ಮಂಗಳೂರು: ಮೇ 12ರಂದು ‘ಉದ್ಯಮಿಯಾಗು, ಉದ್ಯೋಗ ನೀಡು‘ ಕಾರ್ಯಕ್ರಮ

Update: 2022-05-11 13:29 GMT

ಮಂಗಳೂರು : ಯುವ ಜನತೆ ಶಿಕ್ಷಣ ಪೂರೈಸಿದ ನಂತರ ಕೆಲಸ ಹುಡುಕುವ ಬದಲು ಅವರೇ ಉದ್ಯಮ ಸ್ಥಾಪಿಸಿ ಇತರರಿಗೆ ಉದ್ಯೋಗ ನೀಡುವಂತಾಗಬೇಕು. ಈ ನಿಟ್ಟಿನಲ್ಲಿ ಎಲ್ಲಾ ಅಗತ್ಯ ಮಾಹಿತಿ ಒದಗಿಸಲು ಕೈಗಾರಿಕಾ ಇಲಾಖೆಯು ನಗರದಲ್ಲಿ ಮೇ 12ರಂದು ‘ಉದ್ಯಮಿಯಾಗು, ಉದ್ಯೋಗ ನೀಡು‘ ಕಲ್ಪನೆಯೊಂದಿಗೆ ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ ಎಂದು ಕರ್ನಾಟಕ ಉದ್ಯೋಗ ಮಿತ್ರದ ವ್ಯವಸ್ಥಾಪಕ ನಿರ್ದೇಶಕ ದೊಡ್ಡಬಸವರಾಜು ತಿಳಿಸಿದರು.

ಯೆಯ್ಯಾಡಿಯಲ್ಲಿರುವ ಜಿಲ್ಲಾ ಕೈಗಾರಿಕಾ ಕೇಂದ್ರದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ನಗರದ ಟಿಎಂಎ ಪೈ ಇಂಟರ್ ನ್ಯಾಷನಲ್ ಕನ್ವೆನ್ಷನ್ ಸೆಂಟರ್‌ನಲ್ಲಿ ನಡೆಯುವ ಕಾರ್ಯಕ್ರಮವನ್ನು ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಡಾ. ಮುರುಗೇಶ್ ಆರ್, ನಿರಾಣಿ ಬೆಳಗ್ಗೆ ೯:೩೦ಕ್ಕೆ ಉದ್ಘಾಟಿಸಲಿದ್ದಾರೆ.

ಕಳೆದ ಅಕ್ಟೋಬರ್‌ನಲ್ಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬೆಂಗಳೂರಿನಲ್ಲಿ ಈ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಮುರುಗೇಶ ನಿರಾಣಿ ಕೈಗಾರಿಕಾ ಸಚಿವರಾದ ಬಳಿಕ ಆದ್ಯತೆಯ ಮೇರೆಗೆ ‘ಉದ್ಯಮಿಯಾಗು ಉದ್ಯೋಗ ನೀಡು ಮತ್ತು ಕೈಗಾರಿಕಾ ಅದಾಲತ್‌‘ ಕಾರ್ಯಕ್ರಮ ಆಯೋಜಿಸಿದ್ದಾರೆ.

ಬೆಂಗಳೂರು, ಕಲಬುರಗಿ, ಬೆಳಗಾವಿ ಹಾಗೂ ಮೈಸೂರಿನಲ್ಲಿ ನಡೆದ ಈ ಕಾರ್ಯಕ್ರಮ ಅತ್ಯಂತ ಯಶಸ್ವಿಯಾ ಗಿದ್ದು, ಅವರ ನೇತೃತ್ವದಲ್ಲಿ ಈಗ ಮಂಗಳೂರಿನಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ, ಮುಂದಿನ ಹಂತದಲ್ಲಿ ಬೆಂಗಳೂರಿನ ಕಂದಾಯ ವಿಭಾಗ ೨ರಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದರು.

