ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಬಿಡುಗಡೆಗೆ ಆಗ್ರಹಿಸಿ ಕೊಕ್ರಝಾರ್ ಪೊಲೀಸ್ ಠಾಣೆ ಎದುರು ಕಾಂಗ್ರೆಸ್ ಧರಣಿ

Update: 2022-04-22 16:35 GMT

ಕೊಕ್ರಝಾರ್, ಎ. 22: ಅಸ್ಸಾಂನ ಕೊಕ್ರಝಾರ್ ಜಿಲ್ಲೆಯಲ್ಲಿರುವ ನ್ಯಾಯಾಲಯ ಗುಜರಾತ್ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಪೊಲೀಸ್ ಕಸ್ಟಡಿಗೆ ನೀಡಿದ ಒಂದು ದಿನದ ಬಳಿಕ ಮೇವಾನಿ ಅವರನ್ನು ವಶಕ್ಕೆ ತೆಗೆದುಕೊಂಡ ಕೊಕ್ರಝಾರ್ ಪೊಲೀಸ್ ಠಾಣೆಯ ಹೊರಗೆ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ ಧರಣಿ ನಡೆಸಿದ್ದಾರೆ. 

ಮೇವಾನಿ ಅವರ ಕಾನೂನು ಬಾಹಿರ ಬಂಧನ ವಿರೋಧಿಸಿರುವ ಪಕ್ಷದ ಸದಸ್ಯರು ಅವರನ್ನು ಕೂಡಲೇ ಬಿಡುಗಡೆ ಮಾಡುವಂತೆ ಆಗ್ರಹಿಸಿದರು. ಅವರು ಬಿಜೆಪಿ ಸರಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಘೋಷಣೆಗಳನ್ನು ಕೂಗಿದರು. ಪ್ರಧಾನಿ ನರೇಂದ್ರ ಮೋದಿ ವಿರುದ್ಧದ ಅವರ ಉದ್ದೇಶಪೂರ್ವಕ ಟ್ವೀಟ್ ಕುರಿತಂತೆ ಕೊಕ್ರಝಾರ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಿದ ಬಳಿಕ ಬುಧವಾರ ರಾತ್ರಿ ಗುಜರಾತ್‌ನ ಪಾಲನ್ಪುರ ಪಟ್ಟಣದಿಂದ ಮೇವಾನಿ ಅವರನ್ನು ವಶಕ್ಕೆ ತೆಗೆದುಕೊಳ್ಳಲಾಗಿತ್ತು. 

ಪ್ರಧಾನಿ ನರೇಂದ್ರ ಮೋದಿ ಅವರು ‘‘ಗೋಡ್ಸೆಯನ್ನು ದೇವರು ಎಂದು ಪರಿಗಣಿಸಿದ್ದಾರೆ’’ ಎಂದು ಪ್ರತಿಪಾದಿಸಿ ಮೇವಾನಿ ಅವರು ಉದ್ದೇಶಪೂರ್ವಕವಾಗಿ ಟ್ವೀಟ್ ಮಾಡಿದ್ದಾರೆ ಎಂದು ಎಫ್‌ಐಆರ್‌ನಲ್ಲಿ ಹೇಳಲಾಗಿದೆ. ಮೇವಾನಿ ಅವರನ್ನು ಗುರುವಾರ ಬೆಳಗ್ಗೆ ಗುಜರಾತ್‌ನಿಂದ ಗುವಾಹತಿಗೆ ಕರೆದೊಯ್ಯಲಾಯಿತು. ಅನಂತರ ರಸ್ತೆಯ ಮೂಲಕ ಕೊಕ್ರಝಾರ್‌ಗೆ ಕರೆದೊಯ್ಯಲಾಯಿತು. ಅಲ್ಲಿ ನ್ಯಾಯಾಂಗ ದಂಡಾಧಿಕಾರಿ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಯಿತು. ಅವರು ಮೇವಾನಿ ಅವರಿಗೆ ಮೂರು ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದ್ದಾರೆ. 

ಪ್ರತಿಭಟನೆಯ ನೇತೃತ್ವ ವಹಿಸಿದ್ದ ಅಸ್ಸಾಂ ಪ್ರದೇಶ ಕಾಂಗ್ರೆಸ್ ಸಮಿತಿ (ಎಪಿಸಿಸಿ)ಯ ಕಾರ್ಯಾಧ್ಯಕ್ಷ ಹಾಗೂ ಶಾಸಕ ಜಾಕಿರ್ ಹುಸೈನ್ ಸಿಕ್ದರ್, ಗುಜರಾತ್‌ನಲ್ಲಿ ಮೇವಾನಿ ಅವರ ಪ್ರಭಾವವನ್ನು ತಡೆಯಲು ಅವರನ್ನು ಬಂಧಿಸಲಾಯಿತು ಎಂದಿದ್ದಾರೆ. ‘‘ಗುಜರಾತ್‌ನಲ್ಲಿ ಬಿಜೆಪಿ ಸೋತರೆ, ನರೇಂದ್ರ ಮೋದಿ ಅವರ ಹೆಮ್ಮೆಗೆ ಹೊಡೆತ ಬೀಳಲಿದೆ. ಮೇವಾನಿ ಅವರು ಜನರ ಮೇಲೆ ಹೆಚ್ಚು ಪ್ರಭಾವ ಬೀರಿದ್ದಾರೆ. ಆದುದರಿಂದ ಇದು ಅವರನ್ನು ಜನರಿಂದ ದೂರ ಇರಿಸುವ ತಂತ್ರ’’ ಎಂದು ಸಿಕ್ದರ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News