ನಿಷೇಧಿತ ವೆಬ್ ಸೈಟ್‌ ಗೆ ನಿಷೇಧದ ಆದೇಶ, ನಿರ್ಧಾರೋತ್ತರ ಅಹವಾಲಿಗೆ ಅವಕಾಶ ನೀಡಿ

Update: 2022-05-17 19:06 GMT

ಹೊಸದಿಲ್ಲಿ,ಮೇ 17: ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದಿಂದ ಸೆಪ್ಟಂಬರ್ 2018ರಲ್ಲಿ ನಿಷೇಧಕ್ಕೊಳಗಾಗಿರುವ ವಿಡಂಬನಾತ್ಮಕ ವೆಬ್ಸೈಟ್ dowrycalculator.com ನ ಮಾಲಿಕ ತನುಲ್ ಠಾಕೂರ್ ಅವರಿಗೆ ಮೂಲ ನಿಷೇಧ ಆದೇಶದ ಪ್ರತಿ ಮತ್ತು ನಿರ್ಧಾರೋತ್ತರ ಅಹವಾಲು ಸಲ್ಲಿಕೆಗೆ ಅವಕಾಶವನ್ನು ಒದಗಿಸುವಂತೆ ದಿಲ್ಲಿ ಉಚ್ಚ ನ್ಯಾಯಾಲಯವು ಕೇಂದ್ರ ಸರಕಾರಕ್ಕೆ ಆದೇಶಿಸಿದೆ.ನಿಷೇಧದ ಆದೇಶವನ್ನು ಠಾಕೂರ್ ದಿಲ್ಲಿ ಉಚ್ಚ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದಾರೆ.


ಠಾಕೂರ್ ಪರ ನ್ಯಾಯವಾದಿ ವೃಂದಾ ಭಂಡಾರಿಯವರ ವಾದವನ್ನು ಆಲಿಸಿದ ಪೀಠವು ಮೇ 23ರಂದು ಅಪರಾಹ್ನ ಮೂರು ಗಂಟೆಗೆ ಅರ್ಜಿದಾರರ ಪರ ವಕೀಲರ ಅಹವಾಲನ್ನು ಆಲಿಸುವಂತೆ ಸಚಿವಾಲಯವು ಪ್ರತಿಬಂಧಕ ನಿಯಮಗಳು,2009ರಡಿ ರಚಿಸಿದ್ದ ಸಮಿತಿಗೆ ನಿರ್ದೇಶ ನೀಡಿತು.
ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಎಂದೂ ತನ್ನ ಸೆನ್ಸಾರ್ಶಿಪ್ ಆದೇಶಗಳನ್ನು ಪ್ರಕಟಿಸುವುದಿಲ್ಲ ಮತ್ತು ಅಪರೂಪಕ್ಕೆ ಎಂದಾದರೂ ವಿಚಾರಣೆಗೆ ಅವಕಾಶವನ್ನು ಒದಗಿಸುತ್ತದೆ,ಹೀಗಾಗಿ ಉಚ್ಚ ನ್ಯಾಯಾಲಯದ ಆದೇಶವು ಮಹತ್ವಪೂರ್ಣವಾಗಿದೆ ಎಂದು ಇಂಟರ್ನೆಟ್ ಫ್ರೀಡಂ ಫೌಂಡೇಷನ್ (ಐಎಫ್ಎಫ್) ಹೇಳಿದೆ. ಐಎಫ್ಎಫ್ ಉಚ್ಚ ನ್ಯಾಯಾಲಯದ ಕಲಾಪಗಳಲ್ಲಿ ಠಾಕೂರ್ಗೆ ನೆರವಾಗುತ್ತಿದೆ.
ಅಲ್ಲದೆ ಇದೇ ಮೊದಲ ಬಾರಿಗೆ ಸಚಿವಾಲಯದ ಸೆನ್ಸಾರ್ಶಿಪ್ ಆದೇಶವನ್ನು ಅಥವಾ ಸಚಿವಾಲಯದ ಎದುರು ಅಹವಾಲು ಸಲ್ಲಿಕೆಗೆ ಅವಕಾಶ ನೀಡುತ್ತಿರುವುದು ಇದೇ ಮೊದಲ ಬಾರಿಯಾಗಲಿದೆ.

ವೆಬ್ಸೈಟ್ ವರದಕ್ಷಿಣೆ ಪಿಡುಗನ್ನು ವೈಭವೀಕರಿಸುವ ‘ಕಚ್ಚಾ ಪ್ರಯತ್ನ’ವಾಗಿತ್ತು ಮತ್ತು ಅದರಲ್ಲಿಯ ವಿಷಯಗಳು ವಿಡಂಬನಾತ್ಮಕವಾಗಿವೆ ಎಂಬ ಯಾವುದೇ ಹಕ್ಕು ನಿರಾಕರಣೆಯ ಘೋಷಣೆಯನ್ನು ಹೊಂದಿರಲಿಲ್ಲ ಎಂದು ಠಾಕೂರ್ ಅವರ ಅರ್ಜಿಗೆ ನೀಡಿದ್ದ ಉತ್ತರದಲ್ಲಿ ಕೇಂದ್ರ ಸರಕಾರವು ತಿಳಿಸಿತ್ತು. ವೆಬ್ಸೈಟ್ನ ವಿಡಂಬನಾತ್ಮಕ ಉದ್ದೇಶವು ಅದರಲ್ಲಿಯ ವಿಷಯ ಮತ್ತು ಸ್ವರೂಪದಿಂದ ಸಾಕಷ್ಟು ಸ್ಪಷ್ಟವಾಗಿದೆ ಎಂದು ಠಾಕೂರ್ ಪರ ನ್ಯಾಯವಾದಿಗಳು ಉಚ್ಚ ನ್ಯಾಯಾಲಯಕ್ಕೆ ತಿಳಿಸಿದ್ದರು.

ಐಎಫ್ಎಫ್ ತಿಳಿಸಿರುವಂತೆ ಸಚಿವಾಲಯವು ನಿಷೇಧದ ಆದೇಶವನ್ನು ಹೊರಡಿಸುವ ಮುನ್ನ ವಿವರಣೆಯನ್ನು ಸಲ್ಲಿಸಲು ಠಾಕೂರ್ಗೆ ಅವಕಾಶವನ್ನು ನೀಡಿರಲಿಲ್ಲ,ಅಲ್ಲದೆ ಆರ್ಟಿಐ ಅಡಿ ಅರ್ಜಿಗಳನ್ನು ಸಲ್ಲಿಸಿದ್ದರೂ ಮೂಲ ಆದೇಶ ಅಥವಾ ದೂರಿನ ಪ್ರತಿಯನ್ನು ಒದಗಿಸಲು ನಿರಾಕರಿಸಿತ್ತು. ಸಮಿತಿಯ ವರದಿಯ ಪ್ರತಿಯನ್ನು ನಾಲ್ಕು ವಾರಗಳಲ್ಲಿ ನ್ಯಾಯಾಲಯಕ್ಕೆ ಮತ್ತು ಅರ್ಜಿದಾರರಿಗೆ ಪೂರೈಸುವಂತೆ ಪೀಠವು ಸಚಿವಾಲಯಕ್ಕೆ ನಿರ್ದೇಶ ನೀಡಿದ್ದು,ಮುಂದಿನ ವಿಚಾರಣೆಯನ್ನು ಸೆ.14ಕ್ಕೆ ನಿಗದಿಗೊಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News