ಬೆಳ್ತಂಗಡಿ; ಆದಿವಾಸಿ ಮಹಿಳೆ ಮೇಲೆ ದೌರ್ಜನ್ಯ: ದುಷ್ಕರ್ಮಿಗಳ ಬಂಧನಕ್ಕೆ ಒತ್ತಾಯಿಸಿ ಪ್ರತಿಭಟನೆ

Update: 2022-05-09 16:33 GMT

ಬೆಳ್ತಂಗಡಿ; ರಾಜ್ಯದಲ್ಲಿ ಸರಕಾರ ಇದ್ದೂ ಇಲ್ಲದಂತಾಗಿದೆ. ಮಹಿಳೆಯರಿಗೆ ಹಾಗೂ ದಲಿತರಿಗೆ ರಕ್ಷಣೆಯಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಸಂತ್ರಸ್ತರಿಗೆ ರಕ್ಷಣೆ ನೀಡಬೇಕಾದ ಪೊಲೀಸರು ಆರೋಪಿಗಳಿಗೆ ರಕ್ಷಣೆ ನೀಡುತ್ತಿದ್ದಾರೆ ಎಂದು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ವಿಧಾನ ಪರಿಷತ್ ಶಾಸಕ ಹರೀಶ್ ಕುಮಾರ್ ಆರೋಪಿಸಿದ್ದಾರೆ.

ಬೆಳ್ತಂಗಡಿಯ ಮಿನಿ ವಿಧಾನ ಸೌಧದ ಎದುರು ಉಜಿರೆಯಲ್ಲಿ ಮಹಿಳೆಯ ಮೇಲೆ ದೌರ್ಜನ್ಯವೆಸಗಿದ ಆರೋಪಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಕಾಂಗ್ರೆಸ್ ಪಕ್ಷ, ಕಾರ್ಮಿಕ ಸಂಘಟನೆಗಳು ಹಾಗೂ ಸಮಾನ ಮನಸ್ಕ ಸಂಘಟನೆಗಳ ನೇತೃತ್ವದಲ್ಲಿ ನಡೆದ ಅನಿರ್ದಿಷ್ಟಾವಧಿ ದರಣಿಯನ್ನು ಉದ್ಘಾಟಿಸಿ ಮಾತನಾಡಿದರು. 

ರಾಜ್ಯದ ಪೊಲೀಸರಿಗೆ ಎಂತೆಂತಹಾ ಆರೋಪಿಗಳನ್ನೂ ಬಂಧಿಸುವ ಶಕ್ತಿಯಿದೆ ಆದರೆ ಪೊಲೀಸರನ್ನು ಶಾಸಕರು ಸಚಿವರು ನಿಯಂತ್ರಿಸುತ್ತಿದ್ದಾರೆ ಎಂದು ಅವರು ಆರೋಪಿಸಿದರು. 

ಮಹಿಳೆಯ ಮೇಲೆ ದೌರ್ಜನ್ಯ ನಡೆಸಿದ ಆರೋಪಿಗಳು ರಾಜಾರೋಷವಾಗಿ ತಿರುಗುತ್ತಿದ್ದಾರೆ. ಸಂತ್ರಸ್ತರು ಭಯದಲ್ಲಿ ಮನೆಯಲ್ಲಿರಬೇಕಾದ ಸ್ಥಿತಿಯಿದೆ. ರಾಜ್ಯದಲ್ಲಿ ಸರಕಾರಿ ಅಧಿಕಾರಿಗಳು ಪ್ರಾಮಾಣಿಕವಾಗಿ ಕೆಲಸ ಮಾಡಲು ಸಾಧ್ಯವಿಲ್ಲದ ಸ್ಥಿತಿ ನಿರ್ಮಾಣವಾಗಿದೆ. ಎಲ್ಲೆಡೆ ಭ್ರಷ್ಟಾಚಾರ ಲಂಚವೇ ತುಂಬಿದೆ  ರಾಜ್ಯದಲ್ಲಿ ಸರಕಾರ ಇದೆಯೋ ಇಲ್ಲವೇ ಎಂಬ ಅನುಮಾನ ಮೂಡುವಂತಾಗಿದೆ ಎಂದರು. 

