ಅಂತರ್‌ರಾಷ್ಟ್ರೀಯ ಅರ್ಥಶಾಸ್ತ್ರಜ್ಞನಿಗೆ ನೀತಿ ಆಯೋಗದ ಪಟ್ಟ

Update: 2022-04-26 09:49 GMT

ಮೋದಿ ಸರಕಾರದ ಸಾರ್ವಜನಿಕ ನೀತಿಯ ಚಿಂತನ ಚಿಲುಮೆ (ಥಿಂಕ್ ಟ್ಯಾಂಕ್) ಮೇ 1ರಿಂದ ನೂತನ ಉಪಾಧ್ಯಕ್ಷರನ್ನು ಹೊಂದಲಿದೆ. ಖ್ಯಾತ ಅರ್ಥಶಾಸ್ತ್ರಜ್ಞರಾದ ಸುಮನ್ ಕೆ. ಬೆರಿ ಅವರು ರಾಜೀವ್ ಕುಮಾರ್‌ರಿಂದ ಅಧಿಕಾರವನ್ನು ಸ್ವೀಕರಿಸಲಿದ್ದಾರೆ.

2017ರ ಆಗಸ್ಟ್‌ನಲ್ಲಿ ಅರವಿಂದ ಪನಗಾರಿಯಾ ಅವರ ಉತ್ತರಾಧಿಕಾರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ರಾಜೀವ್ ಕುಮಾರ್, ಶೈಕ್ಷಣಿಕ ವಲಯಕ್ಕೆ ವಾಪಸಾಗಲು ನಿರ್ಧರಿಸಿದ್ದು, ನೀತಿ ಆಯೋಗಕ್ಕೆ ತನ್ನ ರಾಜೀನಾಮೆಯನ್ನು ಶುಕ್ರವಾರ ಪ್ರಕಟಿಸಿದ್ದಾರೆ. ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ಬೆರಿ ತುಂಬಲಿದ್ದಾರೆ.

ನೀತಿ ಆಯೋಗವು ಸರಕಾರದ ಯೋಜನೆಗಳನ್ನು ಹಾಗೂ ಕಾರ್ಯಕ್ರಮಗಳ ಅನುಷ್ಠಾನ ಹಾಗೂ ವೌಲ್ಯಮಾಪನದಲ್ಲಿ ಮಹತ್ವದ ಪಾತ್ರ ವಹಿಸುತ್ತದೆ. ಪ್ರತಿಷ್ಠಿತ ಅಂತರ್‌ರಾಷ್ಟ್ರೀಯ ಸಂಸ್ಥೆಗಳಲ್ಲಿ ಪ್ರಮುಖ ಹುದ್ದೆಗಳನ್ನು ನಿರ್ವಹಿಸಿರುವ ಬೆರಿ ಅವರ ನೇಮಕವು ನೀತಿ ಆಯೋಗಕ್ಕೆ ಹೊಸ ಆಯಾಮವನ್ನು ನೀಡಲಿದೆಯೆಂಬ ನಿರೀಕ್ಷೆ ವ್ಯಕ್ತವಾಗಿದೆ.

ಆಕ್ಸ್‌ಫರ್ಡ್ ವಿಶ್ವವಿದ್ಯಾನಿಲಯದ ಮ್ಯಾಗ್ದಲೀನ್ ಕಾಲೇಜ್‌ನಲ್ಲಿ ರಾಜಕೀಯ, ತತ್ವಜ್ಞಾನ ಹಾಗೂ ಅರ್ಥಶಾಸ್ತ್ರದ ಪದವೀಧರರಾದ ಬೆರಿ ಅವರು 1972ರಿಂದ 2000ನೇ ಇಸವಿಯವರೆಗೆ ವಿಶ್ವಬ್ಯಾಂಕ್‌ನ ವಿವಿಧ ಹುದ್ದೆಗಳಲ್ಲಿ ಕಾರ್ಯನಿರ್ವಹಿಸಿದ್ದರು. ವಿಶ್ವಬ್ಯಾಂಕ್‌ನ ಸಾರ್ವಜನಿಕ ಹಣಕಾಸು ವಿಭಾಗದ ಆರ್ಥಶಾಸ್ತ್ರಜ್ಞರಾಗಿ ಹಾಗೂ ಲ್ಯಾಟಿನ್ ಅಮೆರಿಕದಲ್ಲಿ ವಿಶ್ವಬ್ಯಾಂಕ್‌ನ ಕಾರ್ಯಾಚರಣೆಗಳಿಗಾಗಿನ ವಿವಿಧ ಹುದ್ದೆಗಳನ್ನು ಕೂಡಾ ಅವರು ನಿರ್ವಹಿಸಿದ್ದರು.

