ಪಠ್ಯ ಪರಿಷ್ಕರಣೆ; ಹಿಂದೂ ರಾಷ್ಟ್ರವಾಗಿಸುವ ಹುನ್ನಾರ ಅಡಗಿದೆ: ಪ್ರೊ. ಬಿ.ಕೆ. ಚಂದ್ರಶೇಖರ್
ಬೆಂಗಳೂರು, ಎ.30: ಸರಕಾರವು ಪಠ್ಯ ಪರಿಷ್ಕರಣೆಯನ್ನು ಮುನ್ನೆಲೆಗೆ ತಂದು ಭಾರತವನ್ನು ಹಿಂದೂ ರಾಷ್ಟ್ರವನ್ನಾಗಿ ಮಾಡಲು ಹವಣಿಸುತ್ತಿದೆ. ಇದನ್ನು ಮನಗಂಡು ನಾವು ಎಚ್ಚರದಿಂದಿರಬೇಕು ಎಂದು ಪ್ರೊ. ಬಿ.ಕೆ. ಚಂದ್ರಶೇಖರ್ ಆರೋಪಿಸಿದ್ದಾರೆ.
ಶನಿವಾರ ನಗರದ ಶಾಸಕರ ಭವನದಲ್ಲಿ ದುಂಡುಮೇಜಿನ ಸಭೆಯಲ್ಲಿ ಮಾತನಾಡಿದ ಅವರು, ಸರಕಾರವು ಪಠ್ಯವನ್ನು ಮಾತ್ರ ಬದಲಾವಣೆ ಮಾಡಲು ಹೊರಟಿಲ್ಲ. ಬದಲಾಗಿ ಬುಡದಿಂದಲೇ ಹಿಂದು ರಾಷ್ಟ್ರವನ್ನಾಗಿಸುವ ಅವಿತಿಟ್ಟ ಅಜೆಂಡಾವನ್ನು ಬಲವಂತವಾಗಿ ಹೇರಲು ಹೊರಟಿದೆ. ಹಾಗಾಗಿ ಶಿಕ್ಷಣವನ್ನು ಗುರಿಯಾಗಿಸಿದೆ. ಪಠ್ಯ ಪರಿಷ್ಕರಣೆಯ ಉನ್ನತ ಮಟ್ಟದ ಸಮಿತಿಗಳಲ್ಲಿ ತಮಗೆ ಬೇಕಾದವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.
ಶಿಕ್ಷಣ ತಜ್ಞ ಡಾ. ನಿರಂಜನಾರಾಧ್ಯ ವಿ.ಪಿ. ಮಾತನಾಡಿ, ರಾಜ್ಯ ಸರಕಾರವು ಪಠ್ಯಪುಸ್ತಕಗಳ ಬದಲಾವಣೆಯಲ್ಲಿ ಮಾನದಂಡಗಳನ್ನು ಪಾಲಿಸುತ್ತಿಲ್ಲ. ಬದಲಾಗಿ ಸಮಿತಿಯ ಅಧ್ಯಕ್ಷರ ಶಿಫಾರಸ್ಸನ್ನು ಮಾತ್ರ ಏಕಪಕ್ಷೀಯವಾಗಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತಿದೆ ಎಂದರು.
ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥ ಕೇವಲ ಅಂಕಣಕಾರರೇ ಹೊರತು ಇತಿಹಾಸಕಾರರಲ್ಲ. ಇದರ ಹಿಂದಿನ ಅಜೆಂಡವನ್ನು ವಿರೋಧಪಕ್ಷಗಳು ಚರ್ಚೆಗೆ ತೆಗೆದುಕೊಳ್ಳಬೇಕು ಎಂದು ಅವರು ಒತ್ತಾಯಿಸಿದರು.
ಪ್ರೊ. ಜಾನಕಿ ನಾಯರ್ ಮಾತನಾಡಿ, ಪ್ರಸ್ತುತ ಪಠ್ಯದಲ್ಲಿ ನ್ಯೂನತೆಗಳಿದ್ದರೆ, ಸರಿಪಡಿಸಬೇಕು. ಅದನ್ನು ಬಿಟ್ಟು ಪಠ್ಯಪರಿಷ್ಕರಣೆಯ ನೆಪದಲ್ಲಿ ಬೇರೆ ಪಠ್ಯವನ್ನು ಏಕೆ ರೂಪಿಸುತ್ತಿದ್ದಾರೆ ಎಂದು ಪ್ರಶ್ನಿಸಿದರು.
ಸಭೆಯಲ್ಲಿ ಪ್ರಕಾಶ್ ರಾಥೋಡ್, ತಿರುಮಲರಾವ್ ನಿವೃತ್ತ ನಿರ್ದೇಶಕರು ಸಾರ್ವಜನಿಕ ಶಿಕ್ಷಣ ಇಲಾಖೆ, ಡಾ.ಜಾನಕಿ ನಾಯರ್ ಸಿ.ಬಿ.ಎಸ್ ಪಠ್ಯ ರಚನಾ ಸದಸ್ಯರು, ಮಲ್ಲಿಗೆ ಸಾಮಾಜಿಕ ಹೋರಾಟಗಾರರು, ಲೋಕೇಶ್ ತಾಳಿಕಟ್ಟಿ ರುಪ್ಸಾ ಸಂಸ್ಥೆ, ಕುಮಾರ ಸ್ವಾಮಿ, ಯೋಗಾನಂದ ಶಾಲಾ ಪೋಷಕರ ಸಂಘ ಹಾಗು ಶಾಲಾ ಶಿಕ್ಷಕರು ಪೋಷಕರು ಹಾಜರಿದ್ದರು.
ಶಿಕ್ಷಣ ಕ್ಷೇತ್ರದಲ್ಲಿ ಪದೇ ಪದೇ ಪಠ್ಯಕ್ರಮ ಹಾಗು ಪಠ್ಯಪುಸ್ತಕಗಳನ್ನು ಒಂದು ಸಿದ್ಧಾಂತದ ಚೌಕಟ್ಟಿಗೆ ಮಿತಿಗೊಳಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ. ಪಠ್ಯಪರಿಷ್ಕರಣೆಯಲ್ಲಿ ನಡೆಯುತ್ತಿರುವ ಹುನ್ನಾರವು ಕೆಲವೇ ಮಂದಿಯ ನಡುವೆ ಚರ್ಚೆಯಾಗುತ್ತಿದೆ. ಜನಸಾಮಾನ್ಯರ ಮಟ್ಟದಲ್ಲಿ ಇದು ಚರ್ಚೆಯಾಗಬೇಕು. ಸಾರ್ವಜನಿಕರು ಇದರ ಬಗ್ಗೆ ಯೋಚಿಸುವಂತೆ ಮಾಡಬೇಕು.
-ಮಲ್ಲಿಗೆ, ಸಾಮಾಜಿಕ ಹೋರಾಟಗಾರ್ತಿ