ಕನ್ನಡದಲ್ಲೇ ವ್ಯವಹರಿಸುವ ನಿರ್ವಾಹಕರನ್ನು ಗುರುತಿಸಿ, ಅಭಿನಂದಿಸಲು ಟಿ.ಎಸ್.ನಾಗಾಭರಣ ಸಲಹೆ

Update: 2022-05-25 15:59 GMT

ಬೆಂಗಳೂರು, ಮೇ 25: ‘ಬಸ್‍ಗಳು ನಿಲ್ದಾಣದಿಂದ ನಿಲ್ದಾಣಕ್ಕೆ ಸಂಚರಿಸುವಾಗ ಖಾಲಿ ಇರುವ ಕಡೆಗಳಲ್ಲಿ ಕನ್ನಡಪರ ಘೋಷಣೆಗಳನ್ನು ಹಾಕಿಸಬೇಕು. ಬಸ್ ನಿಲ್ದಾಣಗಳಲ್ಲಿ ಕನ್ನಡದ ಕವಿ, ಕಾವ್ಯಗಳನ್ನು ಪರಿಚಯಿಸಬೇಕು. ಸಾರಿಗೆ ವಾಹನಗಳಲ್ಲಿ ಕನ್ನಡದಲ್ಲಿ ಮಾತನಾಡುವ ನಿರ್ವಾಹಕರನ್ನು ಬಿಎಂಟಿಸಿ ಗುರುತಿಸಿ ಅಭಿನಂದಿಸುವ ಕಾರ್ಯವನ್ನು ಮಾಡಬೇಕು' ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಟಿ.ಎಸ್.ನಾಗಾಭರಣ ಸಲಹೆ ಮಾಡಿದ್ದಾರೆ.

ಬುಧವಾರ ನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ ಕನ್ನಡ ಅನುಷ್ಠಾನದ ಬಗ್ಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಮಾತನಾಡಿದ ಅವರು, ‘ಸಾರಿಗೆ ಸಂಸ್ಥೆಗಳ ಪೈಕಿ ದೇಶದಲ್ಲಿಯೇ ಮುಂಚೂಣಿಯಲ್ಲಿರುವ ಸಂಸ್ಥೆಗಳಲ್ಲಿ ಒಂದಾದ ಬಿಎಂಟಿಸಿಗೆ ಅಭಿನಂದನೆಗಳು. ಅಲ್ಲದೆ ಕನ್ನಡ ಸಾಹಿತ್ಯ ಕ್ಷೇತ್ರದಲ್ಲಿ ಅಗ್ರಗಣ್ಯ ಸೇವೆ ಸಲ್ಲಿಸಿದವರನ್ನು ಗುರುತಿಸಿ ಸಂಸ್ಥೆಯಿಂದ ನೀಡುವ ನೃಪತುಂಗ ಪ್ರಶಸ್ತಿಯೂ ಪ್ರಾಧಿಕಾರದ ಗಮನಕ್ಕೆ ಬಂದಿದೆ. ಇದಕ್ಕಾಗಿ ಪ್ರಾಧಿಕಾರ ಅಧಿನಂದನೆಗಳನ್ನು ಸಲ್ಲಿಸುತ್ತದೆ' ಎಂದು ಹೇಳಿದರು.

‘ಬೆಂಗಳೂರಿನಂತಹ ಮೆಟ್ರೋಪಾಲಿಟನ್ ನಗರಗಳಲ್ಲಿ ಕನ್ನಡವನ್ನು ಉಳಿಸಿ ಬೆಳೆಸುವುದಕ್ಕೆ ಸಾರಿಗೆ ಸಂಸ್ಥೆಗಳ ಕೊಡುಗೆ ಪ್ರಮುಖವಾಗಿದ್ದು, ಸಾರಿಗೆ ಸಂಸ್ಥೆಯ ವಾಹನಗಳಲ್ಲಿ ಪ್ರಯಾಣಿಸುವ ಕನ್ನಡೇತರರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಿ, ಅವರುಗಳಿಗೆ ಕನ್ನಡವನ್ನು ಕಲಿಯುವ ಅನಿವಾರ್ಯವನ್ನು, ಕನ್ನಡದ ಮೇಲಿನ ಪ್ರೀತಿಯನ್ನು ಉಂಟು ಮಾಡುವಲ್ಲಿ ಸಾರಿಗೆ ಇಲಾಖೆಯ ಸಿಬ್ಬಂದಿಯಿರುವುದು ಶ್ಲಾಘನೀಯ' ಎಂದು ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

