ರೋಹಿತ್ ಚಕ್ರತೀರ್ಥಗೆ ಇರುವ ಅರ್ಹತೆ ಏನು?: ಸಂಸದ ಬಿನೋಯ್ ವಿಶ್ವಮ್

Update: 2022-05-22 13:46 GMT
ಬಿನೋಯ್ ವಿಶ್ವಮ್

ಬೆಂಗಳೂರು, ಮೇ 22: ‘ರಾಜ್ಯ ಸರಕಾರವು ಶಾಲಾ ಪಠ್ಯಪುಸ್ತಕಗಳನ್ನು ಪರಿಷ್ಕರಣೆಗೊಳಿಸಲು ರಚಿಸಿರುವ ಸಮಿತಿಯ ಅಧ್ಯಕ್ಷರನ್ನಾಗಿ ರೋಹಿತ್ ಚಕ್ರತೀರ್ಥನನ್ನು ಯಾವ ಮಾನದಂಡದ ಆಧಾರದಲ್ಲಿ ನೇಮಿಸಿದೆ' ಎಂದು ಭಾರತೀಯ ಕಮ್ಯೂನಿಸ್ಟ್ ಪಕ್ಷ(ಸಿಪಿಐ)ದ ಸಂಸದ ಬಿನೋಯ್ ವಿಶ್ವಮ್ ಪ್ರಶ್ನಿಸಿದರು.

ರವಿವಾರ ನಗರದ ವೈಯಾಲಿಕಾವಲ್‍ನಲ್ಲಿರುವ ಸಿಪಿಐ ರಾಜ್ಯ ಸಮಿತಿ ಕಚೇರಿಯಲ್ಲಿ ಸುದ್ದಿಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ‘ರೋಹಿತ್ ಚಕ್ರತೀರ್ಥ ವಿದ್ವಾಂಸನೇ?, ಪ್ರಾಧ್ಯಾಪಕನೇ? ಅಥವಾ ಶಿಕ್ಷಣ ತಜ್ಞನೇ? ಯಾವುದೂ ಇಲ್ಲ. ಆತನ ಒಂದೇ ಒಂದು ಅರ್ಹತೆ ಏನೆಂದರೆ ಆತ ಆರೆಸ್ಸೆಸ್‍ನ ಕಟ್ಟಾಳು. ಇದು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯ ಅಧ್ಯಕ್ಷನಾಗಲು ಇರಬೇಕಾದ ಅರ್ಹತೆಯೇ?' ಎಂದು ಆಕ್ರೋಶ ವ್ಯಕ್ತಪಡಿಸಿದರು. 

‘ರಾಜ್ಯ ಸರಕಾರವು ಮಕ್ಕಳಿಗೆ ಶಿಕ್ಷಣದ ಮೂಲಕ ಸರಿಯಾದ ಹಾದಿಯಲ್ಲಿ ಸಾಗಿಸುವ ಉದ್ದೇಶ ಹೊಂದಿದ್ದರೆ, ಕೂಡಲೆ ಈ ಸಮಿತಿಯನ್ನು ವಜಾಗೊಳಿಸಬೇಕು. ಒಂದು ವೇಳೆ ಸರಕಾರಕ್ಕೆ ಆ ಸಮಿತಿಯ ಅಗತ್ಯವಿದ್ದಲ್ಲಿ, ಅದನ್ನು ಪಠ್ಯಪುಸ್ತಕಗಳ ಪರಿಷ್ಕರಣೆಯ ಬದಲಾಗಿ ಆರೆಸೆಸ್ಸ್‍ನ ಶಾಖೆಗಳಲ್ಲಿ ಬೋಧಿಸುವ ವಿಚಾರಗಳನ್ನು ಪ್ರಚಾರ ಮಾಡಲು ಬಳಸಿಕೊಳ್ಳಲಿ' ಎಂದು ಅವರು ಹೇಳಿದರು.