ಮೇ.೧೨ರ ಕಾರ್ಯಕ್ರಮದಲ್ಲಿ ೫ ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಭಾಗವಹಿಸುವ ನಿರೀಕ್ಷೆ ಇದೆ, ಕಾರ್ಯಕ್ರಮದಲ್ಲಿ ಉದ್ಯಮಿಗಳಾಗುವುದು ಹೇಗೆ? ಎಲ್ಲಿ ಮತ್ತು ಹೇಗೆ ಸಾಲಸೌಲಭ್ಯ ದೊರೆಯುತ್ತದೆ? ಯಾವ ಯಾವ ಕ್ಷೇತ್ರಗಳಲ್ಲಿ ಹೂಡಿಕೆಗೆ ಅವಕಾಶ ಇದೆ ಎಂಬುದನ್ನು ತಜ್ಞರು ವಿವರಿಸಲಿದ್ದಾರೆ ಎಂದು ದೊಡ್ಡಬಸವರಾಜು ತಿಳಿಸಿದರು.

ಪುತ್ತೂರು ಹಾಗೂ ಉಡುಪಿಯ ವಿದ್ಯಾರ್ಥಿಗಳಿಗೆ ವೀಡಿಯೋ ಕಾನ್ಫರೆನ್ಸ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾ ಗಲು ಪೂರಕ ವ್ಯವಸ್ಥೆ ಕಲ್ಪಿಸಲಾಗಿದೆ ವಿದ್ಯಾರ್ಥಿ/ವಿದ್ಯಾರ್ಥಿನಿಯರು ಹಾಗೂ ಹೊಸ ಉದ್ಯಮ ಆರಂಭಿಸುವವರು ಇದರ ಸದುಪಯೋಗಪಡಿಸಿಕೊಳ್ಳಬೇಕು ಎಂದರು.

ಹೆಚ್ಚುವರಿ ತರಬೇತಿ: ಈ ಕಾರ್ಯಗಾರ ಒಂದು ದಿನಕ್ಕೆ ಸೀಮಿತವಾಗಿಲ್ಲ. ಮುಂದಿನ ದಿನಗಳಲ್ಲಿ ವಿದ್ಯಾರ್ಥಿಗಳಿಗೆ ಇನ್ನೂ ಹೆಚ್ಚಿನ ತರಬೇತಿ, ಮಾರ್ಗದರ್ಶನ ನೀಡಲಾಗುತ್ತದೆ. ಅದಕ್ಕಾಗಿ ಪ್ರತಿ ಜಿಲ್ಲೆಯ ೩-೪ ಕೇಂದ್ರಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ. ಇದರಲ್ಲಿ ೫೦,೦೦೦ ಮಂದಿ ಭಾಗಿಯಾಗುವ ನಿರೀಕ್ಷೆ ಇದೆ. ನಂತರ ೪೦-೫೦ ತಾಸಿನ ಆನ್‌ಲೈನ್ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಸಲಾಗುತ್ತದೆ. ಆಯ್ದ ೧೦,೦೦೦ ಆಸಕ್ತರಿಗೆ ಅವರ ಆಸಕ್ತಿಯ ಕ್ಷೇತ್ರಗಳಲ್ಲಿ ಅಥವಾ ಐಬಿಎಂ, ವಿಪ್ರೊ,  ಇನ್ಫೋಸಿಸ್ ಕಂಪನಿಗಳಲ್ಲಿ ೩ ದಿನಗಳ ತರಬೇತಿ ನೀಡಲಾಗುತ್ತದೆ. ಅಂತಿಮ ಹಂತದವರೆಗೆ ಆಸಕ್ತಿ ಕಾಯ್ದುಕೊಳ್ಳುವ ೨,೦೦೦ ಮಂದಿಗೆ ಮಾರ್ಗದರ್ಶಕರ ಜತೆ ನೇರ ಸಂಪರ್ಕ ಕಲ್ಪಿಸಲಾಗುತ್ತದೆ.  ಈ ಪೈಕಿ ಕನಿಷ್ಠ ೧,೦೦೦ ಜನರಾದರೂ ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮುವ ನಿರೀಕ್ಷೆ ಇದೆ ಎಂದ ಅವರು ವಿದ್ಯಾರ್ಥಿಗಳಿಗೆ ಉದ್ಯಮ ಕುರಿತ ಮಾಹಿತಿ/ತರಬೇತಿಗೆ ಪ್ರತ್ಯೇಕ ಪಠ್ಯಕ್ರಮ ರೂಪಿಸಲಾಗುವುದು. ಟೆಕ್ಸಾಕ್ ಎಂಬ ತಾಂತ್ರಿಕ ಸಂಸ್ಥೆ ಮೂಲಕ ಈ ಕಾರ್ಯಕ್ರಮ ಅನುಷ್ಠಾನಗೊಳಿಸಲಾಗುವುದು ಎಂದರು.

