ಲೆಬನಾನ್: ಹಿಝ್ಬುಲ್ಲಾ ಪರ ಒಕ್ಕೂಟಕ್ಕೆ ಸಂಸತ್ತಿನಲ್ಲಿ ಬಹುಮತ ನಷ್ಟ

Update: 2022-05-17 18:56 GMT

ಬೇರೂತ್, ಮೇ 17: ಲೆಬನಾನ್ನ ಸಂಸತ್ಗೆ ನಡೆದ ಸಾರ್ವತ್ರಿಕ ಚುನಾವಣೆಯ ಫಲಿತಾಂಶ ಘೋಷಣೆಯಾಗಿದ್ದು ಇರಾನ್ ಬೆಂಬಲಿಯ ಹಿಝ್ಬುಲ್ಲಾ ಮತ್ತದರ ಮಿತ್ರಪಕ್ಷಗಳು ಬಹುಮತ ಕಳೆದುಕೊಂಡಿವೆ ಎಂದು ವರದಿಯಾಗಿದೆ.
 
  ಈ ಹಿಂದಿನ ಸಂಸತ್ನಲ್ಲಿ 71 ಸ್ಥಾನ ಪಡೆದು ಸ್ಪಷ್ಟ ಬಹುಮತ ಹೊಂದಿದ್ದ ಹಿಝ್ಬುಲ್ಲಾ ಪರ ಒಕ್ಕೂಟ ಈ ಬಾರಿ 61 ಸ್ಥಾನ ಪಡೆದಿದೆ. ಬಹುಮತಕ್ಕೆ 65 ಸ್ಥಾನಗಳ ಅಗತ್ಯವಿದೆ. ಆಂತರಿಕ ಸಚಿವಾಲಯ ಮಂಗಳವಾರ ಬಿಡುಗಡೆಗೊಳಿಸಿದ ಫಲಿತಾಂಶದ ಪ್ರಕಾರ ಒಕ್ಕೂಟದ ಮಿತ್ರಪಕ್ಷಗಳಿಗೆ ದೇಶದಾದ್ಯಂತ ಹಿನ್ನಡೆಯಾಗಿದೆ . ದೇಶದ ಪ್ರಮುಖ ಕ್ರೈಸ್ತರ ಪಕ್ಷ ಎಂದು ಪರಿಗಣಿಸಲ್ಪಟ್ಟಿರುವ ದಿ ಫ್ರೀ ಪ್ಯಾಟ್ರಿಯಾಟಿಕ್ ಮೂವ್ಮೆಂಟ್ ಪಕ್ಷ ಈ ಬಾರಿಯ ಚುನಾವಣೆಯಲ್ಲಿ ಕೇವಲ 18 ಸ್ಥಾನ ಗಳಿಸಿದೆ. ಒಕ್ಕೂಟದ ಪ್ರಮುಖ ಮುಖಂಡರಾದ ಡ್ರೂರ್ ಸಮುದಾಯದ ಮುಖಂಡ ತಲಾಲ್ ಅರ್ಸ್ಲಾನ್ ಮತ್ತು ಸುನ್ನಿ ಮುಖಂಡ ಫೈಸಲ್ ಕರಾಮೆ ಸೋಲುಂಡಿರುವುದು ಒಕ್ಕೂಟಕ್ಕೆ ಇನ್ನಷ್ಟು ಹಿನ್ನಡೆಯಾಗಿದೆ. ಈ ಬಾರಿ 16 ಸ್ವತಂತ್ರ ಅಭ್ಯರ್ಥಿಗಳು ಗೆದ್ದು ಸಂಸತ್ ಪ್ರವೇಶಿಸಿದ್ದಾರೆ. 2018ರ ಚುನಾವಣೆಯಲ್ಲಿ 15 ಅಭ್ಯರ್ಥಿಗಳು ಗೆಲುವು ಸಾಧಿಸಿದ್ದರು.