ಆದರೆ, ಶಾಲೆಗಳಲ್ಲಿ ಬೋಧಿಸುವ ಪಠ್ಯಪುಸ್ತಕಗಳು, ಪ್ರಜಾಪ್ರಭುತ್ವ, ಜಾತ್ಯತೀತ ಭಾರತವನ್ನು ಪ್ರತಿನಿಧಿಸುವಂತಿರಬೇಕು. ಆದುದರಿಂದ, ಸಿಪಿಐ ಪಕ್ಷವು ರೋಹಿತ್ ಚಕ್ರತೀರ್ಥ ನೇತೃತ್ವದ ಸಮಿತಿಯನ್ನು ವಜಾಗೊಳಿಸುವಂತೆ ಆಗ್ರಹಿಸುತ್ತದೆ. ಅಲ್ಲದೆ, ಶಿಕ್ಷಕರು, ಪೋಷಕರು, ಶಿಕ್ಷಣ ತಜ್ಞರು, ಸಾರ್ವಜನಿಕ ವಲಯದಲ್ಲಿ ಗೌರವಿಸಲ್ಪಡುವ ಮಹನೀಯರನ್ನು ಒಳಗೊಂಡ ಹೊಸ ಸಮಿತಿಯನ್ನು ರಚನೆ ಮಾಡಿ, ಎಲ್ಲ ವಲಯಗಳಿಂದ ಅಭಿಪ್ರಾಯಗಳನ್ನು ಪಡೆದು ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಲಿ ಎಂದು ಬಿನೋಯ್ ವಿಸ್ವಾಮ್ ತಿಳಿಸಿದರು.

ಶಿಕ್ಷಣ ಅನ್ನೋದು ದ್ವೇಷ, ಅಸೂಯೆ, ಕ್ರೌರ್ಯವನ್ನು ಬಿಂಬಿಸುವುದಲ್ಲ. ಆದರೆ, ಆರೆಸೆಸ್ಸ್ ಹಾಗೂ ಬಿಜೆಪಿ ಶಿಕ್ಷಣದ ಮೂಲಕ ಜನರನ್ನು ವಿಭಜಿಸಲು ಯತ್ನಿಸುತ್ತಿದೆ. ಹೊಸ ಜನಾಂಗವನ್ನು ಕತ್ತಲಲ್ಲಿ ಇಡಲು ಪ್ರಯತ್ನಿಸುತ್ತಿದೆ. ಆದುದರಿಂದ, ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಿ, ತಮ್ಮ ಆಲೋಚನೆಗಳನ್ನು ಮಕ್ಕಳಿಗೆ ಬೋಧಿಸಲು ಪ್ರಯತ್ನಿಸುತ್ತಿದೆ. ಶಾಲಾ ಕೊಠಡಿಗಳನ್ನು ಆರೆಸ್ಸೆಸ್‍ನ ಫ್ಯಾಶಿಸಂ ಅನ್ನು ಬೋಧಿಸುವ ಮೈದಾನಗಳಾಗಿ ಪರಿವರ್ತಿಸಲು ಹೊರಟಿದ್ದಾರೆ ಎಂದು ಅವರು ದೂರಿದರು.

ಆರೆಸೆಸ್ಸ್, ಶಿಕ್ಷಣವನ್ನು ಜಾತ್ಯತೀತ ಮೌಲ್ಯಗಳು, ಪ್ರಜಾಪ್ರಭುತ್ವ, ವೈಜ್ಞಾನಿಕ ವಿಚಾರಧಾರೆ ವಿರುದ್ಧ ಹೋರಾಡುವಂತಹ ಪ್ರಬಲ ಅಸ್ತ್ರವನ್ನಾಗಿ ಮಾಡಲು ಮುಂದಾಗಿದೆ. ಅಲ್ಲದೆ, ಭಾರತದ ಸಂಸ್ಕøತಿಯನ್ನು, ಫ್ಯಾಶಿಸಂ ವಿಚಾರಧಾರೆಯನ್ನಾಗಿ ಪರಿವರ್ತಿಸಲು ಯತ್ನಿಸುತ್ತಿದೆ. ಹಲಾಲ್, ಹಿಜಾಬ್ ವಿವಾದ ಬಳಿಕ ಈಗ ಪಠ್ಯಪುಸ್ತಕಗಳಲ್ಲಿ ಹಸ್ತಕ್ಷೇಪ ಮಾಡಲು ರೋಹಿತ್‍ಚಕ್ರತೀರ್ಥ ನೇತೃತ್ವದಲ್ಲಿ ಸಮಿತಿಯನ್ನು ರಚನೆ ಮಾಡಲಾಗಿದೆ ಎಂದು ಬಿನೋಯ್ ವಿಸ್ವಾಮ್ ಆರೋಪಿಸಿದರು. 

