ಸಾರವೆನ್ನುವಂತೆ ಕಾಣುವ ನಿಸ್ಸಾರದ ಕತೆಗಳು

Update: 2022-05-07 04:26 GMT

ಕತೆಗಳನ್ನು ಓದಿ ಮುಗಿಸಿದ ಮೇಲೆ ಲೇಖಕರೇ ತಮ್ಮ ಮಾತುಗಳಲ್ಲಿ ಬರೆದುಕೊಂಡಿರುವಂತೆ ಸೊಂಪಾಗಿ ತಿಂದು, ಉಂಡು, ತಿರುಗಿ, ಅದಾಗಿ ಉಳಿದ ಹೊತ್ತಲ್ಲಿ ಬರೆದ ಕತೆಗಳಾಗಿವೆಯೇ ಹೊರತು ಅದಕ್ಕಿಂತ ಹೆಚ್ಚಿನದನ್ನು ಇಲ್ಲಿನ ಕತೆಗಳು ಹೇಳುವುದಿಲ್ಲ. ಅಬ್ದುಲ್ ರಶೀದರು ಕನ್ನಡದ ಹಿರಿಯ ಕತೆಗಾರರು. ಬದುಕಿನಲ್ಲಿ ಸದಾ ಹೊಸತನ್ನು ಅರಸುವ ಗುಣವೇ ಅವರ ಬದುಕಿನ ಗುರಿ ಮತ್ತು ಹವ್ಯಾಸ ಎರಡೂ ಆಗಿರುವುದನ್ನು ಅವರನ್ನು, ಅವರ ಬದುಕನ್ನು ಬಲ್ಲವರು ಆಡುವ, ಬರೆಯುವ ಮಾತು.

ಅಬ್ದುಲ್ ರಶೀದ್ ಕನ್ನಡದ ಹಿರಿಯ ಕತೆಗಾರರು, ಅವರು ಇಲ್ಲಿಯವರೆಗೂ ಬರೆದ ಕತೆಗಳಲ್ಲಿ ಕೆಲ ಕತೆಗಳ ಕಾರಣಕ್ಕೆ ಅಭಿಮಾನಿ ನಾನು. ಅದೇ ಅಭಿಮಾನ ಮತ್ತು ಪ್ರೀತಿಯಿಂದ ಇತ್ತೀಚೆಗೆ ‘ಬಹುವಚನ’ ಪ್ರಕಾಶನದಿಂದ ಪ್ರಕಟವಾಗಿರುವ ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್ ಕಥಾ ಸಂಕಲನವನ್ನು ಕೊಂಡು, ಒಂದೇ ಉಸುರಿಗೆ ಓದಬೇಕೆಂದುಕೊಂಡು ಇಲ್ಲಿರುವ ಐದು ಕತೆಗಳನ್ನು ನಿಧಾನ ವಾಗಿಯೇ ಓದತೊಡಗಿದೆ. ಕತೆಗಳನ್ನು ಓದಿ ಮುಗಿಸಿದ ಮೇಲೆ ಲೇಖಕರೇ ತಮ್ಮ ಮಾತುಗಳಲ್ಲಿ ಬರೆದುಕೊಂಡಿರುವಂತೆ ಸೊಂಪಾಗಿ ತಿಂದು, ಉಂಡು, ತಿರುಗಿ, ಅದಾಗಿ ಉಳಿದ ಹೊತ್ತಲ್ಲಿ ಬರೆದ ಕತೆಗಳಾಗಿವೆಯೇ ಹೊರತು ಅದಕ್ಕಿಂತ ಹೆಚ್ಚಿನದನ್ನು ಇಲ್ಲಿನ ಕತೆಗಳು ಹೇಳುವುದಿಲ್ಲ.

