ಸರಕಾರಕ್ಕೆ ಭ್ರಷ್ಟ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿಲ್ಲ: ಆಪ್

Update: 2022-05-25 16:25 GMT

ಬೆಂಗಳೂರು, ಮೇ 25: ಪಂಜಾಬ್‍ನಲ್ಲಿ ಸಚಿವರೊಬ್ಬರು ಒಂದು ಪರ್ಸೆಂಟ್ ಕಮಿಷನ್ ತೆಗೆದುಕೊಳ್ಳುತ್ತಿದ್ದಾರೆ ಎಂಬುದನ್ನು ತಿಳಿದ ಆಮ್ ಆದ್ಮಿ ಪಕ್ಷದ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಶೀಘ್ರವೇ ಕಳಂಕಿತ ಸಚಿವರನ್ನು ವಜಾ ಮಾಡಿ, ತನಿಖೆಗೆ ಆದೇಶಿಸಿದ್ದಾರೆ. ಆದರೆ ಕರ್ನಾಟಕ ರಾಜ್ಯದಲ್ಲಿ ಶೇ.40ರಷ್ಟು ಭ್ರಷ್ಟಾಚಾರವನ್ನು ಮಾಡಿದ ಸಚಿವರನ್ನು ಇರಿಸಿಕೊಂಡಿದ್ದು, ಈ ನಪುಂಸಕ ಸರಕಾರಕ್ಕೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿಲ್ಲ ಎಂದು ಆಮ್ ಆದ್ಮಿ ಪಾರ್ಟಿಯ ರಾಜ್ಯ ಸಂಚಾಲಕ ಪೃಥ್ವಿ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  

ಬುಧವಾರ ಪ್ರೆಸ್‍ಕ್ಲಬ್‍ನಲ್ಲಿ ಮಾತನಾಡಿದ ಅವರು, ಪಂಜಾಬ್ ರಾಜ್ಯದಲ್ಲಿ ಪ್ರತಿಪಕ್ಷಗಳು ಹಾಗೂ ಮಾಧ್ಯಮಗಳು ಕಳಂಕಿತ ಸಚಿವರ ರಾಜೀನಾಮೆಗೆ ಆಗ್ರಹಿಸುವ ಮುನ್ನವೇ ಮಾನ್‍ರವರು ವಜಾ ಮಾಡಿದ್ದಾರೆ. ಆದರೆ ಬಿಜೆಪಿ ಆಡಳಿತವಿರುವ ನಮ್ಮ ರಾಜ್ಯದಲ್ಲಿ ಬಹುತೇಕ ಸಚಿವರ ಮೇಲೆ ಸಾಲುಸಾಲು ಭ್ರಷ್ಟಾಚಾರದ ಆರೋಪ ಕೇಳಿಬರುತ್ತಿದ್ದು, ಜನರು ರಾಜೀನಾಮೆಗೆ ಆಗ್ರಹಿಸುತ್ತಿದ್ದಾರೆ. ಆದರೆ ಸರಕಾರ ಯಾವುದೇ ಕ್ರಮ ಕೈಗೊಳ್ಳದೆ, ಮೌನವಹಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು.

