ಸಮುದಾಯದ ಅಭಿವೃದ್ಧಿ ಮತ್ತು ಅವನತಿ ಯುವ ಸಮೂಹದ ಕೈಯಲ್ಲಿದೆ : ಲತೀಫ್ ಮದನಿ

Update: 2022-05-26 14:28 GMT

ಮಂಗಳೂರು: ಸಮುದಾಯದ ಶಕ್ತಿ ಕೇಂದ್ರವಾಗಿರುವ ಯುವ ಜನಾಂಗವು ಇತಿಹಾಸದ ಪುಟಗಳನ್ನು ಅರಿತು ಕೊಂಡು ಕಾರ್ಯಪ್ರವೃತ್ತರಾಗಬೇಕು. ಯಾವುದೇ ಒಂದು ಸಮುದಾಯದ ಅಭಿವೃದ್ಧಿ ಮತ್ತು ಅವನತಿಯು ಯುವ ಸಮೂಹದ ಕೈಯಲ್ಲಿದೆ ಎಂದು ಉಡುಪಿಯು ಸಮ್ಮಾನ್ ಕೌನ್ಸಿಲಿಂಗ್ ಸೆಂಟರ್‌ನ ಅಧ್ಯಕ್ಷ ಶೈಖ್ ಅಬ್ದುಲ್ ಲತೀಫ್ ಮದನಿ ಅಭಿಪ್ರಾಯಪಟ್ಟರು.

ಸೌತ್ ಕರ್ನಾಟಕ ಸಲಫಿ ಮೂವ್‌ಮೆಂಟ್(ಎಸ್‌ಕೆಎಸ್‌ಎಂ)ನ ಅಂಗಸಂಸ್ಥೆಯಾದ ಯೂತ್‌ವಿಂಗ್‌ನ ಸಲಫಿ ಗರ್ಲ್ಸ್ ವಿಮೆನ್ಸ್ ಮೂವ್‌ಮೆಂಟ್‌ನಿಂದ ನಗರದ ಪುರಭವನದಲ್ಲಿ ಬುಧವಾರ ನಡೆದ ‘ದಿ-ಐಡಿಯಲ್ ಯೂತ್-ಇಸ್ಲಾಮಿ ಯುವ ಸಮಾವೇಶ’ದಲ್ಲಿ ‘ಕುಟುಂಬ ಯೋಗಕ್ಷೇಮದಲ್ಲಿ ಯುವಕರ ಪಾತ್ರ’ ಎಂಬ ವಿಷಯದಲ್ಲಿ ಅವರು ಪ್ರವಚನ ನೀಡಿದರು.

ಇಸ್ಲಾಂ ಯುವ ಸಮೂಹಕ್ಕೆ ಹೆಚ್ಚಿನ ಆದ್ಯತೆ ಮತ್ತು ಪ್ರಾಮುಖ್ಯತೆಯನ್ನು ನೀಡಿದೆ. ಇಸ್ಲಾಮಿನ ಇತಿಹಾಸವನ್ನು ಓದಿದರೆ ಎಲ್ಲಾ ವಿಜಯಗಳಲ್ಲೂ ಯುವಕರು ಬಹಳ ಮುಖ್ಯವಾದ ಪಾತ್ರವನ್ನು ವಹಿಸಿರುವುದು ಕಂಡು ಬರುತ್ತದೆ. ಹಾಗಾಗಿ ಯುವ ಜನಾಂಗವು ಇಸ್ಲಾಮಿನ ಇತಿಹಾಸವನ್ನು ಕಲಿಯಬೇಕು. ಯುವ ಸಮೂಹಕ್ಕೆ ಸೂಕ್ತ ತರಬೇತಿ ನೀಡುವುದರ ಜೊತೆಗೆ ಅರಿವು ಮೂಡಿಸಬೇಕು ಎಂದು ಶೈಖ್ ಅಬ್ದುಲ್ ಲತೀಫ್ ಮದನಿ ಹೇಳಿದರು.

‘ಪ್ರೊಡೆಕ್ಟಿವ್ ಯೂತ್‌‘ ಎಂಬ ವಿಷಯದಲ್ಲಿ ಪ್ರವಚನ ನೀಡಿದ ಅಂತರ್‌ ರಾಷ್ಟ್ರೀಯ ಭಾಷಣಗಾರ ದುಬೈಯ ಅಹ್ಮದ್ ಹಾಮೆದ್ ಒಳಿತನ್ನು ಬಯಸಿಕೊಂಡು ಯುವ ಜನಾಂಗವು ಅಲ್ಲಾಹನ ಮಾರ್ಗದಲ್ಲೇ ಸಾಗಬೇಕು. ದೇಶ ಅಥವಾ ಸಮುದಾಯಗಳ ಅಭಿವೃದ್ಧಿಯಲ್ಲಿ ನಮ್ಮ ಪಾತ್ರ ಏನು ಎಂಬುದನ್ನು ಸ್ವತಃ ಯುವಕರು ಅರಿತುಕೊಂಡು ಸೇವೆ ಸಲ್ಲಿಸಬೇಕು ಎಂದರು.

