×
Ad

ಸಂಚಾರ ಠಾಣೆಯಲ್ಲಿ ಪೊಲೀಸರ ಹೊಡೆದಾಟ ಪ್ರಕರಣ: ತನಿಖೆ ನಡೆಸಿ ಸೂಕ್ತ ಕ್ರಮ; ಕಮಿಷನರ್ ಶಶಿಕುಮಾರ್

Update: 2022-04-25 23:39 IST
ಪೊಲೀಸ್ ಕಮಿಷನರ್ ಶಶಿಕುಮಾರ್

ಮಂಗಳೂರು, ಎ.25: ನಗರದ ಸಂಚಾರ ಪೊಲೀಸ್ ಠಾಣೆಯೊಂದರಲ್ಲಿ ಸೋಮವಾರ ಬೆಳಗ್ಗೆ ಹಿರಿಯ ಮತ್ತು ಕಿರಿಯ ಪೊಲೀಸ್ ಸಿಬ್ಬಂದಿ ಮಧ್ಯೆ ಹಲ್ಲೆ ನಡೆದ ಘಟನೆ ವರದಿಯಾಗಿದೆ. ಗಾಯಾಳು ಹಿರಿಯ ಸಿಬ್ಬಂದಿ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಈ ಕುರಿತು ಅಧೀನ ಅಧಿಕಾರಿಗಳ ವರದಿ ಪಡೆದು ಸೂಕ್ತ ವಿಚಾರಣೆಯ ಬಳಿಕ ಕ್ರಮ ಕೈಗೊಳ್ಳುವುದಾಗಿ ಪೊಲೀಸ್ ಕಮಿಷನರ್ ಶಶಿಕುಮಾರ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಸೋಮವಾರ ಬೆಳಗ್ಗಿನ ಗಸ್ತು ಕರ್ತವ್ಯಕ್ಕೆ ಸಂಬಂಧಿಸಿ ಠಾಣೆಗೆ ಆಗಮಿಸಿದ ಕಿರಿಯ ಸಿಬ್ಬಂದಿ, ಹಿರಿಯ ಸಿಬ್ಬಂದಿಯ ಮೇಲೆ ರೇಗಾಡಿ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಬಳಿಕ ಅಲ್ಲಿದ್ದ ಇತರ ಸಿಬ್ಬಂದಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ ಎಂದು ಹೇಳಲಾಗುತ್ತಿದೆ.

ಈ ಹಿಂದೆಯೂ ಕಿರಿಯ ಸಿಬ್ಬಂದಿಯ ಮೇಲೆ ಅನುಚಿತ ವರ್ತನೆಯ ಆರೋಪ ಕೇಳಿಬಂದಿತ್ತು. ಈ ಬಗ್ಗೆ ಹಿರಿಯ ಅಧಿಕಾರಿಗಳು ಕ್ರಮ ಕೈಗೊಳ್ಳದೆ ನಿರ್ಲಕ್ಷ ತೋರಿರುವುದರಿಂದ ಇಂತಹ ಘಟನೆ ಮರುಕಳಿಸಿದೆ ಎಂಬ ಮಾತು ಪೊಲೀಸ್ ವಲಯದಿಂದ ಕೇಳಿ ಬಂದಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News