ಅಬ್ದುಲ್ ರಶೀದರು ಕನ್ನಡದ ಹಿರಿಯ ಕತೆಗಾರರು. ಬದುಕಿನಲ್ಲಿ ಸದಾ ಹೊಸತನ್ನು ಅರಸುವ ಗುಣವೇ ಅವರ ಬದುಕಿನ ಗುರಿ ಮತ್ತು ಹವ್ಯಾಸ ಎರಡೂ ಆಗಿರುವುದನ್ನು ಅವರನ್ನು, ಅವರ ಬದುಕನ್ನು ಬಲ್ಲವರು ಆಡುವ, ಬರೆಯುವ ಮಾತು. ಆದರೆ ಅಬ್ದುಲ್ ರಶೀದರು ಮೈಸೂರನ್ನು ಬಿಟ್ಟು ಜಗತ್ತಿನ ಅತಿ ಸುಂದರ ದ್ವೀಪಗಳಲ್ಲಿ ಒಂದಾದ ಲಕ್ಷದ್ವೀಪದ ಕವರತ್ತಿಗೆ ಹೋದಾಗ, ಅವರ ಈ ಹಿಂದಿನ ಕತೆಗಳನ್ನು, ಅದಕ್ಕಿಂತಲೂ ಅವರ ಹೂವಿನ ಕೊಲ್ಲಿ ಕಾದಂಬರಿಯಲ್ಲಿ ಇಡೀ ಪರಿಸರವೇ ಕಾದಂಬರಿಯ ಪಾತ್ರದಂತೆ ಆವರಿಸಿಕೊಂಡಿರುವುದನ್ನು ಮತ್ತು ಅಲ್ಲಿನ ಪಾತ್ರಗಳೂ ಕೂಡ ಆ ಪರಿಸರದ ಜಿಡ್ಡಿನಿಂದಲೇ ಕೂಡಿರುವುದನ್ನು ಓದಿ ಅನುಭವಿಸಿರುವ ಓದುಗನು, ಈಗಿನ ಕತೆಗಳಲ್ಲಿ ಲಕ್ಷದ್ವೀಪದ ಪರಿಸರವೂ ಅವರ ಕತೆಗಳಲ್ಲಿ ಅಷ್ಟೇ ಗಾಢವಾಗಿ ಕಾಣುತ್ತದೆ ಎಂಬ ನಂಬಿಕೆಯೊಂದಿಗೆ ಓದಲು ಕುಳಿತರೆ, ಮೋಸ ಹೋಗುವುದು ಖಂಡಿತಾ.

ಇಲ್ಲಿನ ಐದು ಕತೆಗಳ ಪೈಕಿ ಅತ್ಯಂತ ಗಟ್ಟಿಕತೆ, ಕತೆಗಾರ ರಶೀದರ ಮುದ್ರೆಯ ಕತೆ ಎಂದರೆ ಮೋಹಕ ದ್ವೀಪದ ಮೂಗಿನ ತುದಿ ಕತೆ ಮಾತ್ರವೇ. ಈ ಕತೆಯ ನಿರೂಪಕ ನಡುವಯಸ್ಕ ತನ್ನ ನಡುಗಾಲದ ಅಷ್ಟೇನೂ ನೈತಿಕವಲ್ಲದ ಅನುರಾಗವೊಂದರಲ್ಲಿ ಸಿಲುಕಿ, ಆ ಅನುರಾಗಕ್ಕೆ ಕಾರಣಳಾದ ಜೀವವೊಂದು ಆತನಿಂದ, ಈ ಭೂಮಿಯಿಂದ ದೂರವಾದದ್ದೊಂದು ದುಃಖವಾಗಿ, ಆ ದುಃಖವೇ ನೆಪವಾಗಿ, ಕಾರಣವಾಗಿ ಆ ನೋವು, ದುಃಖವನ್ನು ಮರೆಯಲೋ, ಇಲ್ಲ ಅದನ್ನು ಮತ್ತಷ್ಟು ಗಾಢವಾಗಿ ಅನುಭವಿಸಲು ತಾನೇ ಖುದ್ದಾಗಿ ಮೇನ್ ಲ್ಯಾಂಡ್‌ನಿಂದ ವರ್ಗಾವಣೆ ತೆಗೆದುಕೊಂಡು ಲಕ್ಷ ದ್ವೀಪಕ್ಕೆ ಒಂಟಿಯಾಗಿ ಬಂದವನಾಗಿರುತ್ತಾನೆ. ಅಲ್ಲಿ ನೋಡಿದರೆ ತನ್ನಂತೆಯೇ ಒಂಟಿಯಾಗಿ ತೀರದಲ್ಲೊಂದು ಹಡಗು ಎಷ್ಟೋ ಕಾಲದಿಂದ ನಿಂತಿದೆ. ಸ್ಥಳೀಯರನ್ನು ಕೇಳಿದರೆ ಆ ಹಡಗಿನ ಜೊತೆಗೊಂದು ಆ ಹಡಗಿನ ಕಪ್ತಾನನ ಪ್ರೇಮದ ಕತೆಯೊಂದು ಈ ಹಡಗು ತೀರದಲ್ಲಿ ಬಂದು ನಿಲ್ಲಲು ಕಾರಣ ಎಂಬ ಕತೆ ಹೇಳುತ್ತಾರೆ.