ಎಸ್‌ಕೆಎಸ್‌ಎಂ ಯೂತ್ ವಿಂಗ್ ಅಧ್ಯಕ್ಷ ಇಂಜಿನಿಯರ್ ಮುಹಮ್ಮದ್ ಆತೀಶ್ ‘ಮುಸ್‌ಅಬ್ ಬಿನ್ ಉಮೈರ್ (ರ)ರವರ ತ್ಯಾಗೋಜ್ವಲ ಜೀವನ‘ ಎಂಬ ವಿಷಯದಲ್ಲಿ ಪ್ರವಚನ ನೀಡಿದರು.

ಮುಖ್ಯ ಅತಿಥಿಯಾಗಿ ಸೌದಿ ಅರೇಬಿಯಾದ ಸ್ಯಾಕೋ ಕಾಂಟ್ರಾಕ್ಟಿಂಗ್ ಕಂಪೆನಿಯ ಸಿಇಒ, ಅಲ್-ಇಬಾದಾ ಇಂಡಿಯನ್ ಸ್ಕೂಲ್ ಮಣಿಪಾಲ ಇದರ ಸಂಸ್ಥಾಪಕ ಹಾಗೂ ಅಧ್ಯಕ್ಷ ಹಮ್ಮಾದ್ ಬಶೀರ್ ಸಾಗರ್‌ರ ಪರವಾಗಿ ಅವರ ಪುತ್ರ ಝೈದ್ ಬಶೀರ್ ಸಾಗರ್ ಭಾಗವಹಿಸಿದ್ದರು.

ಎಸ್‌ಕೆಎಸ್‌ಎಂ ಮಂಗಳೂರು ಇದರ ಅಧ್ಯಕ್ಷ ಬಶೀರ್ ಅಹ್ಮದ್ ಶಾಲಿಮಾರ್ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.

ಎಸ್‌ಕೆಎಸ್‌ಎಂ ಕಾರ್ಯದರ್ಶಿ ಅಬ್ದುಲ್ ರಹ್ಮಾನ್ ಉಪ್ಪಿನಂಗಡಿ ಉಪಸ್ಥಿತರಿದ್ದರು.

ಎಸ್‌ಕೆಎಸ್‌ಎಂ ಯೂತ್ ವಿಂಗ್ ಪ್ರಧಾನ ಕಾರ್ಯದರ್ಶಿ ಮೂಸಾ ಫಾಝಿಲ್ ಸ್ವಾಗತಿಸಿದರು. ಅಹ್ಮದ್ ಅನೀಸ್ ಕಾರ್ಯಕ್ರಮ ನಿರೂಪಿಸಿದರು. ಮುಸ್ಫರ್ ಅಹ್ಮದ್ ವಂದಿಸಿದರು.

ಬೆಳಗ್ಗೆ ನಡೆದ ‘ದಿ ಐಡಿಯಲ್ ವಿಮೆನ್-ಇಸ್ಲಾಮೀ ಮಹಿಳಾ ಸಮಾವೇಶ’ದಲ್ಲಿ ಉಮ್ಮು ಫಾಝಿಲ್, ಹಫೀಝಾ ಸ್ವಲಾಹಿಯಾ, ಮುಝಾಹಿದಾ ಹಾಗೂ ಜುವೇರಿಯಾ ಹಯಾತ್ ವಿವಿಧ ವಿಷಯಗಳ ಕುರಿತು ಪ್ರವಚನ ನೀಡಿದರು.

ವೇದಿಕೆಯಲ್ಲಿ ಸಲಫಿ ಗರ್ಲ್ಸ್ ಆ್ಯಂಡ್ ವಿಮೆನ್ಸ್ ಮೂವ್‌ಮೆಂಟ್‌ನ ಅಧ್ಯಕ್ಷೆ ಬಶೀರಾ, ಕಾರ್ಯದರ್ಶಿ ನಾಝಿಯಾ, ಅಡ್ವಕೇಟ್ ನೌಶಾದ್ ಭಾನು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News