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಮಾಜಿ ಶಾಸಕ ವಸಂತ ಬಂಗೇರ ಅವರು, ಬೆಳ್ತಂಗಡಿಯಲ್ಲಿ ಶಾಸಕರ ಸರ್ವಾಧಿಕಾರಿ ಆಡಳಿತ ನಡೆಯುತ್ತಿದೆ. ಇಲ್ಲಿ ಯಾರಿಗೂ ರಕ್ಷಣೆಯಿಲ್ಲವಾಗಿದೆ. ಸರಕಾರಿ ಅಧಿಕಾರಿಗಳು ಶಾಸಕರ ಏಜೆಂಟರಾಗಿ ವರ್ತಿಸುತ್ತಿದ್ದಾರೆ ಇಲ್ಲಿ ನಡೆಯುತ್ತಿರುವ ದೌರ್ಜನ್ಯಗಳು ಅವ್ಯವಹಾರಗಳ ಬಗ್ಗೆ ಅಧಿಕಾರಿಗಳು ಮೌನ ವಹಿಸುತ್ತಿದ್ದಾರೆ. ಬೆಳ್ತಂಗಡಿ ತಹಶೀಲ್ದಾರರಿಗೆ ಕಣ್ಣು ಕಾಣುವುದಿಲ್ಲ ಕಿವಿಯೂ ಕೇಳುವುದಿಲ್ಲದಂತಹ ಸ್ಥಿತಿ ಇದೆ ಎಂದು ಆರೋಪಿಸಿದರು.

ಪ್ರತಿಭಟನೆಯನ್ನುದ್ದೇಶಿಸಿ ಮಾಜಿ ಸಚಿವ ಕೆ‌ ಗಂಗಾಧರ ಗೌಡ ಮತ್ತು ಕಾರ್ಮಿಕ ಮುಂದಾಳು ಬಿ.ಎಮ್ ಭಟ್ ಮಾತನಾಡಿದರು.

ಸಭೆಯಲ್ಲಿ‌ ಉಭಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಶೈಲೇಶ್ ಕುಮಾರ್ ಮತ್ತು ರಂಜನ್ ಗೌಡ, ವಿವಿಧ ಘಟಕಗಳ ಪದಾಧಿಕಾರಿಗಳಾದ ಮನೋಹರ ಇಳಂತಿಲ, ಕೇಶವ ಪಿ‌ ಗೌಡ, ನಮಿತಾ‌ ಕೆ ಪೂಜಾರಿ, ವಂದನಾ, ಶಾಹುಲ್ ಹಮೀದ್, ಶೇಖರ್ ಕುಕ್ಕೇಡಿ, ಅನಿಲಗ ಪೈ, ಹಕೀಂ ಕೊಕ್ಕಡ,‌ ಪ್ರವೀಣ್ ಗೌಡ, ಜಯವಿಕ್ರಮ ಕಲ್ಲಾಪು, ಅಯೂಬ್ ಡಿ.ಕೆ,‌ ಮುಹಮ್ಮದ್ ರಫಿ,‌ ಜಗದೀಶ್ ಡಿ, ನೆಬಿಸ, ಈಶ್ವರಿ, ಮಂಜುನಾಥ, ಸ್ಯಾಮ್ ರಾಜ್, ಕಿರಣ ಪ್ರಭಾ,‌ ಕುಮಾರಿ, ರೋಯಿ ಜೋಸೆಫ್, ಅಬ್ದುಲ್ ರಹಿಮಾನ್ ಪಡ್ಪು, ನೇಮಿರಾಜ್ ಕಿಲ್ಲೂರು ಮೊದಲಾದವರು ಉಪಸ್ಥಿತರಿದ್ದರು.

ಬಿ ಅಶ್ರಫ್ ನೆರಿಯ‌ ಸ್ವಾಗತಿಸಿ, ಸಲೀಂ ಗುರುವಾಯನಕೆರೆ ನಿರೂಪಿಸಿದರು. ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆತ ಹಿನ್ನೆಲೆಯಲ್ಲಿ ಅನಿರ್ದಿಷ್ಟಾವಧಿ ಎಂದು ತೀರ್ಮಾನಿಸಿದ್ದ ಪ್ರತಿಭಟನೆಯನ್ನು ಸಂಘಟಕರು ಮಧ್ಯಾಹ್ನಕ್ಕೆ ಮುಕ್ತಾಯಗೊಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News