ಬೆಂಗಳೂರು | ಸಾಲ ತೀರಿಸಲು ದರೋಡೆ: ಆರೋಪಿಗಳಿಬ್ಬರ ಬಂಧನ

Update: 2022-04-30 14:48 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಎ.30: ಸಾಲದಿಂದ ಹೊರ ಬರಲು ವ್ಯವಸ್ಥಿತವಾಗಿ ದರೋಡೆ ಮಾಡಿದ್ದ ಇಬ್ಬರು ಆರೋಪಿಗಳನ್ನು ರಾಜಾಜಿನಗರ ಠಾಣಾ ಪೊಲೀಸರು ಬಂಧಿಸಿದ್ದಾರೆ. 

ಬಂಧಿತರನ್ನು ಸಚಿನ್ ಹಾಗೂ ಜಯಂತ್ ಎಂದು ಗುರುತಿಸಲಾಗಿದೆ. ಎ. 21ರಂದು ರಾಜಾಜಿನಗರ ಆರ್‍ಟಿಓ ಕಚೇರಿಯಲ್ಲಿ ಸಂಗ್ರಹವಾಗಿದ್ದ 5 ಲಕ್ಷ ಹಣವನ್ನ ಸಮೀಪದ ಬ್ಯಾಂಕಿಗೆ ಜಮಾ ಮಾಡಲು ಕ್ಲರ್ಕ್ ಮಂಜುನಾಥ್ ಎಂಬುವವರು ತೆರಳುತ್ತಿದ್ದರು.

ಈ ಸಂದರ್ಭದಲ್ಲಿ ಹೆಲ್ಮೆಟ್ ಧರಿಸಿ ಬೈಕ್‍ನಲ್ಲಿ ಬಂದಿದ್ದ ಈ ಆರೋಪಿಗಳು ಹಣದ ಬ್ಯಾಗ್ ಕಿತ್ತುಕೊಂಡು ಪರಾರಿಯಾಗಿದ್ದರು. ಆರೋಪಿಗಳ ವಿರುದ್ದ ರಾಜಾಜಿನಗರ ಠಾಣೆಯಲ್ಲಿ ದೂರು ದಾಖಲಾಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಸಿಸಿಟಿವಿ ದೃಶ್ಯಗಳನ್ನು ಆಧರಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.

ಆರು ವರ್ಷಗಳಿಂದ ಆರ್‍ಟಿಓ ಕಚೇರಿಯ ಪಾರ್ಟ್ ಒನ್ ಶಾಪ್‍ನಲ್ಲಿ ಕೆಲಸ ಮಾಡಿಕೊಂಡಿದ್ದ ಸಚಿನ್ ಹಣವನ್ನು ಆರ್‍ಟಿಒ ಕಚೇರಿಗೆ ಕಟ್ಟುವ ಜವಾಬ್ದಾರಿ ನಿಭಾಯಿಸುತ್ತಿದ್ದ. ಆದರೆ, ಹಣದ ವಿಚಾರವಾಗಿ ಶಾಪ್ ಮಾಲಕನ ಜತೆ ಗಲಾಟೆ ಮಾಡಿ ಕೆಲಸ ಬಿಟ್ಟಿದ್ದ. ಮತ್ತೊಂದೆಡೆ ಸಾಲ ಜಾಸ್ತಿ ಇದ್ದಿದ್ದರಿಂದ ಗೆಳೆಯನ ಜತೆ ಸೇರಿ ಸಚಿನ್ ದರೋಡೆಗೆ ಸಂಚು ರೂಪಿಸಿದ್ದ.

ಅದರಂತೆ ಮೂರು ದಿನಗಳಿಂದ ಆರ್‍ಟಿಓ ಕ್ಲರ್ಕ್ ಮಂಜುನಾಥ್ ಬ್ಯಾಂಕಿಗೆ ಹೋಗಿ ಬರುವುದನ್ನ ಗಮನಿಸಿದ್ದ ಆರೋಪಿಗಳು ಎ.21ರಂದು ಕೃತ್ಯ ಎಸಗಿದ್ದರು. ಸದ್ಯ ಆರೋಪಿಗಳನ್ನ ಬಂಧಿಸಿರುವ ರಾಜಾಜಿನಗರ ಠಾಣಾ ಪೊಲೀಸರು 2.52 ಲಕ್ಷ ಹಣ ಹಾಗೂ ಒಂದು ದ್ವಿಚಕ್ರ ವಾಹನ ವಶಕ್ಕೆ ಪಡೆದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News