ಕೋಡಿ ಕೋಟೆ ಮಸೀದಿಯಲ್ಲಿ ಸೌಹಾರ್ದ ಇಫ್ತಾರ್ ಕೂಟ
ಕುಂದಾಪುರ : ಕೋಡಿ ಕೋಟೆ ಬದ್ರಿಯಾ ಜುಮ್ಮಾ ಮಸೀದಿ ಹಾಗೂ ಎಸ್‌ಎಸ್‌ಎಫ್ ಶಾಖೆ ವತಿಯಿಂದ ಸೌಹಾರ್ದ ಇಫ್ತಾರ್ ಕೂಟವನ್ನು ಶುಕ್ರವಾರ ಮಸೀದಿಯಲ್ಲಿ ಆಯೋಜಿಸಲಾಗಿತ್ತು.
ಮುಖ್ಯ ಅತಿಥಿಯಾಗಿ ಸ್ಥಳೀಯ ವಕೀಲ ವಿಕಾಸ್ ಹೆಗ್ಡೆ ಮಾತನಾಡಿ, ನಮ್ಮಲ್ಲಿ ಮಾನವೀಯ ಮೌಲ್ಯ ಕಡಿಮೆ ಆಗುತ್ತಿದೆ. ಇಂದು ಒಬ್ಬರನ್ನೊಬ್ಬರು ದ್ವೇಷ, ಅಸೂಯೆಯಿಂದ ನೋಡುತ್ತಿದ್ದೇವೆ. ರಾಜಕೀಯ ಲಾಭ ಹಾಗೂ ತಮ್ಮ ಸ್ವಾರ್ಥ ಕ್ಕಾಗಿ ಸಮಾಜ ಕೆಡಿಸುವ ಕೆಲಸ ನಡೆಯುತ್ತಿದೆ. ಎಲ್ಲಾ ಧರ್ಮದಲ್ಲಿಯೂ ಕೆಟ್ಟವರು ಇರುತ್ತಾರೆ. ಆದರೆ ನಿಜವಾದ ಧರ್ಮೀಯರು ತಪ್ಪು ಮಾಡಲು ಹೋಗುವುದಿಲ್ಲ ಎಂದರು.
ಸ್ಥಳೀಯ ಮುಖಂಡ ಸಂಜು ಪೂಜಾರಿ ಮಾತನಾಡಿ ಎಲ್ಲಾ ಧರ್ಮಗಳಲ್ಲಿ ಇರುವ ಶೇ.೧ರಷ್ಟು ಕೆಟ್ಟವರಿಂದ ಈ ದೊಂಬಿ, ಕೋಮುಗಲಭೆ ನಡೆಯುತ್ತದೆ. ನಮ್ಮ ಮದ್ಯೆ ಇರುವ ಕೆಟ್ಟವರನ್ನು ಬದಿಗೆ ಬಿಸಡಬಾರದು ಅವರನ್ನು ತಿದ್ದಿ ಸರಿ ದಾರಿಗೆ ತರುವ ಪ್ರಯತ್ನ ಮಾಡಬೇಕು ಎಂದು ತಿಳಿಸಿದರು.
ಅಧ್ಯಕ್ಷತೆಯನ್ನು ಬದ್ರಿಯ ಜುಮ್ಮಾ ಮಸೀದಿ ಅಧ್ಯಕ್ಷ ಅಬ್ದುಲ್ ರಹಿಮಾನ್ ವಹಿಸಿದ್ದರು. ಕೋಟೆ ಮಸೀದಿಯ ಖತೀಬ್ ಇಸ್ಮಾಯಿಲ್ ಸಖಾಫಿ ರಂಜಾನ್ ಉಪವಾಸದ ವೈಶಿಷ್ಟತೆ ಮತ್ತು ಝಕಾತ್ ಕುರಿತು ಮಾಹಿತಿ ನೀಡಿದರು. ಮಸೀದಿಯ ಉಪಾಧ್ಯಕ್ಷ ಅಬ್ದುಲ್ ಕೋಡಿ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಮುಯ್ಯಿದ್ದೀನ್ ಜುಮಾ ಮಸೀದಿಯ ಖತೀಬ್ ಯೂಸುಫ್ ಸಖಾಫಿ, ಬದ್ರಿಯಾ ಜುಮ್ಮಾ ಮಸೀದಿಯ ಕಾರ್ಯದರ್ಶಿ ಅಬ್ದುಲ್ ರಝಕ್, ಜೊತೆ ಕಾರ್ಯದರ್ಶಿ ಮೊಹಮ್ಮದ್ ಅಲಿ, ಖಜಾಂಚಿ ಸೂಪಿ, ಅಶ್ರಫ್, ಪುರಸಭಾ ಸದಸ್ಯ ಮೊಹಮ್ಮದ್ ಆಸ್ಪಕ್, ಬಶೀರ್ ಶೇಕ್ ಅಲಿ, ಮೊಹಮ್ಮದ್ ಇಕ್ಬಾಲ್, ಯಾಕೂಬ್ ಅದಂ, ಬಿ.ಸೂಪಿ, ಅಬೂಬಕ್ಕರ್ ಹಾಜಿ, ಗಡಿ ಮೊಹಮ್ಮದ್, ಗದ್ದೆ ಮನೆ ಮೊಹಮ್ಮದ್ ಉಪಸ್ಥಿತರಿದ್ದರು.