‘ಚಾಲಕರು ಮತ್ತು ನಿರ್ವಾಹಕರ ಎದೆಬಿಲ್ಲೆ ಮತ್ತು ಭುಜಬಿಲ್ಲೆ ಕನ್ನಡದಲ್ಲಿರಬೇಕು. ಸೇವಾ ಸಿಂಧು ಕೇಂದ್ರಗಳಲ್ಲಿ ದೊರೆಯುವ ಅಂಧರು ಮತ್ತು ಅಂಗವಿಕಲರ ಪಾಸ್‍ಗೆ ಸಂಬಂಧಿಸಿದಂತೆ ನೀಡುವ ಅರ್ಜಿ ನಮೂನೆಗಳು ಕನ್ನಡದಲ್ಲಿರಬೇಕು ಎಂದು ನಾಗಾಭರಣ ಇದೇ ವೇಳೆ ನಿರ್ದೆಶನ ನೀಡಿದರು.

ಬಿಎಂಟಿಸಿಯ ವ್ಯವಸ್ಥಾಪಕ ನಿರ್ದೇಶಕರಾದ ಜಿ.ಸತ್ಯವತಿ ಮಾತನಾಡಿ, ‘ಬಿಎಂಟಿಸಿ ಹೊರಡಿಸುವ ಮತ್ತು ಇತರೆ ವಾಣಿಜ್ಯ ವ್ಯವಹಾರಗಳಲ್ಲಿ ತೆಗೆದುಕೊಳ್ಳುವ ಜಾಹೀರಾತುಗಳಲ್ಲಿ ಪ್ರಧಾನವಾಗಿ ಕನ್ನಡವನ್ನು ಬಳಸಲು ಕ್ರಮ ವಹಿಸಲಾಗುತ್ತಿದೆ. ವಿದ್ಯುನ್ಮಾನ ಫಲಕಗಳಲ್ಲಿ ಪ್ರಕಟವಾಗುವ ಮಾಹಿತಿಗಳು ಕನ್ನಡದಲ್ಲಿರುವಂತೆ ಸಂಬಂಧಪಟ್ಟವರಿಗೆ ಸೂಕ್ತ ನಿರ್ದೇಶನ ನೀಡಲಾಗಿದೆ. ಸಂಸ್ಥೆಯಲ್ಲಿ ಬಳಕೆಯಾಗುತ್ತಿರುವ ತಂತ್ರಾಂಶಗಳಲ್ಲಿ ಸೆಪ್ಟೆಂಬರ್ ಒಳಗೆ ಕನ್ನಡದಲ್ಲಿಯೂ ಮಾಹಿತಿ ಲಭಿಸುವಂತೆ ಅಗತ್ಯಕ್ರಮ ಕೈಗೊಳ್ಳಲಾಗಿದೆ' ಎಂದರು.

‘ಕನ್ನಡ ಅಭಿವೃದ್ಧಿ ಪ್ರಾಧಿಕಾರದಿಂದ ಕನ್ನಡಪರವಾದ 2 ಸಾವಿರ ಉಕ್ತಿಗಳನ್ನು ನೀಡಿದರೆ ಬಸ್‍ಗಳು ನಿಲ್ದಾಣದಿಂದ ನಿಲ್ದಾಣಕ್ಕೆ ಸಂಚರಿಸುವಾಗ ಖಾಲಿ ಇರುವ ಕಡೆಗಳಲ್ಲಿ ಎರಡು ತಿಂಗಳೊಳಗಾಗಿ ಅಳವಡಿಸಲಾಗುವುದು ಎಂದು ಅವರು ತಿಳಿಸಿದರು. ಸಭೆಯಲ್ಲಿ ಪ್ರಾಧಿಕಾರದ ಕಾರ್ಯದರ್ಶಿ ಡಾ.ಸಂತೋಷ ಹಾನಗಲ್ಲ, ಬಿಎಂಟಿಸಿಯ ಮಾಹಿತಿ ಮತ್ತು ತಂತ್ರಜ್ಞಾನದ ನಿರ್ದೇಶಕ ಸೂರ್ಯಕಾಂತ್ ಸೇನ್ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News