ಆರೆಸ್ಸೆಸ್ ಹಾಗೂ ಬಿಜೆಪಿಯವರಿಗೆ ಹೆಡ್ಗೇವಾರ್ ಭಗತ್‍ಸಿಂಗ್ ಗಿಂತ ಉತ್ತಮ, ಸಾವರ್ಕರ್ ಮಹಾತ್ಮಗಾಂಧಿಗಿಂತ ಉತ್ತಮ, ಮಹಾತ್ಮಗಾಂಧಿಯನ್ನು ಕೊಂದ ಗೋಡ್ಸೆ ದೊಡ್ಡ ನಾಯಕ. ಇಂತಹ ಬಿಜೆಪಿಯವರು ತಮ್ಮನ್ನು ದೇಶಭಕ್ತರು, ರಾಷ್ಟ್ರೀಯವಾದಿಗಳು ಎಂದು ಬಿಂಬಿಸಿಕೊಳ್ಳುತ್ತಿದ್ದಾರೆ. ವಾಸ್ತವವಾಗಿ ಅವರು ದೇಶವಿರೋಧಿಗಳು. ಅವರಿಗೆ ಹಿಟ್ಲರ್, ಮುಸಲೋನಿ ಅಂತಹವರು ಆದರ್ಶ ಎಂದು ಅವರು ಟೀಕಿಸಿದರು.

ಸಿಪಿಐ ರಾಜ್ಯ ಕಾರ್ಯದರ್ಶಿ ಸಾತಿ ಸುಂದರೇಶ್ ಮಾತನಾಡಿ, ‘ಮಾಧ್ಯಮಗಳು ಪ್ರಜಾಪ್ರಭುತದಲ್ಲಿ ನಿರ್ವಹಿಸಬೇಕಾದ ಕೆಲಸ ಮಾಡಿದರೆ, ಅದನ್ನು ತನ್ನ ಟ್ವೀಟ್ ಮುಖಾಂತರ ಗೇಲಿ ಮಾಡುವಂತಹ ಅಪ್ರಬುದ್ಧ ರೋಹಿತ್ ಚಕ್ರತೀರ್ಥನನ್ನು ಈ ಸರಕಾರ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡುವ ಸಮಿತಿಯ ನೇತೃತ್ವ ನೀಡಿದೆ. ಅವರು ಯಾವ ಮಟ್ಟದಲ್ಲಿ ಪಠ್ಯಪುಸ್ತಕಗಳ ಪರಿಷ್ಕರಣೆಯಾಗಬಹುದು ಎಂಬುದನ್ನು ಆಲೋಚಿಸಬೇಕಿದೆ' ಎಂದರು. 

ರಾಜ್ಯ ಸರಕಾರ ಸಚಿವ ಸಂಪುಟದಲ್ಲಿ ಜನತೆಯ ಪರವಾಗಿ ಯಾವುದೆ ವಿಚಾರಗಳನ್ನು ಚರ್ಚೆ ಮಾಡದೆ, ಕೇವಲ ಕೇಶವಕೃಪಾ ಹಾಗೂ ನಾಗಪುರದಿಂದ ಬರುವಂತಹ ಆಜ್ಞೆಗಳನ್ನು ಜಾರಿ ಮಾಡುವ ಗುಲಾಮಿ ಸರಕಾರದಂತೆ ಕಾಣುತ್ತಿದೆ. ಇದು ಅತ್ಯಂತ ಅಪಾಯಕಾರಿಯಾದ ಸೂಚನೆ. ಈಗಾಗಲೆ, ಶಾಲೆಗಳು ಆರಂಭವಾಗಿವೆ. ಆದರೆ, ಮಕ್ಕಳ ಕೈಯಲ್ಲಿ ಪುಸ್ತಕವಿಲ್ಲ. ಅದು ಕೇವಲ ಚರ್ಚೆಯ ವಸ್ತುವಾಗಿದೆ ಎಂದು ಅವರು ಹೇಳಿದರು.

