ದೀರ್ಘಕಾಲ ಗೈರು ಹಾಜರಾದ ಪೌರಕಾರ್ಮಿಕರನ್ನು ತೆಗೆಯುವಂತೆ ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಸೂಚನೆ

Update: 2022-05-13 13:24 GMT

ಬೆಂಗಳೂರು, ಮೇ 13: ತುಂಬಾ ದಿನಗಳಿಂದ ಕೆಲಸಕ್ಕೆ ಬಾರದಿರುವ ಪೌರಕಾರ್ಮಿಕರನ್ನು ತೆಗೆದು, ಬೇರೆಯವರನ್ನು ನಿಯೋಜನೆ ಮಾಡಿಕೊಳ್ಳಲು ಬಿಬಿಎಂಪಿ ಮುಖ್ಯ ಆಯುಕ್ತ ತುಷಾರ್ ಗಿರಿನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಶುಕ್ರವಾರ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಯ ದಾಸರಹಳ್ಳಿ ವಲಯ ವ್ಯಾಪ್ತಿಯಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಪಾಲಿಕೆಯ ಅಧಿಕಾರಿಗಳೊಂದಿಗೆ ಪರಿಶೀಲನೆ ನಡೆಸಿ ಮಾತನಾಡಿದ ಅವರು, ಪೌರಕಾರ್ಮಿಕರ ಸಮಸ್ಯೆಗಳನ್ನು ಈಡೇರಿಸಬೇಕು. ತುಂಬಾ ದಿನ ಕೆಲಸಕ್ಕೆ ಗೈರು ಹಾಜರಾದರೆ, ಅವರನ್ನು ಕೆಲಸದಿಂದ ತೆಗೆಯಬೇಕು ಎಂದು ಅವರು ಹೇಳಿದರು. 

ಅಗತ್ಯವಿದ್ದರೆ, ಉದ್ಯಾನವನದ ಮರದ ಎಲೆಗಳ ಕಸವನ್ನು ಉದ್ಯಾನದಲ್ಲೇ ಕಾಂಪೋಸ್ಟಿಂಗ್ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು. ಜೊತೆಗೆ ವಾಯುವಿಹಾರ ಮಾರ್ಗ ಸೇರಿದಂತೆ ಸರಿಯಾಗಿ ನಿರ್ವಹಣೆ ಮಾಡಬೇಕು ಎಂದು ಅವರು ಸೂಚಿಸಿದರು. 

ಅಬ್ಬಿಗೆರೆ ಮುಖ್ಯ ರಸ್ತೆ(ಅರಣ್ಯ ರಸ್ತೆ)ಯಿಂದ ವೈನಾಗ್ ಜಂಕ್ಷನ್ ಮೂಲಕ ಗಂಗಮ್ಮ ಗುಡಿ ಪೊಲೀಸ್ ಠಾಣೆಯವರೆಗೆ 9.5 ಕೋಟಿ ರೂ. ವೆಚ್ಚದಲ್ಲಿ 1.35 ಕಿ.ಮೀ ಉದ್ದದ 30 ಅಡಿ ರಸ್ತೆಯನ್ನು 80 ಅಡಿಗೆ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿದೆ. ರಸ್ತೆ ಬದಿ ಕಾಲುವೆ, ಪಾದಚಾರಿ ಮಾರ್ಗ ಸೇರಿದಂತೆ ಬಾಕಿ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸಿ ಸುಗಮ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಶೆಟ್ಟಿಹಳ್ಳಿ ವಾರ್ಡ್ ವ್ಯಾಪ್ತಿಯ ಗಂಗಮ್ಮ ಗುಡಿ ಪೊಲೀಸ್ ಠಾಣೆ ಹಿಂಭಾಗವಿರುವ ಟ್ರಾನ್ಸ್‍ಫರ್ ಸ್ಟೇಷನ್, ಆಟೋ ಟಿಪ್ಪರ್ ಮಸ್ಟರಿಂಗ್ ಪಾಯಿಂಟ್, ಒಣ ತ್ಯಾಜ್ಯ ಸಂಗ್ರಹಣಾ ಘಟಕಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.   

