×
Ad

ಭಯೋತ್ಪಾದನೆ ಎದುರಿಸುವ ಶಕ್ತಿಯನ್ನು ಅಳವಡಿಸಿಕೊಳ್ಳುವುದು ಅವಶ್ಯ: ಸಿಎಂ ಬೊಮ್ಮಾಯಿ

Update: 2022-04-26 00:23 IST

ಬೆಂಗಳೂರು, ಎ.25: ಭಯೋತ್ಪಾದನೆ ಎಂಬ ಪಿಡುಗು ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ, ಜಾಗತಿಕವಾಗಿ ಹರಡಿದೆ. ಇದನ್ನು ಈ ಜಗತ್ತಿನ ಪ್ರತಿಯೊಬ್ಬ ನಾಗರಿಕನೂ ಎದುರಿಸುವ ಶಕ್ತಿಯನ್ನು ಪಡೆದುಕೊಳ್ಳಬೇಕು. ಅಂಥ ಶಕ್ತಿಯನ್ನು ಗೊ.ರು.ಚನ್ನಬಸಪ್ಪ ಅವರು ಬರೆದಿರುವ ಪುಸ್ತಕ ನೀಡುತ್ತದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ. 

ಸೋಮವಾರ ಕರ್ನಾಟಕ ಸಾಹಿತ್ಯ ಪರಿಷತ್ತು, ಬೆಂಗಳೂರು ವತಿಯಿಂದ ಆಯೋಜಿಸಿರುವ ಹಿರಿಯ ಸಾಹಿತಿಗಳಾದ ನಾಡೋಜ ಗೊ.ರು.ಚನ್ನಬಸಪ್ಪ ಅವರು ಕನ್ನಡಕ್ಕೆ ಅನುವಾದಿಸಿರುವ ‘ಭಯೋತ್ಪಾದನೆ ಮತ್ತು ಭಯೋತ್ಪಾದಕ ಬೆದರಿಕೆಗೆ ಪ್ರತಿರೋಧ’ ಎಂಬ ಕೃತಿಯನ್ನು ಲೋಕಾರ್ಪಣೆ ಗೊಳಿಸಿ ಮಾತನಾಡಿದರು.

ಗೊ.ರು.ಚ ಅವರು ಅತ್ಯಂತ ಸೂಕ್ಷ್ಮ ಜೀವಿಗಳು. ಜಾಗತೀಕರಣದ ಒಟ್ಟು ಪ್ರಭಾವ, ಗೊ.ರು.ಚ ಅವರಂಥ ಹಿರಿಯರ ಸೂಕ್ಷ್ಮತೆಯನ್ನೂ ಮೀರಿದೆ. ಅಪರೂಪ ಸಾಹಿತಿ ಸಂಶೋಧಕರು,  ಸಾಂಸ್ಕೃತಿಕ ರಾಯಭಾರಿ ರಣಜಿತ್ ಕೆ. ಪಚ್ನಂದ ಅವರು ರಚಿಸಿರುವ ಕೃತಿಯನ್ನು ಅರ್ಥಪೂರ್ಣವಾಗಿ ಸ್ಪಷ್ಟವಾದ ಉದ್ದೇಶವನ್ನಿಟ್ಟುಕೊಂಡು ಬರೆದಿದ್ದಾರೆ. ಭಯೋತ್ಪಾದನೆಯ ಬಗ್ಗೆ ಎಲ್ಲರೂ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು. ಅದನ್ನು ನಿಗ್ರಹಿಸುವ ಶಕ್ತಿಯನ್ನು ಪಡೆದುಕೊಳ್ಳಬೇಕೆಂದು ಅತ್ಯುತ್ತಮವಾಗಿ ಅನುವಾದ ಮಾಡಿದ್ದಾರೆ. ಯಾವುದೇ ವಿಚಾರವಿದ್ದರೂ ಸ್ಪಷ್ಟವಾಗಿ, ಸರಳವಾಗಿ ಜನರಿಗೆ ಮುಟ್ಟಿಸುವ ಕೆಲಸವನ್ನು ಮಾಡಿದ್ದಾರೆ. ಪ್ರತಿರೋಧ ಇದ್ದಲ್ಲಿ ಸತ್ಯ ಹೊರಗೆ ಬಂದು ಜಯ ಸಿಗುತ್ತದೆ. ಅದಕ್ಕೆ ಈ ಪುಸ್ತಕ ಸ್ಪೂರ್ತಿ ತುಂಬುತ್ತದೆ. ಈ ಪುಸಕ್ತದ ಅನುವಾದ ಮಾಡಿದ್ದಕ್ಕಾಗಿ ಗೊ.ರು.ಚ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದರು. 