ಭಾರತೀಯ ಉದಾರೀಕರಣದ ಯುಗದಲ್ಲಿ ಅಂದರೆ 1992-1994ರವರೆಗೆ, ಬೆರಿ ಅವರು ವಿಶ್ವಬ್ಯಾಂಕ್‌ನಲ್ಲಿ ರಜೆಯಲ್ಲಿದ್ದಾಗ ಬಾಂಬೆಯಲ್ಲಿರುವ ಭಾರತೀಯ ರಿಸರ್ವ್ ಬ್ಯಾಂಕ್‌ನ ವಿಶೇಷ ಸಮಾಲೋಚಕರಾಗಿ ಕಾರ್ಯನಿರ್ವಹಿಸಿದ್ದರು.
2001ರಲ್ಲಿ ಭಾರತಕ್ಕೆ ವಾಪಸಾದ ಬೆರಿ ಅವರು ಆರ್ಥಿಕತೆಯ ಬಗ್ಗೆ ಗಮನಹರಿಸುವ ಲಾಭರಹಿತ ಚಿಂತನಚಿಲುಮೆಯಾದ 'ಅನ್ವಯಿಕ ಅರ್ಥಶಾಸ್ತ್ರ ಸಂಶೋಧನೆಗಾಗಿನ ರಾಷ್ಟ್ರೀಯ ಮಂಡಳಿ' (ಎನ್‌ಸಿಎಇಆರ್)ಯಲ್ಲಿ ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. 2011ರವರೆಗೂ ಅವರು ಆ ಹುದ್ದೆಯಲ್ಲಿ ಸೇವೆ ಸಲ್ಲಿಸಿದ್ದರು.

''ಡಾ. ಬೆರಿ ಅವರು ಅತ್ಯುತ್ತಮ ಸ್ಥೂಲ ಅರ್ಥಶಾಸ್ತ್ರಜ್ಞ (ಮ್ಯಾಕ್ರೊ ಇಕನಾಮಿಸ್ಟ್)'' ಎಂದು ಖ್ಯಾತ ಅರ್ಥಶಾಸ್ತ್ರಜ್ಞೆ ಇಳಾ ಪಟ್ನಾಯಕ್ ಹೇಳುತ್ತಾರೆ. ''ನಾವು ಹಲವು ವರ್ಷಗಳಿಂದ ಸಂಪರ್ಕದಲ್ಲಿದ್ದೆವು. ನಾವು ಕೇವಲ ಎನ್‌ಸಿಎಇಆರ್‌ಗೆ ಮಾತ್ರವಲ್ಲ ಇತರ ಹಲವಾರು ವಿಷಯಗಳಲ್ಲಿಯೂ ಜೊತೆಯಾಗಿ ಕೆಲಸ ಮಾಡಿದ್ದೆವು'' ಎಂದವರು ಹೇಳುತ್ತಾರೆ. ಬೆರಿ ಅವರು ಪ್ರಧಾನಿಯವರ ಆರ್ಥಿಕ ಸಲಹಾ ಮಂಡಳಿ, ಆರ್‌ಬಿಐನ ತಾಂತ್ರಿಕ ಸಲಹಾ ಸಮಿತಿ ಹಾಗೂ ರಾಷ್ಟ್ರೀಯ ಅಂಕಿಅಂಶ ಆಯೋಗದ ಸದಸ್ಯರೂ ಆಗಿದ್ದಾರೆ.

ಸುಮನ್ ಬೆರಿ ಅವರು ನೆದರ್‌ಲ್ಯಾಂಡ್‌ನ ಹೇಗ್‌ನಲ್ಲಿ ಬಹುರಾಷ್ಟ್ರೀಯ ತೈಲ ಹಾಗೂ ನೈಸರ್ಗಿಕ ಅನಿಲ ಮಾರಾಟ ಸಂಸ್ಥೆ 'ಶೆಲ್ ಇಂಟರ್‌ನ್ಯಾಶನಲ್'ನ ಮುಖ್ಯ ಅರ್ಥಶಾಸ್ತ್ರಜ್ಞರೂ ಆಗಿದ್ದರು. 2012ರ ಆರಂಭದಿಂದ 2016ರ ಮಧ್ಯಂತರದವರೆಗೆ ಅವರು ಬ್ರುಸೆಲ್‌ನಿಂದ ಕಾರ್ಯಾಚರಿಸುತ್ತಿರುವ ಅರ್ಥಶಾಸ್ತ್ರದ 'ಚಿಂತನಚಿಲುಮೆ' ಬ್ರುಯೆಗೆಲ್‌ನಲ್ಲಿ ಅನಿವಾಸಿ ಸಂಶೋಧನಾರ್ಥಿಯಾಗಿದ್ದರು. ಅಲ್ಲದೆ ಮಾಸ್ಟರ್‌ಕಾರ್ಡ್ ಸೆಂಟರ್ ಫಾರ್ ಇನ್‌ಕ್ಲೂಸಿವ್ ಗ್ರೋಥ್‌ನ ಹಿರಿಯ ಫೆಲೋ ಆಗಿದ್ದರು.