ರಾಜ್ಯದಲ್ಲಿ ಆಮ್ ಆದ್ಮಿ ಪಾರ್ಟಿಯು ನಿರಂತರವಾಗಿ ಭ್ರಷ್ಟಾಚಾರದ ವಿರುದ್ಧ ಹೋರಾಡುತ್ತಿದೆ. ರಸ್ತೆಗುಂಡಿಗಳಲ್ಲಿನ ಶೇ.40 ಭ್ರಷ್ಟಾಚಾರದ ವಿರುದ್ಧ ಎಎಪಿ ಹಲವು ದೂರು ದಾಖಲಿಸಿದೆ. ನಿರಂತರವಾಗಿ ಪ್ರತಿಭಟನೆ, ಸುದ್ದಿಗೋಷ್ಠಿ ಮಾಡಿ ಭ್ರಷ್ಟಾಚಾರವನ್ನು ಬಯಲು ಮಾಡುತ್ತಿದ್ದೇವೆ. ಆದರೆ ಈ ನಪುಂಸಕ ಸರಕಾರಕ್ಕೆ ಸಚಿವರ ವಿರುದ್ಧ ಕ್ರಮ ಕೈಗೊಳ್ಳುವ ಧೈರ್ಯವಿಲ್ಲ. ಡಾ. ಸುಧಾಕರ್, ಮುನಿರತ್ನ ಮತ್ತಿತರ ಅನೇಕ ಸಚಿವರ ವಿರುದ್ಧ ಗಂಭೀರ ಆರೋಪಗಳಿವೆ. ಕಾಮಗಾರಿಗಳಲ್ಲಿ ಶೇ.40 ಕಮಿಷನ್ ದಂಧೆ ನಡೆಯುತ್ತಿದೆ ಎಂದು ಗುತ್ತಿಗೆದಾರರು ಮಾಧ್ಯಮಗಳ ಮುಂದೆ ಆರೋಪಿಸಿದ್ದಾರೆ. ಮಠಕ್ಕೆ ಅನುದಾನ ಪಡೆಯಲು ಶೇ.30 ಕಮಿಷನ್ ನೀಡಬೇಕಾಗಿದೆ ಎಂದು ಸ್ವಾಮೀಜಿಗಳೇ ಆರೋಪ ಮಾಡಿದ್ದಾರೆ. ಎಲ್ಲ ಕಳಂಕಿತ ಸಚಿವರನ್ನೂ ಶೀಘ್ರವೇ ವಜಾ ಮಾಡಿ, ನ್ಯಾಯಾಂಗ ತನಿಖೆಗೆ ಆದೇಶಿಸಬೇಕು ಎಂದು ಅವರು ಆಗ್ರಹಿಸಿದರು.

ನಿವೃತ್ತ ಐಪಿಎಸ್ ಅಧಿಕಾರಿ ಹಾಗೂ ಎಎಪಿ ಮುಖಂಡ ಭಾಸ್ಕರ್ ರಾವ್ ಮಾತನಾಡಿ, ಕೋವಿಡ್ ಉಪಕರಣಗಳ ಖರೀದಿಯಲ್ಲಿ ಅವ್ಯವಹಾರ ಆಗಿರುವ ಬಗ್ಗೆ ಆರೋಗ್ಯ ಸಚಿವ ಸುಧಾಕರ್ ವಿರುದ್ಧ ಅಂಕಿ-ಅಂಶ ಸಹಿತ ಆರೋಪ ಮಾಡಲಾಗಿತ್ತು. ಲೋಕಾಯುಕ್ತ ತನಿಖೆಯಿಂದ ಸಾಬೀತಾದ 118.26 ಕೋಟಿ ರೂ. ಮೊತ್ತದ ಅಕ್ರಮಕ್ಕೆ ಸಂಬಂಧಿಸಿ ಸಚಿವ ಮುನಿರತ್ನ ರಾಜೀನಾಮೆಗೆ ಎಎಪಿ ಅನೇಕ ಸಲ ಆಗ್ರಹಿಸಿತ್ತು. ಪಿಎಸ್‍ಐ ಹಾಗೂ ಸಹಾಯಕ ಪ್ರಾಧ್ಯಾಪಕರ ನೇಮಕಾತಿಯಲ್ಲಿನ ಅಕ್ರಮದಲ್ಲಿ ಸಚಿವ ಡಾ. ಸಿ.ಎನ್.ಅಶ್ವತ್ ನಾರಾಯಣ್ ಹೆಸರು ಪದೇಪದೇ ಕೇಳಿಬರುತ್ತಿದೆ ಎಂದು ಮಾಹಿತಿ ನೀಡಿದರು.

