ಪಠ್ಯ ಪುಸ್ತಕದಿಂದ ಚರಿತ್ರೆಯ ಪಾಠ ತೆಗೆದು ಹಾಕಲು ಕಾರಣ ಏನು?: ಬಿಲ್ಲವರ‌ ಮಹಾಮಂಡಲ ಪ್ರಶ್ನೆ

Update: 2022-05-20 09:46 GMT

ಮುಲ್ಕಿ : ಬ್ರಹ್ಮಶ್ರೀ ನಾರಾಯಣ ಗುರುಗಳ ಜೀವನ ಚರಿತ್ರೆಯನ್ನು 10ನೇ ತರಗತಿಯ ಪಠ್ಯ ಪುಸ್ತಕದಿಂದ‌ ತೆಗೆದು ಹಾಕಲು ಏನು ಕಾರಣ ಎಂದು ರಾಷ್ಟ್ರೀಯ ಬಿಲ್ಲವರ ಮಹಾಮಂಡಲ ಸರಕಾರವನ್ನು ಪ್ರಶ್ನಿಸಿದೆ.

ಗುರುವಾರ ರಾತ್ರಿ ಮಹಾಮಂಡಲದ ಕಚೇರಿಯ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಡಾ.ರಾಜಶೇಖರ ಕೋಟ್ಯಾನ್, ಹಿಂದುಳಿದ‌ವರ್ಗಗಳ ಉನ್ನತಿಗಾಗಿ, ಅಸ್ಪೃಶ್ಯತೆಯನ್ನು ಹೋಗಲಾಡಿಸಿ ಶಿಕ್ಷಣಕ್ಕೆ ಒತ್ತು ಕೊಟ್ಟ ಮಹಾನ್ ಚೇತನದ ಜೀವನ ಚರಿತ್ರೆಯನ್ನು ಪಠ್ಯಪುಸ್ತಕದಿಂದ ತೆಗೆದು ಹಾಕಿರುವ ರಾಜ್ಯ ಸರಕಾರದ ನಡೆಯನ್ನು ಬಿಲ್ಲವರ ಮಹಾಮಂಡಲ ಖಂಡಿಸುತ್ತದೆ  ಎಂದು ನುಡಿದರು.

ಕಳೆದ ಗಣರಾಜ್ಯೋತ್ಸವ ಸಂದರ್ಭದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪುತ್ತಳಿಯನ್ನು ಗಣರಾಜ್ಯೀತ್ಸದ ಪಥ ಸಂಚಲನದಲ್ಲಿ ಹೊರಗಿಡಲಾಯಿತು. ಈಗ ಬಿಲ್ಲವ ಸಮಾಜದ ಶಕ್ತಿಯಾಗಿರುವ ಬ್ರಹ್ಮ ಶ್ರೀನಾರಾಯಣ ಗುರುಗಳ ಪಠ್ಯವನ್ನು ತೆಗೆದು ಹಾಕಲಾಗಿದೆ. ಈ ರೀತಿಯಾಗಿ ಸರಕಾರಗಳು ಬಿಲ್ಲವ ಸಮಾಜವನ್ನು ನಿರ್ಲಕ್ಷಿಸುತ್ತಿದೆ ಎಂದು ಕೋಟ್ಯಾನ್ ಅಸಮಾಧಾನ ವ್ಯಕ್ತಪಡಿಸಿದರು.

ಈ ಸಂಬಂಧ ಎರಡು ದಿನಗಳ ಒಳಗಾಗಿ ರಾಜ್ಯದ ಮುಖ್ಯಮಂತ್ರಿ ಹಾಗೂ ಸಚಿವ ಸಂಪುಟದಲ್ಲಿರುವ ಇಬ್ಬರು ಬಿಲ್ಲವ ಮಂತ್ರಿಗಳ ಬಳಿ ಚರ್ಚಿಸಲಾಗುವುದು. ಬಳಿಕ ಸರಕಾರ ತೆಗೆದು ಹಾಕಿರುವ ಪಠ್ಯವನ್ನು ಸೇರಿಸಿಕೊಳ್ಳ ಬೇಕು. ಇಲ್ಲವಾದಲ್ಲಿ ಬಿಲ್ಲವ ಸಂಘಗಳನ್ನು ಸೇರಿಸಿಕೊಂಡು ಸರಕಾರದ ನಿರ್ಲಕ್ಷ್ಯತೆಯ ವಿರುದ್ಧ ಬೃಹತ್ ಹೋರಾಟವನ್ನು ಸಂಘಟಿಸಲಾಗುವುದು ಎಂದು ಸರಕಾರಕ್ಕೆ ಎಚ್ಚರಿಕೆ ನೀಡಿದರು.

ಸುದ್ದಿಗೋಷ್ಠಿಯಲ್ಲಿ ಪ್ರಧಾನ ಕಾರ್ಯದರ್ಶಿ ವಿಜಯಕುಮಾರ್ ಕುಬೆವೂರು, ಗಂಗಾಧರ ಪೂಜಾರಿ ಬಾಳ ಚೇಳಾಯರು, ಚಂದ್ರಶೇಖರ ಸುವರ್ಣ, ತಿಮ್ಮಪ್ಪ ಕೋಟ್ಯಾನ್, ಯೋಗೀಶ್ ಕೋಟ್ಯಾನ್ ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News