ಸ್ಥಳೀಯರು ಹೇಳುವ ಕತೆ ಕೇಳಿ, ಆ ಹಡಗಿನ ಕಪ್ತಾನ ಹಡಗಿನ ಹಾದಿಯನ್ನೇ ಬದಲಿಸಿ ತೀರಕ್ಕೆ ತರಲು ಕಾರಣಳಾದ ಜುಬೇದಾಳನ್ನು ಹುಡುಕಿ, ಅವಳ ಬದುಕಿನ ಕತೆ ಕೇಳುತ್ತಾನೆ. ತಾನು ಈ ಹಡಗಿನ ಕಪ್ತಾನನ್ನು ಮದುವೆಯಾಗುವ ಮೊದಲು, ಮತ್ತೊಬ್ಬನನ್ನು ಮದುವೆಯಾಗಿದೆ, ಆನಂತರ ಈ ಕಪ್ತಾನನನ್ನು ಮದುವೆಯಾಗಿದ್ದು, ನಂತರ ಕಪ್ತಾನ ಮತ್ತು ತನ್ನ ಬದುಕಿನಲ್ಲಾದ ದುರಂತ, ಆ ದುರಂತದ ನಂತರ ಅವಳು ಬದುಕೂ ಕೂಡ ತೀರದಲ್ಲಿ ನಿಂತ ಹಡಗಿನಂತೆ ತುಕ್ಕು ಹಿಡಿಯುವುದ ಕಂಡು, ದ್ವೀಪವಾಸಿಗಳೊಂದಿಗೆ ಬೆರೆಯದೇ ಆಡು ಸಾಕಲು ಆರಂಭಿಸಿದ್ದು, ಅವುಗಳನ್ನೇ ಹೆತ್ತ ಮಕ್ಕಳಂತೆ ಪ್ರೀತಿಸುತ್ತಾ, ಸಲಹುತ್ತಾ, ಬದುಕನ್ನು ಮತ್ತೆ ಪ್ರೀತಿಸಲು ತೊಡಗಿ ತನ್ನ ಬದುಕನ್ನು ಬೇಟೆಯಾಡಿದ ಇದೇ ಬದುಕಿಗಾಗಿ, ಈಗ ಅವಳು ದ್ವೀಪದಲ್ಲಿ ಬದುಕಲು ಆಕ್ಟೋಪಸ್ ಬೇಟೆಯಲ್ಲಿ ನುರಿತಳಾಗಿ, ಅದನ್ನು ಜೀವನೋಪಾಯದ ಮಾರ್ಗವಾಗಿ ಮಾಡಿಕೊಂಡು ತನ್ನ ಬದುಕನ್ನು ಅಲ್ಲಿನ ಒಂದು ದ್ವೀಪದಂತೆ ಬದುಕುತ್ತಿರುವವಳು ಜುಬೇದಾ. ತನ್ನ ಬದುಕು ಇಂತಹ ದುರಂತಕ್ಕೆ ಒಳಗಾದರೂ ಅಲ್ಲಿರುವ ಆಡು, ಮತ್ತು ಅಲ್ಲಿಗೆ ಬರುವ ಹೊಸಬರೊಂದಿಗಿನ ಒಡನಾಟದಲ್ಲಿ, ಅವರ ಉಪಚಾರದಲ್ಲಿ ಮನುಷ್ಯನಿಗೆ ಈ ಬದುಕು ಕರುಣಿಸುವ ರೌದ್ರತೆ, ಆರ್ದ್ರತೆ, ಸಾರ್ಥಕತೆ, ನಿರರ್ಥಕತೆಯನ್ನು ( ಜುಬೇದಾ ಹಿಡಿದು ತಂದು, ಈಗ ಸತ್ತಿರುವ ಅಕ್ಟೋಪಸ್‌ನ್ನು ತಿನ್ನಲು ಸಿದ್ಧಗೊಳಿಸಲು ಬಲಿಷ್ಠ ದೊಣ್ಣೆಯಿಂದ ಬಡಿಯುತ್ತಿರುವುದನ್ನು ಕಂಡು) ಕಂಡು, ಅದನ್ನು ನೋಡಲಾಗದೆ ಈ ಪ್ರೇಮವೆಂಬ ಆಕ್ಟೋಪಸ್‌ನ ಹಿಡಿತಕ್ಕೆ ಒಳಗಾಗಿ, ಈಗ ಆ ಆಕ್ಟೋಪಸ್ಸೇ ಸತ್ತು ನಿರ್ಜೀವವಾಗಿ, ತನ್ನ ಬಣ್ಣ ಕಳೆದುಕೊಂಡಿರುವುದರ ಅರಿವಾಗಿ ಅಲ್ಲಿಂದ ಎದ್ದು, ದ್ವೀಪದ ತೀರದತ್ತ ತನ್ನೊಳಗೆ ಉಕ್ಕಿ ಬರುತ್ತಿರುವ ಅಳಲನ್ನು ಕಳೆಯಲು ಹೆಜ್ಜೆ ಹಾಕುತ್ತಾನೆ. ಕಡೆಗೆ ಆತ ಹೋಗುವುದು ದೂರದಲ್ಲಿ ದ್ವೀಪದ ಮೂಗಿನಂತಹ ತುದಿಯ ಮೇಲೆ ಆಕಾಶದಲ್ಲಿ ಅರೆ ಬಾಗಿರುವ ಸಲಾಕೆ ಯಂತಹ ಚಂದ್ರ. ಅದಕ್ಕೆ ತಾಗಿಕೊಂಡಂತ ಯೇ ಒಂದು ನಕ್ಷತ್ರ. ಸಣ್ಣಗೆ ಮಂಕಾಗಿ ಕಾಣಿಸುತ್ತಿರುವ ಬಿಳಿಯ ಮರಳ ಹಾಸು ಮತ್ತು ಬಗ್ಗಿ ನಿಂತುಕೊಂಡಿರುವ ಅದೇ ಒಂಟಿ ತೆಂಗಿನ ಮರ. ಈ ವರ್ಣನೆಯಲ್ಲಿನ ಒಂಟಿ ತೆಂಗಿನ ಮರ ಅಲ್ಲಿನ ಪರಿಸರದ್ದೋ ಅಥವಾ ಆ ನಿರೂಪಕನೋ ಎಂಬ ಅಚ್ಚರಿ ಅನುಮಾನದೊಂದಿಗೆ ಕತೆ ಮುಕ್ತಾಯಗೊಳ್ಳುತ್ತದೆ. ಲಕ್ಷದ್ವೀಪ ಪರಿಸರದ ಕೊಂಚ ಗಾಢ ಎನ್ನಿಸುವಂತಹ ಪರಿಚಯ ವಿರುವುದು ಇದೊಂದೆ ಕತೆಯಲ್ಲಿ. ಅದು ಹೇಗಿದೆ ಎಂದರೆ ‘ಸೂರ್ಯೋದಯ ಇಲ್ಲವೇ ಸೂರ್ಯಾಸ್ತ ವನ್ನು ವರ್ಣಿಸುವ ನವೋದಯ ಕವಿಯಂತೆ’ ಇಲ್ಲಿನ ಕತೆಗಾರ/ ನಿರೂಪಕ ಹೆಚ್ಚು ವರ್ಣನೆಗೆ ತೊಡಗುತ್ತಾನೆಯೇ ಹೊರತು ಕತೆಯೊಂದಿಗೆ, ಇಲ್ಲಿನ ಪಾತ್ರಗಳೊಂದಿಗೆ ಇಲ್ಲವೇ ನಿರೂಪಕನು ಕಳೆದುಕೊಂಡು ಈಗ ಹುಡುಕುತ್ತಿರುವ ಪ್ರೇಮದೊಂದಿಗೆ ಇಲ್ಲಿನ ಪರಿಸರ ಬೆರೆಯದೆ, ನೀರಿನ ಮೇಲೆ ತೇಲುವ ಜಿಡ್ಡಿನಂತೆ ಇದೆ.

