ಸದ್ಯಕ್ಕೆ ಹೊಸ ಪಕ್ಷ ಸ್ಥಾಪನೆಯಿಲ್ಲ,ಬಿಹಾರದಲ್ಲಿ 3,000 ಕಿ.ಮೀ.ಪಾದಯಾತ್ರೆ ಕೈಗೊಳ್ಳುವೆ:ಪ್ರಶಾಂತ್ ಕಿಶೋರ್

Update: 2022-05-05 16:03 GMT

ಹೊಸದಿಲ್ಲಿ,ಮೇ 5: ಸದ್ಯಕ್ಕೆ ತಾನು ಯಾವುದೇ ಹೊಸ ಪಕ್ಷವನ್ನು ಸ್ಥಾಪಿಸುವುದಿಲ್ಲ ಎಂದು ರಾಜಕೀಯ ತಂತ್ರಜ್ಞ ಪ್ರಶಾಂತ್ ಕಿಶೋರ್ ಅವರು ಗುರುವಾರ ತಿಳಿಸಿದ್ದಾರೆ.

ಕಾಂಗ್ರೆಸ್ ಸೇರ್ಪಡೆಗೆ ಇತ್ತೀಚಿನ ಅವಕಾಶವನ್ನು ನಿರಾಕರಿಸಿದ್ದ ಕಿಶೋರ್ ತಾನು ಚುನಾವಣಾ ರಾಜಕೀಯವನ್ನು ಪ್ರವೇಶಿಸಬಹುದು ಎಂದು ಕಳೆದ ಸೋಮವಾರ ಸುಳಿವು ನೀಡಿದ್ದರು.

ಗುರುವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಕಿಶೋರ್ ,ಮಹಾತ್ಮಾ ಗಾಂಧೀಜಿಯವರ ಜನ್ಮದಿನವಾದ ಅ.2ರಿಂದ ತವರು ರಾಜ್ಯ ಬಿಹಾರದಲ್ಲಿ 3,000 ಕಿ.ಮೀ.ಗಳ ಪಾದಯಾತ್ರೆಯನ್ನು ಕೈಗೊಳ್ಳುವುದಾಗಿ ಪ್ರಕಟಿಸಿದರು.

ಕೆಲವು ದಿನಗಳ ಹಿಂದೆ ಜನ ಸುರಾಜ್(ಜನತೆಯ ಉತ್ತಮ ಆಡಳಿತ) ಅಭಿಯಾನಕ್ಕೆ ಚಾಲನೆ ನೀಡಿರುವ ಕಿಶೋರ್,ಮುಂದಿನ 3-4 ತಿಂಗಳುಗಳಲ್ಲಿ ಜನ ಸುರಾಜ್ ಪರಿಕಲ್ಪನೆಯನ್ನು ಬಲಗೊಳಿಸಲು ನೆರವಾಗಬಲ್ಲ ಬಿಹಾರದ ಹಲವಾರು ಗಣ್ಯರನ್ನು ಭೇಟಿಯಾಗಲಿದ್ದೇನೆ ಮತ್ತು ಅವರನ್ನು ಅದರ ಭಾಗವನ್ನಾಗಿಸುತ್ತೇನೆ ಎಂದು ತಿಳಿಸಿದರು.

ರಾಜ್ಯದಲ್ಲಿ ‘ನಯೀ ಸೋಚ್,ನಯಾ ಪ್ರಯಾಸ್ (ಹೊಸ ಚಿಂತನೆ,ಹೊಸ ಪ್ರಯತ್ನ)’ ಅನ್ನು ತರಲು ತನ್ನನ್ನು ಅರ್ಪಿಸಿಕೊಳ್ಳುವುದಾಗಿ ತಿಳಿಸಿದ ಅವರು,30 ವರ್ಷಗಳ ಲಾಲು ಯಾದವ್ ಮತ್ತು ನಿತೀಶ್ ಕುಮಾರ್  ಆಡಳಿತಗಳ ಬಳಿಕವೂ ಬಿಹಾರವು ಇಂದು ದೇಶದಲ್ಲಿ ಅತ್ಯಂತ ಹಿಂದುಳಿದ ಮತ್ತು ಬಡ ರಾಜ್ಯವಾಗಿದೆ. ಅಭಿವೃದ್ಧಿಯ ಹಲವಾರು ಮಾನದಂಡಗಳಲ್ಲಿ ಅದು ಈಗಲೂ ದೇಶದಲ್ಲಿ ಅತ್ಯಂತ ಕೆಳಸ್ತರದಲ್ಲಿದೆ. ಮುಂಬರುವ ಸಮಯಗಳಲ್ಲಿ ಪ್ರಮುಖ ರಾಜ್ಯಗಳ ಪಟ್ಟಿಗೆ ಸೇರಲು ಬಿಹಾರವು ಬಯಸಿದ್ದರೆ ಅದಕ್ಕೆ ಹೊಸ ಚಿಂತನೆ ಮತ್ತು ಹೊಸ ಪ್ರಯತ್ನಗಳ ಅಗತ್ಯವಿದೆ ಎಂದರು.

ತನ್ನ ಆಂದೋಲನವನ್ನು ಸೇರಲು ಮತ್ತು ಜನತೆಯ ಸಮಸ್ಯೆಗಳನ್ನು ತಿಳಿದುಕೊಳ್ಳುವಲ್ಲಿ ತನಗೆ ನೆರವಾಗಲು ಸುಮಾರು 17,500ರಿಂದ 18,000 ಜನರನ್ನು ಗುರುತಿಸಲಾಗಿದೆ ಎಂದು ಕಿಶೋರ ಹೇಳಿದರು.

ಕಾಂಗ್ರೆಸ್ ಪಕ್ಷದಲ್ಲಿ ತನಗಿಂತ ಹೆಚ್ಚು ಸಮರ್ಥ ವ್ಯಕ್ತಿಗಳು ಇರುವುದರಿಂದ ಅದರೊಂದಿಗಿನ ತನ್ನ ಮಾತುಕತೆಗಳು ಅನಿರ್ಣಾಯಕವಾಗಿದ್ದವು ಎಂದು ಹೇಳಿದ ಕಿಶೋರ,ತಾವೇನು ಮಾಡಬೇಕು ಎನ್ನುವುದು ಅವರಿಗೆ ಗೊತ್ತಿದೆ ಎಂದರು.

ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್  ಜೊತೆ ತನ್ನ ಉತ್ತಮ ಸಂಬಂಧದ ಬಗ್ಗೆಯೂ ಕಿಶೋರ ಹೇಳಿಕೊಂಡರಾದರೂ,ಅವರೊಂದಿಗೆ ಹೋಗಲು ತಾನು ಬಯಸಿಲ್ಲ ಎಂದು ಹೇಳಿದರು.

2018ರಲ್ಲಿ ಕಿಶೋರ ಅವರನ್ನು ನಿತೀಶ ನೇತೃತ್ವದ ಜೆಡಿಯು ಉಪಾಧ್ಯಕ್ಷರನ್ನಾಗಿ ನೇಮಕಗೊಳಿಸಲಾಗಿತ್ತು. ಎರಡು ವರ್ಷಗಳ ಬಳಿಕ ಅವರನ್ನು ಹುದ್ದೆಯಿಂದ ವಜಾಗೊಳಿಸಲಾಗಿತ್ತು.

 ‘ನಿತೀಶ ಜೊತೆ ನನಗೆ ಯಾವುದೇ ವೈಯಕ್ತಿಕ ಜಗಳವಿಲ್ಲ. ನಾವು ಒಳ್ಳೆಯ ಸಂಬಂಧಗಳನ್ನು ಹೊಂದಿದ್ದೇವೆ. ಆದರೆ ವೈಯಕ್ತಿಕ ಸಂಬಂಧ ಹಾಗೂ ಜೊತೆಯಾಗಿ ಕಾರ್ಯ ನಿರ್ವಹಿಸುವುದು ಮತ್ತು ಸಹಮತ ಇವೆರಡೂ ವಿಭಿನ್ನವಾಗಿವೆ. ನಿತೀಶ ನನ್ನನ್ನು ಮಾತುಕತೆಗೆ ಕರೆದರೆ ನಾನು ಹೋಗಲೇಬೇಕು. ಆದರೆ ನಾವು ಪ್ರತಿಯೊಂದನ್ನೂ ಒಪ್ಪಿಕೊಳ್ಳುತ್ತೇವೆ ಮತ್ತು ಜೊತೆಯಾಗಿ ಕೆಲಸ ಮಾಡುತ್ತೇವೆ ಎನ್ನುವುದು ಅದರ ಅರ್ಥವಲ್ಲ’ ಎಂದು ಕಿಶೋರ ತಿಳಿಸಿದರು.

ಹೊಸ ಆಡಳಿತ ವ್ಯವಸ್ಥೆಯನ್ನು ನಿರ್ಮಿಸಲು ತಮ್ಮನ್ನು ತಾವು ಸಮರ್ಪಿಸಿಕೊಳ್ಳುವುದಾಗಿ ಹೇಳಿದ್ದಾರೆ. ಬಿಹಾರದಲ್ಲಿ ಸದ್ಯಕ್ಕೆ ಯಾವುದೇ ಚುನಾವಣೆಗಳಿಲ್ಲ. ಆದ್ದರಿಂದ ರಾಜಕೀಯ ಪಕ್ಷವು ಸದ್ಯ ನನ್ನ ಯೋಜನೆಯ ಭಾಗವಾಗಿಲ್ಲ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ಜನರನ್ನು ತಲುಪುವ ಕೆಲಸ ಮಾಡುತ್ತೇನೆ ಎಂದು ಪ್ರಶಾಂತ್ ಕಿಶೋರ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News