ಕೆಲಸದಿಂದ ವಜಾಗೊಂಡ ಬಿಎಂಟಿಸಿ ಚಾಲಕನಿಂದ ದಯಾಮರಣ ಕೋರಿ ಪತ್ರ

Update: 2022-05-07 13:02 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಮೇ 7: ದಯಾಮರಣ ಕೋರಿ ರಾಷ್ಟ್ರಪತಿ, ಪ್ರಧಾನಮಂತ್ರಿ ಹಾಗೂ ರಾಜ್ಯದ ಮುಖ್ಯಮಂತ್ರಿ, ಸಾರಿಗೆ ಸಚಿವರಿಗೆ ಬಿಎಂಟಿಸಿ ಚಾಲಕರೊಬ್ಬರು ಪತ್ರ ಬರೆದಿದ್ದಾರೆ. 

ಬಿಎಂಟಿಸಿ ನೌಕರ ಶಂಬುಲಿಂಗಯ್ಯ ಚಿಕ್ಕಮಠ ಎಂಬುವರು ಪತ್ರ ಬರೆದಿದ್ದು, ತಿನ್ನಲು ಅನ್ನವಿಲ್ಲ. ನಮ್ಮ ಕುಟುಂಬ ಬೀದಿಗೆ ಬಿದ್ದಿದೆ. ಮನೆ ಬಾಡಿಗೆ ಕಟ್ಟಲು ಸಹ ಆಗುತ್ತಿಲ್ಲ ಎಂದು ಅಳಲು ತೋಡಿಕೊಂಡಿದ್ದಾರೆ.

ನಾನು ಮುಷ್ಕರದಲ್ಲಿ ಭಾಗಿಯಾಗಿರಲಿಲ್ಲ. ಆದರೂ ಬಿಎಂಟಿಸಿ ಅಧಿಕಾರಿಗಳು ನನ್ನನ್ನು ಕೆಲಸದಿಂದ ವಜಾ ಮಾಡಿದ್ದಾರೆ. ಒಂದು ವರ್ಷದಿಂದ ಮಾಡಲು ಕೆಲಸವಿಲ್ಲ, ಈ ಬಗ್ಗೆ ಸಾಕಷ್ಟು ಬಾರಿ ಸಾರಿಗೆ ಸಚಿವರಿಗೆ ಮನವಿ ಮಾಡಿದರೂ, ನನಗೆ ನ್ಯಾಯ ಕೊಡಿಸಲಿಲ್ಲ. ಹಾಗಾಗಿ ನನಗೆ ಮತ್ತು ನನ್ನ ಪತ್ನಿ, ಮಕ್ಕಳಿಗೆ ದಯಾ ಮರಣ ಕೊಡಿ ಎಂದು ಅವರು ಹೇಳಿದ್ದಾರೆ.

ಈಗಾಗಲೇ ವಜಾಗೊಂಡ 5 ರಿಂದ 10 ಮಂದಿ ನೌಕರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಆದರೆ ಸರಕಾರ ವಜಾಗೊಂಡ ನೌಕರರಿಗೆ ಮತ್ತೆ ಕೆಲಸ ನೀಡುತ್ತಿಲ್ಲ. ಪ್ರತಿಭಟನೆಗೆ ಕರೆ ಕೊಟ್ಟವರನ್ನು ಮತ್ತು ಭಾಗಿಯಾದವರಿಗೆ ಮಾತ್ರ ಪುನಃ ಕೆಲಸಕ್ಕೆ ಕರೆಸಿಕೊಳ್ಳುತ್ತಿದ್ದಾರೆ. ಹೀಗಾಗಿ ನನಗೆ ಅನ್ಯಾಯವಾಗಿದೆ. ಸಾರಿಗೆ ಅಧಿಕಾರಿಗಳು ಮುಷ್ಕರದಲ್ಲಿ ಭಾಗವಹಿಸಿದ್ದೀರಿ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News