ಈಗಾಗಲೇ ಮೂರು ಕಥಾ ಸಂಕಲನಗಳನ್ನು ಕನ್ನಡಕ್ಕೆ ಕೊಟ್ಟಿರುವ ರಶೀದರ ನಾಲ್ಕನೆಯ ಕಥಾ ಸಂಕಲನ ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್ ಸಂಕಲನ.

ಈ ಸಂಕಲನದ ಬಗ್ಗೆ ಎಲ್ಲರಂತೆ ನಾನೂ ಕತೆಗಳನ್ನು ಓದುವವರೆಗೂ ಕುತೂಹಲದಿಂದ ಇದ್ದೆ. ಇಲ್ಲಿನ ಕತೆಗಳನ್ನು ಓದಿದ ಮೇಲೆ ಅಬ್ದುಲ್ ರಶೀದರ ಹಿಂದಿನ ಕತೆಗಳಿಗಿಂತ ಎಷ್ಟು? ಏನು? ಹೇಗೆ? ಭಿನ್ನವಾಗಿವೆ ಎಂಬುದಕ್ಕೆ ಉತ್ತರ ಸಿಗೋದಿಲ್ಲ. ಉಳಿದಂತೆ ಇಲ್ಲಿರುವ ಕಥಾ ಸಂಕಲನದ ಶೀರ್ಷಿಕೆಯ ಕತೆ ‘ಲಾರ್ಡ್ ಕಾರ್ನ್ ವಾಲೀಸ್ ಮತ್ತು ಕ್ವೀನ್ ಎಲಿಜಬೆತ್’ ‘ಜಲಪುಷ್ಪ’, ‘ರಕ್ತಚಂದನ’ ‘ಕಲಗಚ್ಚು’ ಕತೆಗಳಲ್ಲಿನ ಕೇಂದ್ರ ವಸ್ತು ಮನುಷ್ಯನನ್ನು ಅವನ ತುಂಬು ಯೌವನ, ನಡು ವಯಸ್ಸಿನ ಕಾಲದಿಂದ ಆತನ ಮರಣದವರೆಗೂ ಕಾಡುವ ಪ್ರೇಮ, ಕಾಮ, ವಿರಹ, ಇವುಗಳ ಉತ್ಕಟತೆ, ಜಡತ್ವ, ನಿಸ್ಸಾರತೆಗಳಾಚೆ ಅವುಗಳ ಅರ್ಥ ಹುಡುಕಲು ಹೋಗಿ ಸೋಲುವ ದಡ್ಡ ಮನುಷ್ಯನ ವ್ಯಕ್ತಿ ಚಿತ್ರವೇ ಆಗಿರುವುದು. ಇದಿಷ್ಟೇ ಇಲ್ಲಿನ ಕತೆಗಳ ವಿಶೇಷತೆ. ಇದೊಂದು ವಿಚಾರವನ್ನು ಹೇಳಲು ರಶೀದರು ಎಂದಿನಂತೆ ತಮ್ಮ ಮೋಹಕ, ವೈನೋದಿಕ, ಸೆಳೆಗನ್ನಡವೆಂಬ ಭಾಷಿಕ ಬಲೆಯನ್ನು ಬಳಸಿ, ಜಲಪುಷ್ಟವೆಂಬ ಓದುಗನನ್ನು, (ಕೆಲವೊಮ್ಮೆ ದೊಡ್ಡ ವಿಮರ್ಶಕರನ್ನೂ) ಬೀಳಿಸುವ ಕೌಶಲದಲ್ಲಿ ಅದೆಷ್ಟು ಪಳಗಿದ್ದಾರೆ ಎಂಬುದಕ್ಕೆ ಇಲ್ಲಿನ ಮುನ್ನುಡಿ ಹಾಗೂ ಬೆನ್ನುಡಿ (ಜಾಕೆಟ್ ಪುಟದಲ್ಲಿ) ಗಳಲ್ಲಿನ ಮಾತುಗಳನ್ನು ಗಮನಿಸಿದರೆ ತಿಳಿಯುತ್ತದೆ.

ಈ ಮನುಷ್ಯ ಬದುಕನ್ನು ಸದಾ ಕಾಡುವ, ಕೊಲ್ಲುವ, ಸುಡುವ, ಕಾಪಿಡುವಂತಹವು ಪ್ರೇಮ ಹಾಗೂ ಕಾಮ. ಅವುಗಳ ಸುತ್ತಲೇ ಗೀಳು ಅಂಟಿಸಿಕೊಂಡು ಅವುಗಳನ್ನು, ಸಾಕಷ್ಟು ಪಡೆದೋ, ಪಡೆಯಲಾಗದೇ ಇದ್ದುದ್ದಕ್ಕೆ, ಅವುಗಳು ತನ್ನದಾಗದ್ದಕ್ಕೆ ನೊಂದು, ಬೆಂದ ಕಾಯದ ಮನಸ್ಸೊಂದು ತನ್ನ ಕಾಮ ನಿವೃತ್ತಿಯ ಅಂಚಿಗೆ ಬಂದದ್ದನ್ನು ಕಂಡು ಚಡಪಡಿಸುತ್ತಿರುವಂತೆ, ಆ ಚಡಪಡಿಕೆಗೆ ಭೂತಕಾಲದ ಮುಗ್ಧ ಪ್ರೇಮದ ಜವನಿಕೆಯನ್ನು ತೊಡಿಸುತ್ತಲೇ ತನ್ನೊಳಗಿನ ಪ್ರೇಮ ಕಾಮದ ಆ ಚಡಪಡಿಕೆಗೆ ಒಂದು ತಾತ್ವಿಕ ಚೌಕಟ್ಟನ್ನು ಕತೆಗಳ ಮೂಲಕ ಹಾಕುವ ಹುನ್ನಾರವೂ ಇಲ್ಲಿನ ಕತೆಗಳಲ್ಲಿ ಇದ್ದಂತಿದೆ.

