ಕುದ್ರೋಳಿ ಹಸನಬ್ಬ ಸಾಬ್ ಅನನ್ಯ ಸಾಮಾಜಿಕ, ಧಾರ್ಮಿಕ ಮುಂದಾಳು : ಕೆ.ಎಸ್. ಮೊಹಮ್ಮದ್ ಮಸೂದ್

Update: 2022-05-20 12:15 GMT

ಮಂಗಳೂರು, ಮೇ 20: ಹಿರಿಯ ಧಾರ್ಮಿಕ, ಸಾಮಾಜಿಕ ಮುಂದಾಳು, ದಿವಂಗತ ಕುದ್ರೋಳಿ ಹಸನಬ್ಬ ಸಾಬ್ ಅವರ ಪರಿಚಯ ಹಾಗು ಅವರ ಕುರಿತು ಹಲವರು ಬರೆದಿರುವ ಪುಸ್ತಕವನ್ನು ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷ, ಮಾಜಿ ವಿಧಾನ ಪರಿಷತ್ ಸದಸ್ಯ ಕೆ.ಎಸ್. ಮೊಹಮ್ಮದ್ ಮಸೂದ್ ಅವರು ಶುಕ್ರವಾರ ಜುಮಾ ನಮಾಝ್ ಬಳಿಕ ಕುದ್ರೋಳಿಯ ಜಾಮಿಯಾ ಮಸೀದಿಯಲ್ಲಿ ಬಿಡುಗಡೆಗೊಳಿಸಿದರು.

ತಮ್ಮ ಹಾಗು ಹಸನಬ್ಬ ಅವರ ಒಡನಾಟವನ್ನು ಸ್ಮರಿಸಿದ ಮಸೂದ್ ಅವರು ಹಸನಬ್ಬ ಸಾಬ್ ಅವರು ಸಜ್ಜನ ವ್ಯಕ್ತಿತ್ವದ ಅತ್ಯಂತ ಅಪರೂಪದ ಸಾಮಾಜಿಕ, ಧಾರ್ಮಿಕ ಮುಂದಾಳುವಾಗಿದ್ದರು. ಅವರು ತಾವು ಕಲಿತಿದ್ದ ಇಸ್ಲಾಮಿನ ಮೌಲ್ಯಗಳು, ಸಿದ್ಧಾಂತಗಳ ಪ್ರಕಾರವೇ ಪ್ರತಿದಿನವೂ ಬದುಕಿದರು. ನುಡಿದಂತೆಯೇ ನಡೆದು ಇತರರಿಗೆ ಮಾದರಿಯಾದರು. ಕೋಮು ಸೌಹಾರ್ದತೆ ಕಾಪಾಡಲು ಸದಾ ಕಟಿಬದ್ಧರಾಗಿದ್ದ ಅವರು ಸೇವಾ ಚಟುವಟಿಕೆಗಳಲ್ಲೂ ಮುಂಚೂಣಿಯಲ್ಲಿರುತ್ತಿದ್ದರು ಎಂದು ಹೇಳಿದರು.

ಅವರ ಮಕ್ಕಳು, ಮೊಮ್ಮಕ್ಕಳು ಇಂದಿಗೂ ಅವರದೇ ಆದರ್ಶ ಪಾಲಿಸಿಕೊಂಡು ಬಂದಿದ್ದಾರೆ ಹಾಗು ವಿವಿಧ ರಂಗಗಳಲ್ಲಿ ಸಮುದಾಯ ಹಾಗು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದಾರೆ ಎಂದು ಅಭಿನಂದನೆ ಸಲ್ಲಿಸಿದರು.

ಜಾಮಿಯಾ ಮಸೀದಿಯ ಖತೀಬ್ ಮೌಲಾನಾ ಮುಫ್ತಿ ಅಬ್ದುಲ್ ಮನ್ನಾನ್ ಅವರೂ ಹಸನಬ್ಬ ಅವರ ಧಾರ್ಮಿಕ, ಸಾಮಾಜಿಕ ಸೇವೆಯನ್ನು ಸ್ಮರಿಸಿ ಅವರಿಗಾಗಿ ಪ್ರಾರ್ಥಿಸಿದರು.

ಈ ಸಂದರ್ಭದಲ್ಲಿ ಕುದ್ರೋಳಿ ಜಾಮಿಯಾ ಮಸೀದಿಯ ಕಾರ್ಯದರ್ಶಿ ಖಲೀಲ್ ಅಹ್ಮದ್, ಹಿದಾಯ ಫೌಂಡೇಶನ್ ನ ಮಕ್ಬೂಲ್ ಅಹ್ಮದ್, ಹಿರಿಯರಾದ ಯೂಸುಫ್ ಕಾರ್ದಾರ್, ಹಸನಬ್ಬ ಅವರ ಪುತ್ರರಾದ ಫಾರೂಕ್ ಹಸನ್, ಉಸ್ಮಾನ್ ಹಸನ್ , ಸಾದಿಕ್ ಹಸನ್ , ಯಾಸಿರ್ ಹಸನ್, ಮೊಮ್ಮಗ ಉಮರ್ ಫಾರೂಕ್ ಪುತ್ತಿಗೆ, ಮೊಮ್ಮಗ ಹಾಗು ಪುಸ್ತಕದ ಸಂಪಾದಕ ಅಕ್ರಮ್ ಹಸನ್ ಉಳ್ಳಾಲ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News