ದರೋಡೆ ಪ್ರಕರಣ; ಮೂವರು ಆರೋಪಿಗಳ ಬಂಧನ

Update: 2022-05-25 17:49 GMT

ಬಜ್ಪೆ : ಮಸ್ಕತ್ ಗೆ ಪ್ರಯಾಣಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ‌ ಕಾರಿನಲ್ಲಿ ಬರುತ್ತಿದ್ದ ವ್ಯಕ್ತಿಯೊಬ್ಬರನ್ನು ದರೋಡೆಗೈದ ಆರೋಪಿಗಳನ್ನು ಬಜ್ಪೆ ಪೊಲೀಸರು ಇಂದು ಬಂಧಿಸಿದ್ದಾರೆ.

ಉಪ್ಪಿನಂಗಡಿಯ ನೌರೀಝ್ (30), ನೌಶಾದ್ (32) ಹಾಗೂ ಗಂಜಿಮಠ ಬಡಗುಳಿಪಾಡಿಯ ಅಕ್ಬರ್ (40) ಬಂಧಿತರು‌ ಎಂದು ಪೊಲೀಸರು ತಿಳಿಸಿದ್ದಾರೆ.

ನಾರ್ಲಪದವಿನ ಅಬ್ದುಲ್ ರಹ್ಮಾನ್ ಎಂಬವರು ಮೇ 23ರಂದು ಬೆಳಗ್ಗೆ 4.30ಕ್ಕೆ ಮಸ್ಕತ್‌ಗೆ ಪ್ರಯಾಣಿಸಲು ಮಂಗಳೂರು ವಿಮಾನ ನಿಲ್ದಾಣಕ್ಕೆ ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಈ ವೇಳೆ ಕಂದಾವರ ಸಮೀಪಿಸುತ್ತಿದ್ದಂತೆ ಕಾರಿನಲ್ಲಿ ಬಂದ ಐವರು ಆರೋಪಿಗಳು ಅಬ್ದುಲ್  ರಹ್ಮಾನ್ ಅವರ ಕಾರನ್ನು ಅಡ್ಡಗಟ್ಟಿ ಅವರನ್ನು ಎಳೆದು ಚೂರಿ ಮತ್ತು ಮರದ ದೊಣ್ಣೆಯಿಂದ ಹಲ್ಲೆ ನಡೆಸಿ ಅವರ ಬಳಿ ಇದ್ದ  ಪಾಸ್‌ಪೋರ್ಟ್, ಹಣ ಮತ್ತು ಮೊಬೈಲ್‌ನ್ನು ದರೋಡೆ ಮಾಡಿದ್ದರು ಎಂದು ದೂರಲಾಗಿದೆ.

ಈ ಸಂಬಂಧ ಅಬ್ದುಲ್‌ ರಹ್ಮಾನ್ ಅವರು ಬಜ್ಪೆ ಪೊಲೀಸ್ ಠಾಣೆಯಲ್ಲಿ ದರೋಡೆ ಪ್ರಕರಣ ದಾಖಲಿಸಿದ್ದರು. ಪ್ರಕರಣದ  ತನಿಖೆ ನಡೆಸಿದ ಪೊಲೀಸರು, ಆರೋಪಿಗಳನ್ನು ಬಂಧಿಸಿ ದರೋಡೆಗೈದಿದ್ದ ಸೊತ್ತುಗಳ ಸಹಿತ ಕೃತ್ಯಕ್ಕೆ ಬಳಸಿದ್ದ ಕಾರು, ಚೂರಿ ಹಾಗೂ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿರುವುದಾಗಿ ಪೊಲೀಸರು ಮಾಹಿತಿ‌ ನೀಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News