ಸಚಿವ ಬೈರತಿ ಬಸವರಾಜು ಅವರು ನಕಲಿ ದಾಖಲೆ ಸೃಷ್ಟಿಸಿ ಕೆ.ಆರ್.ಪುರಂನಲ್ಲಿ 36 ಎಕರೆ ಗೋಮಾಳ ಕಬಳಿಸಿದ ಆರೋಪ ಹೊತ್ತಿದ್ದಾರೆ. ಸಚಿವ ವಿ. ಸೋಮಣ್ಣ ವಿರುದ್ಧ ಆದಾಯ ಮೀರಿದ ಆಸ್ತಿ ಗಳಿಸಿದ ಕಳಂಕವಿದೆ. ಸಚಿವ ಆರ್.ಅಶೋಕ್ 79 ಎ/ಬಿ ಅಕ್ರಮದಲ್ಲಿ ಭಾಗಿಯಾಗಿದ್ದಾರೆ. ಮೊಟ್ಟೆ ಖರೀದಿಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ 27 ಕೋಟಿ ರೂ. ಅಕ್ರಮಕ್ಕೆ ಡೀಲ್ ಮಾಡಿಕೊಳ್ಳುತ್ತಿರುವುದು ವಿಡಿಯೋದಲ್ಲಿ ದಾಖಲಾಗಿದೆ ಎಂದರು. 

ಸಚಿವ ನಿರಾಣಿ ಮೇಲೆ ಸಾವಿರಾರು ರೈತರ ಹೆಸರಿನಲ್ಲಿ ಅಕ್ರಮವಾಗಿ ಬೆಳೆ ಸಾಲ ಪಡೆದ ಆರೋಪವಿದೆ. ಸಚಿವ ಬಿ.ಸಿ.ಪಾಟೀಲ್ ಅವರು ಬೇರೆ ರಾಜ್ಯಗಳಿಗೆ ರಸಗೊಬ್ಬರ ಕಳ್ಳಸಾಗಣೆ ದಂಧೆಯಲ್ಲಿ ಭಾಗಿಯಾಗುತ್ತಿದ್ದಾರೆ. ಹೀಗೆ ಅನೇಕ ಸಚಿವರ ವಿರುದ್ಧ ಗಂಭೀರ ಆರೋಪಗಳಿದ್ದರೂ ಸರಕಾರ ಯಾವುದೇ ಕ್ರಮ ಕೈಗೊಳ್ಳದಿರುವುದು ದುರದೃಷ್ಟಕರ ಎಂದು ಕಳವಳ ವ್ಯಕ್ತಪಡಿಸಿದರು. 

ಸಿಎಂ ಭ್ರಷ್ಟರ ರಕ್ಷಣೆಯಲ್ಲಿದ್ದಾರೆ

ಅಧಿಕಾರಿಗಳ ವರ್ಗಾವಣೆಗೆ 20 ಲಕ್ಷ ರೂಪಾಯಿಯಿಂದ 5 ಕೋಟಿ ರೂಪಾಯಿವರೆಗೆ ಲಂಚ ಪಡೆಯುತ್ತಿರುವ ಬಗ್ಗೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಆದರೆ ಲೋಕಾಯುಕ್ತ ಹಾಗೂ ಎಸಿಬಿಯು ಕಳೆದ ಐದು ವರ್ಷಗಳಲ್ಲಿ ಒಬ್ಬರಿಗೂ ಶಿಕ್ಷೆ ಆಗುವಂತೆ ಮಾಡಿಲ್ಲ. ರಾಜ್ಯದ ಇಡೀ ಆಡಳಿತ ವ್ಯವಸ್ಥೆಯೇ ಭ್ರಷ್ಟವಾಗಿದ್ದು, ಸಿಎಂ ಬಸವರಾಜ ಬೊಮ್ಮಾಯಿ ಅವರು ಭ್ರಷ್ಟರ ರಕ್ಷಣೆಯಲ್ಲಿ ನಿರತರಾಗಿದ್ದಾರೆ. 
-ಕೆ.ಮಥಾಯಿ, ಮಾಜಿ ಕೆಎಎಸ್ ಅಧಿಕಾರಿ 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News