''ಜಾಗತಿಕ ಆರ್ಥಿಕ ಹಾಗೂ ರಾಜಕೀಯ ಬೆಳವಣಿಗೆಗಳ ಕುರಿತ ರಾಯಲ್ ಡಚ್ ಶೆಲ್ ಸಂಸ್ಥೆಯ ಆಡಳಿತ ಹಾಗೂ ನಿರ್ವಹಣಾ ವಿಭಾಗಕ್ಕೆ ಸಲಹೆಗಾರರಾಗಿಯೂ ಸೇವೆ ಸಲ್ಲಿಸಿದ್ದರು. ಶೆಲ್ ಸಂಸ್ಥೆಯಲ್ಲಿನ ತನ್ನ ಅಧಿಕಾರಾವಧಿಯಲ್ಲಿ ಬೆರಿ ಅವರು ಆ ಕಂಪೆನಿಯ ಜಾಗತಿಕ ವಿದ್ಯಮಾನಗಳ ಕುರಿತ ಸಮಿತಿಯ ಹಿರಿಯ ನಾಯಕತ್ವದ ಭಾಗವಾಗಿದ್ದರು. ಶೆಲ್‌ನಲ್ಲಿದ್ದಾಗ ಅವರು ಅಲ್ಲಿನ ಮಾದರಿಯನ್ನು ಭಾರತೀಯ ಇಂಧನ ವಲಯಗಳಲ್ಲಿ ಅನ್ವಯಿಸುವುದಕ್ಕಾಗಿ ಭಾರತೀಯ 'ಥಿಂಕ್‌ಟ್ಯಾಂಕ್' ಸಂಸ್ಥೆಗಳ ಜೊತೆಗೆ ಕಾರ್ಯನಿರ್ವಹಿಸಿದ್ದರು ಎಂದು ಇಂಡಿಯಾ ಟುಡೇ ಪತ್ರಿಕೆಯು ವರದಿ ಮಾಡಿದೆ.

2003ರಿಂದ 2020ರವರೆಗೆ ಬೆರಿ ಅವರು ನಿಯಮಿತವಾಗಿ ಬ್ಯುಸಿನೆಸ್ ಸ್ಟಾಂಡರ್ಡ್ ಪತ್ರಿಕೆಗೆ ಭಾರತದೊಳಗೆ ಹಾಗೂ ಜಾಗತಿಕವಾಗಿ ಆರ್ಥಿಕ ಹಾಗೂ ಹಣಕಾಸು ನೀತಿಗಳ ಕುರಿತಾಗಿ ಅಂಕಣಗಳನ್ನು ಹಾಗೂ ಅಭಿಪ್ರಾಯ ಲೇಖನಗಳನ್ನು ಬರೆದಿದ್ದಾರೆ.

ಜಿ20ಗೆ ವಿರೋಧ

ಜಾಗತಿಕ ಆರ್ಥಿಕ ನೀತಿಯನ್ನು ರೂಪಿಸುವಲ್ಲಿ ಜಿ20ಯ ಪಾತ್ರದ ಕುರಿತು ಡಾ. ಬೆರಿ ಅವರು ವಿಸ್ತೃತವಾಗಿ ಬರೆದಿದ್ದರು. 2018ರಲ್ಲಿ ಜಾಗತಿಕ ಸವಾಲುಗಳನ್ನು ಎದುರಿಸಲು ಹಾಗೂ ಬೆಳವಣಿಗೆಯಲ್ಲ್ಲಿ ಸ್ಥಿರತೆ ಸಾಧಿಸುವ ಗುರಿಯನ್ನು ಈಡೇರಿಸಲು ಭಾರತ ಹಾಗೂ ಚೀನಾ ನಡುವೆ ಸಂಭಾಷಣೆ ಹಾಗೂ ಸಹಕಾರದ ವೃದ್ಧಿಯ ಅಗತ್ಯವನ್ನು ಅವರು ಪ್ರತಿಪಾದಿಸಿದ್ದರು. 'ಸಂಪನ್ಮೂಲಗಳ ಬಳಕೆ ಹಾಗೂ ಆರ್ಥಿಕ ಪರಿಣಾಮಗಳ ನಡುವೆ ಉತ್ತಮ ಸಮತೋಲನವನ್ನು ಕಾಪಾಡಲು ಜಿ20ಯ ಸ್ವಯಂ ಪ್ರಕ್ರಿಯೆಗಳಲ್ಲಿ ಸುಧಾರಣೆಯನ್ನು ಸಾಧಿಸುವ ಅಗತ್ಯವಿದೆಯೆಂದು ಅವರು ಅಂಕಣವೊಂದರಲ್ಲಿ ಪ್ರತಿಪಾದಿಸಿದ್ದರು.