ಎಸ್.ಟಿ.ಪಿ ನಿರ್ಮಾಣಕ್ಕಾಗಿ ಜಲಮಂಡಳಿಯಿಂದ 800 ಎಂ.ಎಂ ಪೈಪ್‍ಲೈನ್ ಅನ್ನು ಮೇಡರಹಳ್ಳಿ ರಾಜಕಾಲುವೆ ಭಾಗದಲ್ಲಿ ಹಾದುಹೋಗಿದೆ. ಕೆಲಸ ಇನ್ನೂ ಪ್ರಗತಿಯಲ್ಲಿರುವುದರಿಂದ ಮಳೆ ಪ್ರಾರಂಭವಾದರೆ ರಾಜಕಾಲುವೆಯಲ್ಲಿ ಮಳೆ ನೀರು ಸರಿಯಾಗಿ ಹರಿಯದೆ ಸುತ್ತಮುತ್ತಲಿನ ಮನೆಗಳಿಗೆ ನೀರು ನುಗ್ಗುವ ಸಂಭವ ಹೆಚ್ಚಿದೆ. ಆದುದರಿಂದ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಿ ಹೂಳೆತ್ತಿ ಮಳೆ ನೀರು ಸರಾಗವಾಗಿ ಹರಿದು ಹೋಗುವಂತೆ ಮಾಡಲು ಜಲಮಂಡಳಿಗೆ ಸೂಚನೆ ನೀಡಿದರು.

ಮೇಡರಹಳ್ಳಿ ರಸ್ತೆಯಲ್ಲಿ ಜಲಮಂಡಳಿ ವತಿಯಿಂದ ಕುಡಿಯುವ ನೀರು ಹಾಗೂ ಒಳಚರಂಡಿ ಕೆಲಸ ಪೂರ್ಣಗೊಂಡಿದ್ದು, ರಸ್ತೆ ಪುನಶ್ಚೇತನ ಕಾರ್ಯವನ್ನು ಇನ್ನೂ ಪೂರ್ಣಗೊಳಿಸದೇ ಇರುವುದನ್ನು ಗಮನಿಸಿ ಕೂಡಲೆ ರಸ್ತೆ ಪುನಶ್ಚೇತನ ಕಾರ್ಯವನ್ನು ಪೂರ್ಣಗೊಳಿಸಬೇಕು ಎಂದು ಅವರು ಹೇಳಿದರು.

ಕಿರ್ಲೋಸ್ಕರ್ ಬಡಾವಣೆಯಲ್ಲಿ 110 ಹಳ್ಳಿ ರಸ್ತೆ ಪುನಶ್ಚೇತನ ಕಾರ್ಯ ಪರಿಶೀಲನೆ ನಡೆಸಿ, ಸರಿಯಾದ ಜೆಲ್ಲಿಯನ್ನು ಹಾಕಿ ಡಾಂಬರೀಕರಣ ಮಾಡಬೇಕು. ಜೊತೆಗೆ ರಸ್ತೆ ಬದಿ ಚರಂಡಿಗಳನ್ನು ಸರಿಯಾಗಿ ನಿರ್ಮಿಸಬೇಕು. ರಸ್ತೆ ಪುನಶ್ಚೇತನ ಕಾರ್ಯ ಮುಗಿದ ನಂತರ ಮತ್ತೆ ರಸ್ತೆ ಅಗೆಯದಂತೆ ನೋಡಿಕೊಳ್ಳಬೇಕು ಎಂದರು.

