ಸಿಬಿಐನಿಂದ ಲಾಲು‌ ಪ್ರಸಾದ್ ಯಾದವ್ ವಿರುದ್ಧ ಹೊಸ ಭ್ರಷ್ಟಾಚಾರ ಪ್ರಕರಣ ದಾಖಲು‌

Update: 2022-05-20 15:09 GMT
LALU PRASAD YADAV

ಹೊಸದಿಲ್ಲಿ,ಮೇ 20: ರೈಲ್ವೆಯಲ್ಲಿ ನೇಮಕಾತಿಗಾಗಿ ಪ್ರತಿಫಲವಾಗಿ ಆಕಾಂಕ್ಷಿಗಳಿಂದ ಭೂಮಿಯನ್ನು ಪಡೆದುಕೊಂಡಿದ್ದ ಆರೋಪದಲ್ಲಿ ಸಿಬಿಐ ಶುಕ್ರವಾರ ಆರ್ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್ ವಿರುದ್ಧ ಭ್ರಷ್ಟಾಚಾರದ ಹೊಸ ಪ್ರಕರಣವನ್ನು ದಾಖಲಿಸಿದೆ. ಯಾದವ್ ಪುತ್ರಿ ಮಿಸಾ ಭಾರ್ತಿಯನ್ನೂ ಪ್ರಕರಣದಲ್ಲಿ ಆರೋಪಿಯನ್ನಾಗಿ ಹೆಸರಿಸಲಾಗಿದೆ. ‌

ದಿಲ್ಲಿ ಮತ್ತು ಬಿಹಾರಗಳಲ್ಲಿ ಯಾದವ್‌ಗೆ ಸೇರಿದ 17 ಸ್ಥಳಗಳಲ್ಲಿ ಸಿಬಿಐ ಶೋಧ ಕಾರ್ಯಾಚರಣೆ ನಡೆಸಿದೆ ಎಂದು ಬಲ್ಲ ಮೂಲಗಳು ತಿಳಿಸಿವೆ. "ಯಾದವ್ ಅವರನ್ನು ಈಗಲೂ ಉದ್ದೇಶಪೂರ್ವಕವಾಗಿ ತೊಂದರೆಯಲ್ಲಿ ಸಿಲುಕಿಸುತ್ತಿರುವುದು ದುರದೃಷ್ಟಕರವಾಗಿದೆ. ಇದರ ಹಿಂದೆ ಯಾರಿದ್ದಾರೆ ಎನ್ನುವುದು ಎಲ್ಲರಿಗೂ ಗೊತ್ತಿದೆ" ಎಂದು ಲಾಲು ಸೋದರ ಪ್ರಭುನಾಥ ಯಾದವ್ ಹೇಳಿದರು.

ಇದು ಬಲವಾದ ಧ್ವನಿಯನ್ನು ಅಡಗಿಸುವ ಪ್ರಯತ್ನವಾಗಿದೆ ಎಂದು ಹೇಳಿದ ಆರ್ಜೆಡಿ ನಾಯಕ ಅಲೋಕ್ ಮೆಹ್ತಾ ಅವರು,‌ ಸಿಬಿಐ ನಿರ್ದೇಶನ ಮತ್ತು ಕ್ರಮಗಳು ಸಂಪೂರ್ಣವಾಗಿ ತಾರತಮ್ಯದಿಂದ ಕೂಡಿವೆ ಎಂದರು. ಉದ್ಯೋಗಗಳಿಗಾಗಿ ಭೂಮಿ ಹಗರಣವು ಯಾದವ್ ಕೇಂದ್ರದ ಯುಪಿಎ ಸರಕಾರದಲ್ಲಿ ರೈಲ್ವೆ ಸಚಿವರಾಗಿದ್ದ ಅವಧಿಗೆ ಸಂಬಂಧಿಸಿದೆ.

ಶೋಧ ನಡೆಸಲಾದ ಸ್ಥಳಗಳಲ್ಲಿ ಉಪಸ್ಥಿತರಿದ್ದವರ ಹೇಳಿಕೆಗಳನ್ನೂ ಸಿಬಿಐ ದಾಖಲಿಸಿಕೊಂಡಿದೆ. ಈ ನಡುವೆ ಆರ್ಜೆಡಿ ನಾಯಕರು ಮತ್ತು ಕಾರ್ಯಕರ್ತರು ಯಾದವ್ ಗೆ ಸೇರಿದ ಸ್ಥಳಗಳಲ್ಲಿ ಸಿಬಿಐ ದಾಳಿಗಳ ವಿರುದ್ಧ ಪ್ರತಿಭಟನೆ ನಡೆಸಿದರು. ಕಳೆದ ತಿಂಗಳು ಜಾರ್ಖಂಡ್ ಉಚ್ಚ ನ್ಯಾಯಾಲಯವು ಮೇವು ಹಗರಣಕ್ಕೆ ಸಂಬಂಧಿಸಿದ ಡೋರಾಂಡ ಖಜಾನೆಯಿಂದ 139.35 ಕೋ.ರೂ.ಗಳನ್ನು ಹಿಂದೆಗೆದುಕೊಂಡಿದ್ದ ಪ್ರಕರಣದಲ್ಲಿ ಯಾದವಗೆ ಜಾಮೀನು ಮಂಜೂರು ಮಾಡಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News