ಅವರ ಹಿಂದಿನ ಕತೆಗಳಲ್ಲಿನ ಭಾಷೆ, ಅವರು ನಿರಾಯಾಸವಾಗಿ ಕತೆ ಕಟ್ಟುವ ಕೌಶಲ, ಮಂಡನೆ ಹಾಗೆ ಅಷ್ಟೇ ಪರಿಣಾಮಕಾರಿಯಾಗಿ ಮುಂದುವರಿದಿದ್ದರೆ, ಹಿಂದಿನ ಕತೆಗಳಲ್ಲಿನ ವಿಚಾರ ಮತ್ತು ಕತೆಗಳ ಲ್ಲಿನ ಪಾತ್ರಗಳ ವೈವಿಧ್ಯತೆ, ಆ ಕತೆಗಳು ಕಡೆಗೆ ಓದುಗನಲ್ಲಿ ಹುಟ್ಟಿಸುವ ಒಂದು ಬಗೆಯ ವಿಷಾದ, ಅಚ್ಚರಿ, ಗೊಂದಲ, ತಳಮಳ, ನೋವಿನಲ್ಲೂ ಒಂದು ಬಗೆಯ ಸುಖ ಇವೆಲ್ಲವೂ ಇಲ್ಲಿನ ಕತೆಗಳಲ್ಲಿ ಇಲ್ಲ.

ಇದಕ್ಕೆ ಕಾರಣ ಇಲ್ಲಿನ ಹಿರಿಯ ಕತೆಗಾರ್ತಿಗೆ ಮನುಷ್ಯನ ಬದುಕನ್ನು, ಅದರಲ್ಲೂ ಭಾರತೀಯ ಮನುಷ್ಯನೊಬ್ಬನ ಬದುಕನ್ನು ಈ ಪ್ರೇಮ, ಕಾಮವಷ್ಟೇ ಅಲ್ಲದೇ ಬದುಕಿನ ಅನೇಕ ವಿಚಾರಗಳು, ವಿಷಯಗಳು ಅವನ ಬದುಕನ್ನು ನಿಯಂತ್ರಿಸುತ್ತವೆ, ಸೋಲಿಸುತ್ತವೆ, ಗೆಲ್ಲಿಸುತ್ತವೆ, ಶರಣಾಗಿಸುತ್ತವೆ, ಸಾಯಿಸುತ್ತವೆ, ಮತ್ತೆ ಬದುಕಲು ಹಾದಿಯನ್ನೂ ಕೊಡುತ್ತವೆ ಎಂಬ ವಿಶಾಲನೋಟ ದಕ್ಕದೇ ಹೋಗಿರುವುದೋ? ಇಲ್ಲ ಅವುಗಳ ತಂಟೆ ನನಗ್ಯಾಕೆ ಎಂದು ತನ್ನ ಪಾಡಿಗೆ ತಾನು ಪ್ರೇಮ, ಕಾಮದ ಪರಿಣಾಮಗಳ ಕುರಿತೇ ಬರೆಯುತ್ತೇನೆ ಎಂದು ನಡು ವಯಸ್ಸಿನ ಕಡೆಗಾಲದಲ್ಲಿ ಮಾಡಿದ ಶಪಥವೋ ಗೊತ್ತಿಲ್ಲ.

Writer - ಎಚ್. ಎಸ್. ರೇಣುಕಾರಾಧ್ಯ

contributor

Editor - ಎಚ್. ಎಸ್. ರೇಣುಕಾರಾಧ್ಯ

contributor

Similar News