ಹೆಸರಘಟ್ಟ ಮುಖ್ಯ ರಸ್ತೆ(4 ಕಿ.ಮೀ ಉದ್ದ)ಯ ಅಭಿವೃದ್ಧಿ ಕಾಮಗಾರಿಯನ್ನು 15 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಂಡಿದ್ದು, ಜಲಮಂಡಳಿಯಿಂದ ಒಳಚರಂಡಿ ಹಾಗೂ ಕುಡಿಯುವ ನೀರಿನ ಕಾಮಗಾರಿ ಮುಗಿದಿದ್ದು, ರಸ್ತೆ ಡಾಂಬರೀಕರಣ ಹಾಕುವ ಪ್ರಕ್ರಿಯೆ ಪ್ರಾರಂಭವಾಗಿದೆ. ಈ ಪೈಕಿ ರಸ್ತೆ ದುರಸ್ತಿ ಕಾರ್ಯವನ್ನು ಮುಗಿಸಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

2.5 ಕಿ.ಮೀ ಉದ್ದದ ನೆಲಗದನಹಳ್ಳಿ ಮುಖ್ಯ ರಸ್ತೆಯನ್ನು 20 ಕೋಟಿ ರೂ. ವೆಚ್ಚದಲ್ಲಿ 30 ಅಡಿಯಿಂದ 60 ಅಡಿಗೆ ಅಗಲೀಕರಣ ಕೆಲಸ ಪ್ರಾರಂಭವಾಗಿದೆ. ಇದರಿಂದ ಈ ಭಾಗದಲ್ಲಿ ಬಹುತೇಕ ಸಂಚಾರ ದಟ್ಟಣೆ ಕಡಿಮೆಯಾಗಲಿದ್ದು, ಅಭಿವೃದ್ಧಿ ಹಕ್ಕು ಹಸ್ತಾಂತರ(ಟಿಡಿಆರ್) ಪ್ರಕ್ರಿಯೆಯನ್ನು ಮುಗಿಸಿ ನಿಗದಿತ ಸಮಯದಲ್ಲಿ ಕಾಮಗಾರಿಯನ್ನು ಪೂರ್ಣಗೊಳಿಸಲು ಅಧಿಕಾರಿಗಳಿಗೆ ಅವರು ಸೂಚನೆ ನೀಡಿದರು.

ಘಟಕಗಳ ಬಳಿ ಸ್ಥಳೀಯರಿಗೆ ಯಾವುದೇ ರೀತಿಯ ಸಮಸ್ಯೆ ಆಗದಂತೆ, ವಾಸನೆ ಬಾರದಂತೆ ತಂತ್ರಜ್ಞಾನ ಬಳಸಿಕೊಂಡು ಕೆಲಸ ಮಾಡಬೇಕು. ಘಟಕವನ್ನು ಸಮರ್ಪಕವಾಗಿ ನಿರ್ವಹಣೆ ಮಾಡಿ ಹೆಚ್ಚು ತ್ಯಾಜ್ಯವನ್ನು ಸಂಸ್ಕರಿಸಿ, ಹೆಚ್ಚು ಗೊಬ್ಬರ ತಯಾರಿಸುವ ನಿಟ್ಟಿನಲ್ಲಿ ಕೆಲಸ ಮಾಡಲು ಅಧಿಕಾರಿಗಳಿಗೆ ಅವರು ತಿಳಿಸಿದರು.

ಚೊಕ್ಕಚಂದ್ರ ಕೆರೆಯು 27 ಎಕರೆ ಪ್ರದೇಶದಲ್ಲಿದ್ದು, ಕೆರೆಯ ಬಳಿಯಿರುವ ರಾಜಕಾಲುವೆಯಲ್ಲಿ ವಾರ್ಷಿಕ ನಿರ್ವಹಣೆ ಗುತ್ತಿಗೆಯಡಿ ನಿರಂತರವಾಗಿ ಹೂಳೆತ್ತುವ ಕಾರ್ಯ ಮಾಡಬೇಕು. ಇದೇ ಸ್ಥಳದಲ್ಲಿ ಮಳೆಯಾದರೆ ರಾಜಕಾಲುವೆ ತುಂಬಿ ರಸ್ತೆ ಮೇಲೆ ನೀರು ಹರಿಯುತ್ತಿದ್ದು, ಅದನ್ನು ತಪ್ಪಿಸುವ ಸಲುವಾಗಿ ಪರ್ಯಾಯ ಕಾಲುವೆ ನಿರ್ಮಾಣ ಮಾಡಬೇಕು. ತ್ವರಿತವಾಗಿ ಕಾಮಗಾರಿ ಕೈಗೆತ್ತಿಕೊಂಡು ರಸ್ತೆ ಮೇಲೆ ನೀರು ಹರಿಯದಂತೆ ಕ್ರಮ ಕೈಗೊಳ್ಳಲು ಸೂಚನೆ ನೀಡಿದರು.