ಆಡಳಿತ ವಿರೋಧಿ ವೇದಿಕೆಯ ಮೂಲಕ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಕೋಟ್ಯಾಧಿಪತಿ ಉದ್ಯಮಿ ಫವಾದ್ ಮಖ್ರೌಮಿ ಸಹಿತ ಐವರು ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ.ತೀವ್ರ ಬಿಕ್ಕಟ್ಟಿನ ನಡುವೆಯೂ ಚುನಾವಣೆಯನ್ನು ಯಶಸ್ವಿಯಾಗಿ ನಡೆಸಿರುವುದಕ್ಕೆ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಅಂಟೋನಿಯೊ ಗುಟೆರಸ್ ಲೆಬನಾನ್ ಜನತೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಸವಾಲಿನ ಪರಿಸ್ಥಿತಿಯ ಹೊರತಾಗಿಯೂ ಅಧಿಕಾರಿಗಳು ಸಂವಿಧಾನಕ್ಕೆ ತಮ್ಮ ಬದ್ಧತೆಯನ್ನು ಮತ್ತು ಲೆಬನಾನ್ನ ಪ್ರಜಾಸತ್ತಾತ್ಮಕ ಸಂಪ್ರದಾಯದ ಗೌರವವನ್ನು ಎತ್ತಿಹಿಡಿದಿದ್ದಾರೆ ಎಂದವರು ಟ್ವೀಟ್ ಮಾಡಿದ್ದಾರೆ.

 ಇದೀಗ 128 ಸದಸ್ಯ ಬಲದ ಲೆಬನಾನ್ ನೂತನ ಸಂಸತ್ತು ಸ್ಪೀಕರ್ ಮತ್ತು ಹೊಸ ಪ್ರಧಾನಿಯನ್ನು ಆಯ್ಕೆ ಮಾಡಲಿದೆ . ಪ್ರಧಾನಿ ಹೊಸ ಸರಕಾರವನ್ನು ರಚಿಸಲಿದ್ದಾರೆ. ದೇಶದ ಪಂಥೀಯ ಅಧಿಕಾರ ಹಂಚಿಕೆ ವ್ಯವಸ್ಥೆಯು ಅಧ್ಯಕ್ಷರು ಮರೊನೈಟ್ ಕ್ರಿಶ್ಚಿಯನ್, ಪ್ರಧಾನಮಂತ್ರಿ ಸುನ್ನಿ ಮುಸ್ಲಿಮ್ ಮತ್ತು ಸ್ಪೀಕರ್ ಶಿಯಾ ಮುಸ್ಲಿಂ ಎಂದು ನಿರ್ದೇಶಿಸುತ್ತದೆ. ಈ ಮಧ್ಯೆ, ಚುನಾವಣೆಯಲ್ಲಿ ವ್ಯಾಪಕ ಅಕ್ರಮ ನಡೆದಿರುವುದಾಗಿ ಚುನಾವಣಾ ವೀಕ್ಷಕರ ತಂಡ ವರದಿ ಮಾಡಿದೆ. ಹೆರ್ಬೊಲ್ಲಾ ಪರ ಪಕ್ಷ ಹಾಗೂ ಶಿಯಾ ಪಕ್ಷದ ಬೆಂಬಲಿಗರು ಮತದಾನ ಕೇಂದ್ರದ ಮೇಲೆ ದಾಳಿ ನಡೆಸಿ ವೀಕ್ಷಕರಿಗೆ ಬೆದರಿಕೆ ಒಡ್ಡಿರುವುದಾಗಿ ಲೆಬನಾನ್ನ ಚುನಾವಣಾ ವೀಕ್ಷಕರು ಹೇಳಿದ್ದಾರೆ. ಚುನಾವಣೆಯಲ್ಲಿ ಮತ ಖರೀದಿ, ಬೆದರಿಕೆ ಮತ್ತು ಭ್ರಷ್ಟಾಚಾರ ವ್ಯಾಪಕವಾಗಿತ್ತು ಎಂದು ಯುರೋಪಿಯನ್ ಒಕ್ಕೂಟದ ಚುನಾವಣಾ ವೀಕ್ಷಕರ ತಂಡದ ಮುಖ್ಯಸ್ಥ ಗಾರ್ಗಿ ಹಾಲ್ವೆನಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News