾಂಪಿನ ಸುಮಾರು 5 ಲಕ್ಷ ಪ್ರತಿಗಳು ಇದುವರೆಗೆ ಮಾರಾಟವಾಗಿವೆ ಎಂದು ಅಧಿಕಾರಿಗಳು ಹೇಳಿದ್ದಾರೆ.

 ಫೆಬ್ರವರಿ 24ರಂದು ರಶ್ಯದ ಆಕ್ರಮಣ ಆರಂಭವಾಗಿತ್ತು. ಆರಂಭದ ದಿನದಲ್ಲಿ ಉಕ್ರೇನ್‌ನ ಮರಿಯುಪೋಲ್ ಬಂದರಿನ ಬಳಿಯ ಕಪ್ಪುಸಮುದ್ರಕ್ಕೆ ಬಂದಿದ್ದ ರಶ್ಯದ ಯುದ್ಧನೌಕೆ ಮೋಸ್ಕ್‌ವಾ, ಶಸ್ತ್ರಾಸ್ತ್ರ ಕೆಳಗಿಟ್ಟು ಶರಣಾಗುವಂತೆ ಬಂದರು ನಗರದಲ್ಲಿ ನಿಯೋಜಿತರಾಗಿದ್ದ ಉಕ್ರೇನ್ ಯೋಧರಿಗೆ ಎಚ್ಚರಿಕೆ ನೀಡಿತ್ತು. ಇದಕ್ಕೆ ತಿರುಗೇಟು ನೀಡಿದ್ದ ಉಕ್ರೇನ್ ಯೋಧರು ಅಶ್ಲೀಲ ಪದ ಬಳಸಿ ನೌಕೆಯಲ್ಲಿದ್ದ ಯೋಧರನ್ನು ಹಂಗಿಸಿ ಅಣಕಿಸಿದ್ದರು.

 ಇದಾದ 2 ತಿಂಗಳ ಬಳಿಕ ಮೋಸ್ಕ್‌ವಾ ಯುದ್ಧನೌಕೆ ಕಪ್ಪು ಸಮುದ್ರದಲ್ಲಿ ಮುಳುಗಿದಾಗ ಉಕ್ರೇನ್ ಯೋಧರು ಮುಳುಗಿದ ಹಡಗಿನತ್ತ ಕೈ ತೋರಿಸುವ ಚಿತ್ರ ಮತ್ತು ಅವರು ಬಳಸಿದ ಪದವನ್ನು ಬದಿಯಲ್ಲಿ ಹೊಂದಿದ ಪೋಸ್ಟ್ ಸ್ಟಾಂಪನ್ನು ಉಕ್ರೇನ್ ಸರಕಾರ ಬಿಡುಗಡೆಗೊಳಿಸಿದೆ. ಈ ಸ್ಟ್ಯಾಂಪ್‌ಗೆ ಬೇಡಿಕೆ ಹೆಚ್ಚಿದ್ದು ಈಗಾಗಲೇ 5 ಲಕ್ಷದಷ್ಟು ಸ್ಟ್ಯಾಂಪ್ ಮಾರಾಟವಾಗಿವೆ . ಉಕ್ರೇನ್ ಯುದ್ಧದ ಈ ಅಪ್ರತಿಮ ಕ್ಷಣದ ಗೌರವಾರ್ಥ ಬಿಡುಗಡೆಗೊಳಿಸಿದ ಸ್ಟ್ಯಾಂಪ್ ಖರೀದಿಸಲು ಅಂಚೆಕಚೇರಿಯೆದುರು ಜನ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.

 ನಮ್ಮ ದೇಶದ ಬಗ್ಗೆ ಇಷ್ಟರ ಮಟ್ಟಿನ ಹೆಮ್ಮೆಯ ಭಾವನೆ ಇದುವರೆಗೆ ನನಗಾಗಿಲ್ಲ. ಈ ಸ್ಟ್ಯಾಂಪ್ ನಮ್ಮ ಧೈರ್ಯ ಮತ್ತು ದೃಢತೆಯ ಸಂಕೇತವಾಗಿದೆ ಎಂದು ಉಕ್ರೇನ್ ನಾಗರಿಕರು ಹೆಮ್ಮೆಪಟ್ಟುಕೊಳ್ಳುತ್ತಿರುವುದಾಗಿ ದಿ ಗಾರ್ಡಿಯನ್ ಪತ್ರಿಕೆ ವರದಿ ಮಾಡಿದೆ. ಕೀವ್‌ನ ಪ್ರಧಾನ ಅಂಚೆಕಚೇರಿಯಲ್ಲಿ ಈ ಸ್ಟ್ಯಾಂಪ್ ದೊರಕುತ್ತದೆ. 10 ಲಕ್ಷ ಸ್ಟ್ಯಾಂಪ್ ಮುದ್ರಿಸಿದ್ದು ಆರಂಭದ 5 ದಿನವೇ 5 ಲಕ್ಷಕ್ಕೂ ಹೆಚ್ಚು ಮಾರಾಟವಾಗಿದೆ. ಇದನ್ನು ಮರುಮುದ್ರಿಸುವ ಯೋಜನೆಯಿಲ್ಲ. ಆದ್ದರಿಂದ ಈ ಪ್ರತಿಯೊಂದು ಸ್ಟ್ಯಾಂಪ್ ಕೂಡಾ ಚಾರಿತ್ರಿಕ ಮೌಲ್ಯವನ್ನು ಹೊಂದಿದೆ. ಇಲ್ಲಿ ಬಳಸಿರುವ ಪದಗಳು ಅಶ್ಲೀಲವಲ್ಲ, ಬಲಿಷ್ಟ ಸಂದೇಶ ಸಾರುವ ಪದಗಳಿವು ಎಂದು ಉಕ್ರೇನ್‌ನ ಅಂಚೆ ಇಲಾಖೆ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News