ಇದೇ ವೇಳೆ ಶಾಸಕ ಮಂಜುನಾಥ್, ವಲಯ ಆಯುಕ್ತ ಶರತ್, ವಲಯ ಜಂಟಿ ಆಯುಕ್ತ ಜಗದೀಶ್, ಘನತ್ಯಾಜ್ಯ ವಿಭಾಗದ ಜಂಟಿ ಆಯುಕ್ತ ಪರಶುರಾಮ್, ಮುಖ್ಯ ಇಂಜಿನಿಯರ್ ವಿಜಯ್ ಕುಮಾರ್, ಪ್ರಹ್ಲಾದ್, ಬಸವರಾಜ್ ಕಬಾಡೆ, ಸುಗುಣಾ, ವಿಜಯ್ ಕುಮಾರ್ ಹರಿದಾಸ್, ಹಾಗೂ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.

----------------------------------------
ಸುಂಕದಕಟ್ಟೆಯಿಂದ ಮಾಗಡಿ ರಸ್ತೆಗೆ ಸಂಪರ್ಕ ಕಲ್ಪಿಸುವ ಸ್ಥಳದಲ್ಲಿ 100 ಮೀಟರ್ ಖಾಸಗಿ ಸ್ಥಳದ ಮೂಲಕ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದ್ದು, ರಸ್ತೆಗೆ ಅನುವು ಮಾಡಿಕೊಟ್ಟಿರುವ ಮಾಲಕರಿಗೆ ಟಿಡಿಆರ್ ನೀಡಿ ರಸ್ತೆಯನ್ನು ಪಾಲಿಕೆಗೆ ಹಸ್ತಾಂತರ ಮಾಡಿಕೊಂಡು ರಸ್ತೆಯನ್ನು ಅಭಿವೃದ್ಧಿ ಪಡಿಸಲು ಕ್ರಮ ತೆಗೆದುಕೊಳ್ಳಬೇಕು. 

-ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ 

-----------------------
ದೊಡ್ಡಬಿದರಕಲ್ಲು ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ 150 ಟನ್ ಸಂಸ್ಕರಿಸುವ ಸಾಮಥ್ರ್ಯವಿದ್ದು, ಸದ್ಯ ಪ್ರತಿನಿತ್ಯ 90 ರಿಂದ 100 ಟನ್ ಹಸಿ ತ್ಯಾಜ್ಯವನ್ನು ಸ್ವೀಕರಿಸಲಾಗುತ್ತಿದೆ. ವಿವಿಧ ಹಂತಗಳಲ್ಲಿ 43 ದಿನಗಳಲ್ಲಿ ಗೊಬ್ಬರವಾಗಿ ಪರಿವರ್ತನೆಯಾಗಲಿದೆ. 1 ಮೆಟ್ರಿಕ್ ಟನ್ ಅನ್ನು ಕೃಷಿ ಇಲಾಖೆ ಮುಖಾಂತರ ರೈತರಿಗೆ 200 ರೂ. ಗೆ ಗೊಬ್ಬರವನ್ನು ನೀಡಲಾಗುವುದು.

-ತುಷಾರ್ ಗಿರಿನಾಥ್, ಬಿಬಿಎಂಪಿ ಮುಖ್ಯ ಆಯುಕ್ತ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News