ಅರಾಟೆ ಸೇತುವೆ ದುರಸ್ಥಿಗೆ 85 ಕೋಟಿ ರೂ. ಅನುದಾನ ಬಿಡುಗಡೆ
ಕುಂದಾಪುರ, ಡಿ.20: ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ದುರಸ್ಥಿಗೆ 85 ಕೋಟಿ ರೂ. ಸರಕಾರ ಬಿಡುಗಡೆ ಮಾಡಿದೆ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದ್ದಾರೆ.
ಕುಂದಾಪುರ-ಬೈಂದೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಅರಾಟೆ ಸೇತುವೆ ದುರಸ್ಥಿಗೆ ಶನಿವಾರ ಗುದ್ದಲಿಪೂಜೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.
ಹೆಮ್ಮಾಡಿ, ತಲ್ಲೂರು, ತ್ರಾಸಿ ಮತ್ತು ಯಡ್ತರೆ ಬೈಪಾಸ್ ಸೇರಿದಂತೆ ನಾಲ್ಕು ಕಡೆಗಳಲ್ಲಿ ಪಾದಚಾರಿಗಳ ಫೂಟ್ಪಾತ್, ಮೇಲ್ಸೇತುವೆ ನಿರ್ಮಿಸಲು ಸುಮಾರು 170 ಕೋಟಿ ರೂ. ಮಂಜೂರಾಗಿದ್ದು, ಡಿಪಿಆರ್ ಸಿದ್ಧಪಡಿಸಲಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ವಾಹನಸವಾರರಿಗೆ ಅನುಕೂಲಕರವಾಗಿರಬೇಕೆಂಬ ಉದ್ದೇಶದಿಂದ ರಾ. ಹೆದ್ದಾರಿಗಳ ಉನ್ನತೀಕತರಣ ಮಾಡಲಾಗುತ್ತಿದೆ ಅಲ್ಲದೆ ಅಪಘಾತಗಳನ್ನು ಕಡಿಮೆ ಮಾಡುವ ಸಲುವಾಗಿ ಮೂಲಭೂತ ಸೌಕರ್ಯಗಳನ್ನು ಒದಗಿಸಲಾಗುತ್ತಿದೆ ಎಂದರು.
ಬೈಂದೂರಿನಿಂದ ರಾಣೆಬೆನ್ನೂರಿಗೆ ರಾಷ್ಟ್ರೀಯ ಹೆದ್ದಾರಿ ಮಂಜೂರಾಗಿದ್ದು ಕೆಲಸ ಪ್ರಾರಂಭವಾಗಿದೆ. ಬೈಂದೂರಿ ನಿಂದ ಹೊಸನಗರ ಮಧ್ಯದಲ್ಲಿ ಸುಮಾರು 2 ಕಿ.ಮೀ. ಉದ್ದದ ಎರಡು ಸೇತುವೆಗಳನ್ನು ಅಂದಾಜು 350 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಲಾಗುತ್ತಿದೆ. ಸುಮಾರು 450 ಕೋಟಿ ರೂ. ವೆಚ್ಚದಲ್ಲಿ ಕೊಲ್ಲೂರು-ಕೊಡಚಾದ್ರಿ ಕೇಬಲ್ ಕಾರ್ ಅನುಷ್ಠಾನಗೊಳ್ಳಲಿದ್ದು, ಸೋಮೇಶ್ವರ ಮತ್ತು ಮರವಂತೆ ಬೀಚ್ ಅಭಿವೃದ್ಧಿಗೆ ಅನುದಾನ ಬಿಡುಗಡೆಯಾಗುವ ವಿಶ್ವಾಸವಿದೆ. ಸುಮಾರು 700 ಕೋಟಿ ರೂ. ವೆಚ್ಚದಲ್ಲಿ ಜಲಜೀವನ್ ಮಿಷನ್ ಯೋಜನೆ ಕಾಮಗಾರಿಗಳು ನಡೆಯು ತ್ತಿವೆ. ಸಿದ್ದಾಪುರ, ಸೌಕೂರು ನೀರಾವರಿ ಯೋಜನೆ ಪ್ರಾರಂಭವಾಗುತ್ತಿದೆ ಎಂದು ಹೇಳಿದ ಅವರು ಸುಮಾರು 5.20 ಲಕ್ಷ ವೆಚ್ಚದಲ್ಲಿ ನಾಲ್ಕು ಆರೋಗ್ಯ ಮತ್ತು ಕ್ಷೇಮಧಾಮ ಮಂಜೂರಾಗಿದೆ ಎಂದು ಅವರು ಹೇಳಿದರು.
ಹವಾಮಾನ ಆಧಾರಿತ ಬೆಳೆ ವಿಮೆಯಡಿಯಲ್ಲಿ 2024-25ನೇ ಸಾಲಿನಲ್ಲಿ ಉಡುಪಿ ಜಿಲ್ಲೆಗೆ ಸುಮಾರು 41.63 ಕೋಟಿ ರೂ. ಮಂಜೂರಾಗಿದ್ದು, ಈ ಪೈಕಿ 27.58 ಕೋಟಿ ರೂ. ಬೈಂದೂರು ಕ್ಷೇತ್ರದ ಸುಮಾರು 15 ಸಾವಿರ ಜನ ರೈತರಿಗೆ ಮಂಜೂರಾಗಿದೆ ಎಂದು ಅವರು ತಿಳಿಸಿದರು.
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ, ದಿಶಾ ಸಮಿತಿ ಸದಸ್ಯೆ ಪ್ರಿಯದರ್ಶಿನಿ ದೇವಾಡಿಗ, ರಮೇಶ ಪೂಜಾರಿ, ಐಆರ್ಬಿ ಇಂಜಿನಿರ್ಯ ವಿಜಯ, ಪ್ರಮುಖರಾದ ದೀಪಕ್ ಕುಮಾರ್ ಶೆಟ್ಟಿ, ಕರಣ್ ಪೂಜಾರಿ, ಮಿಥುನ್ ದೇವಾಡಿಗ, ರಾಘವೇಂದ್ರ ಆಚಾರ್ಯ, ಶರತ್ ಕುರ್ಮಾ ಶೆಟ್ಟಿ, ಸುರೇಶ ಬಟವಾಡಿ, ಬಾಲಚಂದ್ರ ಭಟ್, ಅಶೋಕ ಶೆಟ್ಟಿ ಸಂಸಾಡಿ ಮೊದಲಾದವರು ಉಪಸ್ಥಿತರಿದ್ದರು.