ಕೆಲವು ವರ್ಷಗಳ ಆನಂತರ ಅಂದರೆ 2021ರ ಅಕ್ಟೋಬರ್‌ನಲ್ಲಿ ಅವರು ಕೋವಿಡ್-19 ಸಾಂಕ್ರಾಮಿಕದ ಹಾವಳಿಯಿಂದ ಉಂಟಾದ ಪರಿಣಾಮಗಳಿಗೆ ಜಿ20 ಸಮೂಹ ಆರ್ಥಿಕವಾಗಿ ಸ್ಪಂದಿಸಿದ ರೀತಿ ಹಾಗೂ ಜಗತ್ತಿನ ಬಡರಾಷ್ಟ್ರಗಳಿಗೆ ನೆರವು ನೀಡಲು ಅದು ವಿಫಲವಾಗಿರುವುದನ್ನು ಬೆರಿ ಕಟುವಾಗಿ ಟೀಕಿಸಿದ್ದರು.
''ಲಸಿಕೆಗಳನ್ನು ಪಡೆದುಕೊಳ್ಳಲು ಜನತೆ ಆರ್ಥಿಕವಾಗಿ ಪುನಶ್ಚೇತನಗೊಳ್ಳುವುದು ಕೂಡಾ ಅತ್ಯಂತ ಅಗತ್ಯವಾಗಿದೆ'' ಎಂದವರ ಸಂಶೋಧನಾ ವಿಶ್ಲೇಷಕ ಪೌಲಿನ್ ವೆಯಿಲ್ ಅವರ ಜೊತೆಗೂಡಿ ಬರೆದ ಲೇಖನದಲ್ಲಿ ತಿಳಿಸಿದ್ದಾರೆ. ''ಜಾಗತಿಕವಾಗಿ ಲಸಿಕೆಗಳ ಲಭ್ಯತೆಯನ್ನು ಖಾತರಿಪಡಿಸುವಲ್ಲಿ ತನ್ನ ಬದ್ಧತೆಯನ್ನು ಜಿ20 ಮರುದೃಢೀಕರಿಸಿತ್ತಾದರೂ, ಈವರೆಗೆ ಲಸಿಕೆಗಳಿಗೆ ವಿಧಿಸಲಾದ ದರಗಳಲ್ಲಿ ಭಾರೀ ಲೋಪದೋಷಗಳಿರುವುದನ್ನು ತಪ್ಪಿಸಿಕೊಳ್ಳುವಲ್ಲಿ ಅದು ಸಫಲವಾಗಿದೆ. ಬಡ ದೇಶಗಳಲ್ಲಿನ ಆರೋಗ್ಯ ಬಿಕ್ಕಟ್ಟನ್ನು ಸ್ಪಂದಿಸುವಲ್ಲಿ ನಿರಂತರವಾದ ಲೋಪದೋಷಗಳಿಗೆ ಸ್ಪಂದಿಸಲು ಜಿ20 ಸೂಕ್ತವಾದ ವೇದಿಕೆಯಾಗಿದೆ. ಮುಂದಿನ ಜಿ20 ಅಧಿವೇಶನಗಳ ಅಧ್ಯಕ್ಷತೆಯನ್ನು ಕ್ರಮವಾಗಿ ಇಂಡೋನೇಶ್ಯ (2022) ಹಾಗೂ ಭಾರತ (2023) ವಹಿಸಿಕೊಳ್ಳಲಿವೆ. ಈ ಹಿನ್ನೆಲೆಯಲ್ಲಿ ಕೇವಲ ಹವಾಮಾನ ಮಾತ್ರವಲ್ಲದೆ ಚರ್ಚೆಗೆ ಬರುವ ಎಲ್ಲಾ ವಿಷಯಗಳಲ್ಲಿಯೂ ಜಾಗತಿಕ ಏಕತೆಯನ್ನು ಬೆಂಬಲಿಸುವ ರಾಜತಾಂತ್ರಿಕತೆಯನ್ನು ಕಾರ್ಯಗತಗೊಳಿಸಬೇಕಾಗಿದೆ.
ನಿಕಟ ಭವಿಷ್ಯದಲ್ಲಿ ಭಾರತದ ಆರ್ಥಿಕ ರಾಜತಾಂತ್ರಿಕ ಆರ್ಥಿಕತೆಯ ಮಹತ್ವದ ಬಗ್ಗೆಯೂ ಬೆರಿ ಅವರು ವಿಸ್ತೃತವಾದ ಲೇಖನಗಳನ್ನು ಬರೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News