ಜ್ವಲಂತ ಸಮಸ್ಯೆಗೆ ಕನ್ನಡಿ ಹಿಡಿದ ಕೃತಿ: ಗೊ.ರು.ಚನ್ನಬಸಪ್ಪ ಅವರು ತಮ್ಮ ಕೃತಿಯ ಮೂಲಕ ಸಮಕಾಲೀನ, ಪ್ರಚಲಿತ, ಜ್ವಲಂತ ಸಮಸ್ಯೆಗೆ ಕನ್ನಡಿ ಹಿಡಿದು ಜಾಗೃತಿ ಮೂಡಿಸುವ ಕೆಲಸ ಮಾಡಿದ್ದಾರೆ. ನಮ್ಮಲ್ಲಿ ಭಯ ಇದೆ. ಶ್ರೀಮಂತರಿಗೆ ಹಣ ಕಳೆದುಕೊಳ್ಳುವ ಭಯ, ರಾಜಕಾರಣಿಗೆ ಪದವಿ ಕಳೆದುಕೊಳ್ಳುವ ಭಯ. ಈ ನಕಾರಾತ್ಮಕ ಭಾವನೆ ಭಯಕ್ಕೆ ನಾಂದಿಯಾಗುತ್ತದೆ. ಭಯದಿಂದ ಭಯೋತ್ಪಾದನೆ ಹುಟ್ಟುತ್ತದೆ. ಭಯೋತ್ಪಾದನೆ ಜಗತ್ತನ್ನು ವಿನಾಶದತ್ತ ತೆಗೆದುಕೊಂಡು ಹೋಗುವ ಭಯ. ಹಿಂಸೆಯಿಂದ ಸಾಧನೆ ಮಾಡಬಹುದು ಎಂಬ ಭಾವನೆ ದೊಡ್ಡ ದುರಂತ. ಮನುಷ್ಯನಿಗೆ ಜೀವ ಕೊಡುವ ಅಧಿಕಾರವಿಲ್ಲವೆಂದ ಮೇಲೆ ಜೀವ ತೆಗೆಯುವ ಅಧಿಕಾರವೂ ಇರುವುದಿಲ್ಲ. ಆದರೆ ಇದನ್ನು ಮೀರಿ ಧರ್ಮದ ಹೆಸರಿನಲ್ಲಿ ಭಯೋತ್ಪಾದನೆ ಚಟುವಟಿಕೆ ನಡೆಯುತ್ತಿದೆ. ಒಂದಷ್ಟು ಜನರನ್ನು ಕೊಲ್ಲುವ ಮೂಲಕ ಸ್ವರ್ಗ ಪ್ರಾಪ್ತಿಯಾಗುತ್ತದೆ ಎನ್ನುವ ಕಲ್ಪನೆಯಿಂದ ದುರಂತಗಳು ಸಂಭವಿಸುತ್ತವೆ ಎಂದರು.  ಪ್ರತಿಯೊಬ್ಬ ನಾಗರಿಕರೂ ಜಾಗೃತರಾಗಬೇಕು: ಸಹಜವಾದ ಸಾಮಾಜಿಕ ವ್ಯವಸ್ಥೆಯಡಿ ಭಯೋತ್ಪಾದಕರು ಬರುವುದಿಲ್ಲ. ವೈಯಕ್ತಿಕವಾಗಿ, ಸಾಮಾಜಿಕವಾಗಿ ವೈಚಾರಿಕವಾಗಿ ಭಯೋತ್ಪಾದನೆಯನ್ನು ಎದುರಿಸಬೇಕಾಗುತ್ತದೆ. ಪ್ರತಿಯೊಬ್ಬ ನಾಗರಿಕರೂ ಜಾಗೃತರಾಗಿ ತಮ್ಮ ಕರ್ತವ್ಯ ನಿಭಾಯಿಸಬೇಕು. ಜನರು ಸ್ಪಂದನಾಶೀಲರಾಗಬೇಕು ಹಾಗೂ ಇಂತಹ ಚಟುವಟಿಕೆಗಳನ್ನು ಸಾಮೂಹಿಕವಾಗಿ ಎದುರಿಸಬೇಕು. ಭಯೋತ್ಪಾದನೆಯನ್ನು ವಿಜೃಂಭಿಸಬಾರದು. ಎಲ್ಲಿವರೆಗೆ ಸಮಾಜದಲ್ಲಿ ಹಿಂಸೆ ಇರುತ್ತದೋ ಅಲ್ಲಿವರೆಗೆ ಭಯೋತ್ಪಾದನೆಗೆ ಅವಕಾಶವಾಗುತ್ತದೆ. ಸರಕಾರವೂ ಇಂತಹ ಚಟುವಟಿಕೆಗಳಿಗೆ ತಕ್ಷಣ ಹಾಗೂ ತೀಕ್ಷ್ಣ ಪ್ರತಿಕ್ರಿಯೆಯನ್ನು ನೀಡಲು ಸಾಧ್ಯ ಎಂದರು.

ಜಾನಪದಕ್ಕೆ ಶಾಶ್ವತ ಸ್ವರೂಪ ನೀಡಿದ ಗೊ.ರು.ಚ: ಗೊ.ರು.ಚ ಅವರು ಜಾನಪದಕ್ಕೆ ಶಾಶ್ವತ ಸ್ವರೂಪವನ್ನು ಕೊಟ್ಟು ಕೆಲಸ ಮಾಡಿರುವ ಗೊ.ರು.ಚ ಅವರು ಶರಣ ಸಾಹಿತ್ಯ ಮತ್ತು ಪರಿಷತ್ತಿನ ಅಧ್ಯಕ್ಷರಾಗಿ ಅವರು ಮಾಡಿರುವ ಕೆಲಸ ಅಮೋಘವಾಗಿರುವಂಥದ್ದು ಎಂದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News