ಸ್ವೀಡನ್, ಫಿನ್‌ಲ್ಯಾಂಡ್ ನೇಟೊ ಸದಸ್ಯತ್ವಕ್ಕೆ ವಿರೋಧ ದೃಢಪಡಿಸಿದ ಟರ್ಕಿ ‌

Update: 2022-05-17 18:49 GMT

ಅಂಕಾರ, ಮೇ 17: ಸ್ವೀಡನ್ ಮತ್ತು ಫಿನ್‌ಲ್ಯಾಂಡ್ ದೇಶಗಳು ನೇಟೊದ ಸದಸ್ಯತ್ವ ಪಡೆಯಲು ಟರ್ಕಿಯ ವಿರೋಧವಿದೆ ಎಂದು ಟರ್ಕಿ ಅಧ್ಯಕ್ಷ ರೆಸೆಪ್ ಎರ್ಡೋಗನ್ ಸೋಮವಾರ ದೃಢಪಡಿಸಿದ್ದು, ಈ ವಿಷಯದ ಬಗ್ಗೆ ಸಂಧಾನ ನಡೆಸಲು ಟರ್ಕಿಗೆ ನಿಯೋಗ ರವಾನಿಸುವ ನಾರ್ಡಿಕ್ ದೇಶಗಳ ಪ್ರಸ್ತಾವನೆಯನ್ನು ತಳ್ಳಿಹಾಕಿದ್ದಾರೆ.

 ಟರ್ಕಿಯ ವಿರುದ್ಧ ನಿರ್ಬಂಧ ವಿಧಿಸಿರುವ ದೇಶಗಳ ನೇಟೊ ಸೇರ್ಪಡೆಗೆ ನಾವು ಒಪ್ಪುವುದಿಲ್ಲ ಎಂದು ಎರ್ಡೋಗನ್ ಹೇಳಿದ್ದಾರೆ. ಸಿರಿಯಾದಲ್ಲಿ ಮಿಲಿಟರಿ ಕಾರ್ಯಾಚರಣೆ ನಡೆಸಿದ್ದ ಹಿನ್ನೆಲೆಯಲ್ಲಿ ಟರ್ಕಿಗೆ ಶಸ್ತ್ರಾಸ್ತ್ರ ಮಾರಾಟವನ್ನು ಸ್ವೀಡನ್ 2019ರಲ್ಲಿ ಅಮಾನತುಗೊಳಿಸಿದೆ. ಅಲ್ಲದೆ ಈ ಎರಡೂ ದೇಶಗಳು ಟರ್ಕಿ, ಅಮೆರಿಕ ಮತ್ತು ಯುರೋಪಿಯನ್ ಯೂನಿಯನ್ ಬ್ಲ್ಯಾಕ್‌ ಲಿಸ್ಟ್‌ ಗೆ ಸೇರಿಸಿದ ಕುರ್ದಿಸ್ತಾನ್ ವರ್ಕರ್ಸ್ ಪಾರ್ಟಿ ಸಂಘಟನೆ ಸಹಿತ ಭಯೋತ್ಪಾದಕ ಸಂಘಟನೆಗೆ ಆಶ್ರಯ ನೀಡುತ್ತಿದೆ ಎಂದ ಎರ್ಡೋಗನ್ ಆರೋಪಿಸಿದ್ದಾರೆ.
 

ಎರ್ಡೋಗನ್ ಪದಚ್ಯುತಿಗೆ ಸಂಚು ರೂಪಿಸಿದ ಮತ್ತು ದೇಶದಲ್ಲಿ ಭಯೋತ್ಪಾದಕ ಕೃತ್ಯ ನಡೆಸಿ ಸ್ವೀಡನ್ ಮತ್ತು ಫಿನ್ಲ್ಯಾಂಡ್ನಲ್ಲಿ ತಲೆಮರೆಸಿಕೊಂಡ 33 ಆರೋಪಿಗಳ ಗಡೀಪಾರಿಗೆ ಟರ್ಕಿ ಮಾಡಿದ್ದ ಕೋರಿಕೆಯನ್ನು ಈ ದೇಶಗಳು ತಳ್ಳಿಹಾಕಿವೆ. ಈ ಎರಡೂ ದೇಶಗಳು ಭಯೋತ್ಪಾದಕ ಸಂಘಟನೆಯ ವಿರುದ್ಧ ಸ್ಪಷ್ಟ ನಿಲುವು ಹೊಂದಿಲ್ಲ. ಆದ್ದರಿಂದ ಅವರನ್ನು ಹೇಗೆ ನಂಬುವುದು? ಎಂದು ಎರ್ಡೋಗನ್ ಪ್ರಶ್ನಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News