ʼಅಶ್ಲೀಲತೆʼ ಆರೋಪಿಸಿ ವಿಶ್ವವಿದ್ಯಾಲಯಕ್ಕೆ ನುಗ್ಗಿ ಎಬಿವಿಪಿ ಕಾರ್ಯಕರ್ತರಿಂದ ದಾಂಧಲೆ ಆರೋಪ: ಪ್ರಕರಣ ದಾಖಲು

Update: 2022-05-23 18:06 GMT
 Photo: www.mmmut.ac.in

ಗೋರಖ್‌ಪುರ: ಗೋರಖ್‌ಪುರ ವಿಶ್ವವಿದ್ಯಾಲಯದ ಕಾರ್ಯಕ್ರಮದಲ್ಲಿ ಪ್ರದರ್ಶನ ನೀಡಿದ ಇಂಡೋನೇಷ್ಯಾದ ಡಿಜೆಯನ್ನು "ಅಶ್ಲೀಲ" ಮತ್ತು "ಅಶ್ಲೀಲ ನಟಿ" ಎಂದು ಆರೋಪಿಸಿ ಎಬಿವಿಪಿ ಕಾರ್ಯಕರ್ತರು ಕ್ಯಾಂಪಸ್‌ಗೆ ನುಗ್ಗಿದ ಬಳಿಕ ನಡೆದ ಘರ್ಷಣೆಯಲ್ಲಿ ಹಲವರು ಗಾಯಗೊಂಡಿದ್ದಾರೆ ಎಂದು Thewire.in ವರದಿ ಮಾಡಿದೆ.

ವಿಶ್ವವಿದ್ಯಾನಿಲಯದ ಇಬ್ಬರು ಶಿಕ್ಷಕರು ಸೇರಿದಂತೆ ಮೂವರ ವಿರುದ್ಧ ಕೊಲೆ ಯತ್ನ, ಹಲ್ಲೆ ಮತ್ತು ಗಲಭೆ ಆರೋಪದಡಿ ಎಬಿವಿಪಿ ಪೊಲೀಸರಿಗೆ ದೂರು ನೀಡಿದೆ. ಎಬಿವಿಪಿ ಕಾರ್ಯಕರ್ತರ ವಿರುದ್ಧವೂ ವಿಶ್ವವಿದ್ಯಾಲಯ ದೂರು ದಾಖಲಿಸಿದೆ.

ಗೋರಖ್‌ಪುರದ ಮದನ್ ಮೋಹನ್ ಮಾಳವೀಯ ಯೂನಿವರ್ಸಿಟಿ ಆಫ್ ಟೆಕ್ನಾಲಜಿ (MMMUT) ಯ ವಾರ್ಷಿಕ ಸಾಂಸ್ಕೃತಿಕ ಕಾರ್ಯಕ್ರಮವಾದ 'ಟೆಕ್ ಸೃಜನ್ 2022' ನಲ್ಲಿ ಪ್ರದರ್ಶನ ನೀಡಲು ಇಂಡೋನೇಷ್ಯಾದ DJ ಝಬಿಲ್ಲಾ ಅವರನ್ನು ಆಹ್ವಾನಿಸಲಾಗಿತ್ತು. ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ವಾರ್ಷಿಕ ಉತ್ಸವದ ಭಾಗವಾಗಿದ್ದವು.

ಈ ವರ್ಷ, ಕಾರ್ಯಕ್ರಮವನ್ನು ಮೇ 14 ರಿಂದ ಮೇ 16 ರವರೆಗೆ ನಿಗದಿಪಡಿಸಲಾಗಿತ್ತು. ಝಬಿಲ್ಲಾ ಅವರ ಪ್ರದರ್ಶನವು ಮೇ 14 ರಂದು ಅಂದರೆ, ಕಾರ್ಯಕ್ರಮದ ಮೊದಲ ದಿನ ಆಯೋಜಿಸಲಾಗಿತ್ತು. ಕಾರ್ಯಕ್ರಮದ ನಂತರ, ABVP ಯ ಗೋರಖ್‌ಪುರ ಘಟಕವು ಆಕೆಯ ಅಭಿನಯವನ್ನು "ಅಶ್ಲೀಲ" ಎಂದು ಕರೆದಿದ್ದು, ಸಂಘಟಕರು "ಅಶ್ಲೀಲ ತಾರೆ" ಯನ್ನು ಉತ್ಸವಕ್ಕೆ ಆಹ್ವಾನಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಮೂವತ್ತಕ್ಕೂ ಅಧಿಕ ಎಬಿವಿಪಿ ಕಾರ್ಯಕರ್ತರು ಮೇ 19 ರಂದು ವಿಶ್ವವಿದ್ಯಾಲಯವನ್ನು ನುಗ್ಗಿದ್ದು, ಆಡಳಿತ ಕಟ್ಟಡದ ಬಳಿ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳೊಂದಿಗೆ ಘರ್ಷಣೆ ನಡೆಸಿದ್ದಾರೆ. ಹೊಡೆದಾಟದಲ್ಲಿ ಎಬಿವಿಪಿ ಕಾರ್ಯಕರ್ತರು ಸೇರಿದಂತೆ ಹಲವಾರು ಮಂದಿ ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ ಎಂದು TheWire ವರದಿ ಮಾಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News