ಪಿಎಸ್‍ಐ ಹುದ್ದೆಗಳಿಗೆ ಮರು ಪರೀಕ್ಷೆ: ಸರಕಾರದ ನಿರ್ಧಾರ ಖಂಡಿಸಿ ಅಭ್ಯರ್ಥಿಗಳಿಂದ ಪ್ರತಿಭಟನೆ

Update: 2022-04-30 13:37 GMT

ಬೆಂಗಳೂರು, ಎ.30: ಪಿಎಸ್‍ಐ ಹುದ್ದೆಗಳಿಗೆ ಮರು ಪರೀಕ್ಷೆ ನಡೆಸಲು ರಾಜ್ಯ ಸರಕಾರ ನಿರ್ಧಾರ ತೆಗೆದುಕೊಂಡಿರುವುದನ್ನು ಖಂಡಿಸಿ ಫ್ರೀಡಂ ಪಾರ್ಕ್‍ನಲ್ಲಿ ಶನಿವಾರ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿರುವ ಅಭ್ಯರ್ಥಿಗಳು, ಮರು ಪರೀಕ್ಷೆ ಆದೇಶವನ್ನು ಹಿಂಪಡೆಯುವಂತೆ ಸರಕಾರಕ್ಕೆ ಆಗ್ರಹಿಸಿದ್ದಾರೆ.   

ಇನ್ನು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರನ್ನು ಭೇಟಿಯಾದ ಪಿಎಸ್‍ಐ ವಿದ್ಯಾರ್ಥಿಗಳು, ತನಿಖೆ ಮುಗಿಯದೇ ಪರೀಕ್ಷೆ ರದ್ದು ಮಾಡಿದ್ದಾರೆ. ನಾವು 5 ವರ್ಷದಿಂದ ಓದುತ್ತಾ ಇದ್ದೇವೆ. ನಾವು ಪ್ರಾಮಾಣಿಕವಾಗಿ ಪರೀಕ್ಷೆ ಬರೆದಿದ್ದೇವೆ ಎಂದು ತಮ್ಮ ಅಳಲನ್ನು ತೋಡಿಕೊಂಡರು. 

ಫೀಂಡಂ ಪಾರ್ಕ್‍ನಲ್ಲಿ ನಿವೃತ್ತ ಯೋಧ ಓಂಕಾರಪ್ಪ ಎಂಬುವವರು ಮಾತನಾಡಿ, ನಾನು ಸೈನಿಕನಾಗಿ ಕೆಲಸ ಮಾಡಿದ್ದೇನೆ. ಪಿಎಸ್‍ಐ ಪರೀಕ್ಷೆಗಾಗಿ ಮೂರು ವರ್ಷ ಓದಿದ್ದೇನೆ. ಈಗ ಮರು ಪರೀಕ್ಷೆ ಎನ್ನುತ್ತಿದ್ದಾರೆ. ಅಲ್ಲದೆ, ನನ್ನ ಜೀವನದಲ್ಲಿ ಜನ ಸೇವೆ ಮಾಡುವುದಕ್ಕೆ ಬಂದೆ. ಕೆಎಎಸ್ ಪರೀಕ್ಷೆ ಬರೆದು ಒಂದು ವರ್ಷ ಆಯಿತು, ಇನ್ನೂ ಫಲಿತಾಂಶ ಬಂದಿಲ್ಲ. ನಾವು ಎಲ್ಲಿಗೆ ಹೋಗಬೇಕು ಎಂದು ಅಸಮಾಧಾನ ಹೊರ ಹಾಕಿದರು. 

ಆರೋಪಿಗಳಿಗೆ ಶಿಕ್ಷೆ ಆಗದಿದ್ದರೂ, ಒಬ್ಬ ನಿರಪರಾಧಿಗೆ ಶಿಕ್ಷೆ ಆಗಬಾರದು ಎಂದು ಕಾನೂನೇ ಹೇಳುತ್ತದೆ. ಆದರೆ, ಸರಕಾರದ ನಿರ್ಧಾರದಿಂದ ನಿರಪರಾಧಿಗಳೇ ಶಿಕ್ಷೆಗೆ ಗುರಿಯಾದಂತಾಗಿದೆ ಎನ್ನುತ್ತಿರುವ ಅಭ್ಯರ್ಥಿಗಳು ಸರಕಾರ ತನ್ನ ನಿರ್ಧಾರ ವಾಪಸ್ ಪಡೆಯುವಂತೆ ಒತ್ತಾಯಿಸುತ್ತಿದ್ದಾರೆ.

ಫ್ರೀಡಂ ಪಾರ್ಕ್‍ನಲ್ಲಿ ಅಭ್ಯರ್ಥಿಗಳು ಜಮಾವಣೆ ಆಗುತ್ತಿರುವ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. 545 ಪಿಎಸ್‍ಐ ನೇಮಕಾತಿ ಪರೀಕ್ಷೆಯಲ್ಲಿ ನಡೆದಿರುವ ಅಕ್ರಮ ಪ್ರಕರಣ ಸಂಬಂಧ ಈಗಾಗಲೇ ಪ್ರಮುಖ ಆರೋಪಿ ದಿವ್ಯಾ ಹಾಗರಗಿ ಸೇರಿ ಹಲವರನ್ನು ಸಿಐಡಿ ಬಂಧಿಸಿ ವಿಚಾರಣೆಗೊಳಪಡಿಸಿದೆ. ಈ ಮಧ್ಯೆ ಶುಕ್ರವಾರ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಪರೀಕ್ಷೆ ರದ್ದುಗೊಳಿಸಿ, ಮರು ಪರೀಕ್ಷೆ ಮಾಡುವುದಾಗಿ ಪ್ರಕಟಿಸಿದ್ದಾರೆ. ಇದು ಆಯ್ಕೆ ಆದ ವಿದ್ಯಾರ್ಥಿಗಳಲ್ಲಿ ಆಕ್ರೋಶಕ್ಕೆ ಕಾರಣವಾಗಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News