​ಧರ್ಮ ಸಂಸದ್‌ ದ್ವೇಷಭಾಷಣ ಪ್ರಕರಣ: ಜೀತೇಂದ್ರ ನಾರಾಯಣ್‌ ತ್ಯಾಗಿಗೆ ಮಧ್ಯಂತರ ಜಾಮೀನು

Update: 2022-05-17 12:52 GMT

ಹೊಸದಿಲ್ಲಿ: ಹರಿದ್ವಾರ ಧರ್ಮ ಸಂಸದ್ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಮರ ವಿರುದ್ಧ ಪ್ರಚೋದನಕಾರಿ ಭಾಷಣ ಮಾಡಿದ ಆರೋಪದ ಮೇಲೆ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿಗೆ ಸುಪ್ರೀಂ ಕೋರ್ಟ್ ಮಂಗಳವಾರ ಮೂರು ತಿಂಗಳ ಮಧ್ಯಂತರ ಜಾಮೀನು ನೀಡಿದೆ.

ನ್ಯಾಯಮೂರ್ತಿಗಳಾದ ಅಜಯ್ ರಸ್ತೋಗಿ ಮತ್ತು ವಿಕ್ರಮ್ ನಾಥ್ ಅವರನ್ನೊಳಗೊಂಡ ಪೀಠವು ತ್ಯಾಗಿ ಅವರು ದ್ವೇಷದ ಭಾಷಣದಲ್ಲಿ ಪಾಲ್ಗೊಳ್ಳುವುದಿಲ್ಲ ಮತ್ತು ಎಲೆಕ್ಟ್ರಾನಿಕ್ ಅಥವಾ ಡಿಜಿಟಲ್ ಅಥವಾ ಸಾಮಾಜಿಕ ಮಾಧ್ಯಮಗಳಿಗೆ ಯಾವುದೇ ಹೇಳಿಕೆ ನೀಡುವುದಿಲ್ಲ ಎಂದು ಭರವಸೆ ನೀಡುವಂತೆ ಸೂಚಿಸಿತು.

ಈ ವರ್ಷದ ಮಾರ್ಚ್‌ನಲ್ಲಿ ಉತ್ತರಾಖಂಡ ಹೈಕೋರ್ಟ್ ತನ್ನ ಜಾಮೀನು ಅರ್ಜಿಯನ್ನು ವಜಾಗೊಳಿಸಿದ ನಂತರ ತ್ಯಾಗಿ ಅವರು ಉನ್ನತ ನ್ಯಾಯಾಲಯವನ್ನು ಸಂಪರ್ಕಿಸಿದ್ದರು. ಜನವರಿ 2, 2022 ರಂದು ಹರಿದ್ವಾರ ಕೊತ್ವಾಲಿಯಲ್ಲಿರುವ ಜ್ವಾಲಾಪುರ ಹರಿದ್ವಾರ ನಿವಾಸಿ ನದೀಮ್ ಅಲಿ ಅವರ ದೂರಿನ ಮೇರೆಗೆ ತ್ಯಾಗಿ ಮತ್ತು ಇತರರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News