ಇವೆಲ್ಲ ವಿಚಾರಗಳು ಚರ್ಚೆಯಾಗಿ ಪುಸ್ತಕ ಹೊರ ಬರುವವರೆಗೆ ಅರ್ಧ ಶೈಕ್ಷಣಿಕ ವರ್ಷ ಮುಗಿದಿರುತ್ತದೆ. ಆದುದರಿಂದ, ಕಳೆದ ವರ್ಷದ ಪಠ್ಯಪುಸ್ತಕಗಳನ್ನು ಈ ವರ್ಷ ಮುಂದುವರೆಸಬೇಕು. ಈಗಾಗಲೆ ಪಠ್ಯಪುಸ್ತಕಗಳು ಮುದ್ರಣಗೊಂಡು ಗೋದಾಮುಗಳಲ್ಲಿ ಬಿದ್ದಿವೆ. ಪದೇ ಪದೇ ಪಠ್ಯಪುಸ್ತಕಗಳನ್ನು ಮುದ್ರಣಗೊಳಿಸುವುದರಿಂದ ಸರಕಾರದ ಬೊಕ್ಕಸದಲ್ಲಿರುವ ಕೋಟ್ಯಂತರ ರೂ.ಗಳು ಲೂಟಿಯಾಗುತ್ತದೆ. ಸಂಘದ ವ್ಯಕ್ತಿಗಳನ್ನು ಇಟ್ಟುಕೊಂಡು ಪಠ್ಯಪುಸ್ತಕ ಪರಿಷ್ಕರಣೆ ಮಾಡಲು ಮುಂದಾಗಿರುವ ಸರಕಾರದ ಕ್ರಮವನ್ನು ಸಿಪಿಐ ಖಂಡಿಸುತ್ತದೆ ಎಂದು ಸಾತಿ ಸುಂದರೇಶ್ ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ಸಿಪಿಐ ಕಾರ್ಯದರ್ಶಿ ಮಂಡಳಿ ಸದಸ್ಯ ಶಿವರಾಜ್ ಬಿರಾದಾರ್ ಉಪಸ್ಥಿತರಿದ್ದರು.

‘ರೈಲು ಪ್ರಯಾಣ ದರದಲ್ಲಿ ಹಿರಿಯ ನಾಗರಿಕರಿಗೆ ನೀಡಲಾಗುತ್ತಿದ್ದ ವಿನಾಯಿತಿಯನ್ನು ನಿಲ್ಲಿಸಿರುವ ಕೇಂದ್ರ ಸರಕಾರದ ಕ್ರಮ ಅತ್ಯಂತ ಖಂಡನೀಯ. ಹಿರಿಯರಾಗುವುದು ಅಪರಾಧವೇ? ಹಿರಿಯ ನಾಗರಿಕರ ಹಿತ ರಕ್ಷಣೆ ಮಾಡುವುದು ಚುನಾಯಿತ ಸರಕಾರದ ಜವಾಬ್ದಾರಿ. ಕೋವಿಡ್ ಸಾಂಕ್ರಾಮಿಕದ ಹೆಸರಿನಲ್ಲಿ ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದ್ದ ವಿನಾಯಿತಿಯನ್ನು ಇದೀಗ ಪೂರ್ಣಪ್ರಮಾಣದಲ್ಲಿ ನಿಲ್ಲಿಸಿರುವುದು ಸರಿಯಲ್ಲ. ಈ ವಿಚಾರವನ್ನು ಸಿಪಿಐ ಸಂಸತ್ತಿನ ಒಳಗೆ ಹಾಗೂ ಹೊರಗೆ ಪ್ರಸ್ತಾಪಿಸಲಿದೆ. ಸರಕಾರ ಕೂಡಲೆ ಹಿರಿಯ ನಾಗರಿಕರಿಗೆ ನೀಡುತ್ತಿರುವ ವಿನಾಯಿತಿಯನ್ನು ಮುಂದುವರೆಸಬೇಕು'

-ಬಿನೋಯ್ ವಿಶ್ವಮ್, ಸಿಪಿಐ ಸಂಸದ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News