ಕೈಗಾರಿಕಾ ಅದಾಲತ್: ಉದ್ಯಮಿಗಳ ಸಮಸ್ಯೆಗಳನ್ನು ಬಗೆಹರಿಸುವ ನಿಟ್ಟಿನಲ್ಲಿ ಕೈಗಾರಿಕಾ ಇಲಾಖೆಯು ಮಂಗಳೂರು ವಿಭಾಗದಲ್ಲಿ ಮೇ ೧೨ರಂದು ಅಪರಾಹ್ನ ೩:೩೦ಕ್ಕೆ ’ಕೈಗಾರಿಕಾ ಅದಾಲತ್’ ಕಾರ್ಯಕ್ರಮ ಹಮ್ಮಿಕೊಂಡಿದೆ. ಈ ಮೂಲಕ ಸರಕಾರವೇ ಉದ್ಯಮಿಗಳ ಮನೆ ಬಾಗಿಲಿಗೆ ಹೋಗಿ ಉದ್ಯಮದಾರರ ಸಮಸ್ಯೆ ಆಲಿಸಿ, ಸಮಸ್ಯೆ ಇತ್ಯರ್ಥ ಪಡಿಸುವ ಪ್ರಾಮಾಣಿಕ ಪ್ರಯತ್ನ ಮಾಡಲಿದೆ.  ದ.ಕ.,  ಉಡುಪಿ ಭಾಗದ ಉದ್ಯಮಿಗಳ ಸಮಸ್ಯೆಗಳನ್ನು ಆಲಿಸಿ, ಸೂಕ್ತ ಪರಿಹಾರ ಸೂಚಿಸಲಾಗುತ್ತದೆ ಎಂದು ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ (ಎಂಎಸ್‌ಎಂಇ ಮತ್ತು ಪಿಪಿ) ಅಪರ ನಿರ್ದೇಶಕ ಹೆಚ್.ಎಂ. ಶ್ರೀನಿವಾಸ್ ಹೇಳಿದರು.

ವಿದ್ಯುತ್ ಸರಬರಾಜು ಕಂಪನಿ, ಪೌರಾಡಳಿತ ಇಲಾಖೆ, ನಗರಾಭಿವೃದ್ಧಿ ಇಲಾಖೆ, ನಗರ ಯೋಜನಾ ಇಲಾಖೆ, ಕಾರ್ಮಿಕ ಇಲಾಖೆ, ಕಾರ್ಖಾನೆ ಮತ್ತು ಬಾಯ್ಲರ್ ಇಲಾಖೆ, ಗ್ರಾಮೀಣಾಭಿವೃದ್ಧಿ ಇಲಾಖೆ ಮುಂತಾದ ಇಲಾಖೆಗಳಿಗೆ ಸಂಬಂಧಿಸಿದ ಸಮಸ್ಯೆಗಳ ಇತ್ಯರ್ಥಕ್ಕೆ ಕ್ರಮ ವಹಿಸಲಾಗುತ್ತದೆ.  ಅಲ್ಲದೆ ಕೈಗಾರಿಕಾ ಘಟಕ ಸ್ಥಾಪನೆಯ  ವಿವಿಧ ಹಂತದ ಅನುಮತಿ ಪಡೆಯಲು ಈ ವೇದಿಕೆ ನೆರವಾಗಲಿದೆ. ಜಿಲ್ಲೆಯಿಂದ ಹಲವು ಇಲಾಖೆಗಳಿಗೆ ಸಂಬಂಧಿಸಿದ  ಅರ್ಜಿಗಳು ಬಂದಿವೆ. ಈಗಾಗಲೇ ಕೆಲವರ ಸಮಸ್ಯೆಗೆ ಪರಿಹಾರ ಸೂಚಿಸಲಾಗಿದೆ.  ಇನ್ನು ಕೆಲವು ಅರ್ಜಿಗಳ ಕುರಿತು ಸಚಿವರು ಮೇ ೧೨ರಂದು  ನೇರವಾಗಿ ಉದ್ಯಮಿಗಳ ಜತೆ ಚರ್ಚಿಸಿ, ಪರಿಹಾರ ಸೂಚಿಸಲಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಗೋಕುಲ್‌ ದಾಸ್ ನಾಯಕ್ ಹಾಗೂ ಟೆಕ್ಸಾಕ್ ಸಿಇಒ ರಮಾನಂದ ನಾಯಕ್ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News