ಪಬ್ಲಿಕ್‌ ಟಿವಿಯಲ್ಲಿ ಮಾತಾಡಿದ ಖಾಲಿದ್‌ಗೂ ಮಳಲಿ ಪೇಟೆ ಮಸೀದಿಗೂ ಯಾವುದೇ ಸಂಬಂಧವಿಲ್ಲ: ಜಮಾಅತ್‌ ಸ್ಪಷ್ಟನೆ‌

Update: 2022-05-26 10:17 GMT

ಮಂಗಳೂರು : ಮಳಲಿ ಪೇಟೆ ಮಸೀದಿಯ ವಿಚಾರವಾಗಿ ಪಬ್ಲಿಕ್‌ ಟಿವಿಯಲ್ಲಿ ಮಾತನಾಡಿದ ಖಾಲಿದ್ ಎಂಬ ವ್ಯಕ್ತಿಗೂ ಮಳಲಿಪೇಟೆ ಜುಮಾ‌ ಮಸೀದಿಗೂ ಯಾವುದೇ ಸಂಬಂಧ‌ವಿಲ್ಲ ಎಂದು ಮಳಲಿ ಜಮಾಅತ್ ಸ್ಪಷ್ಟನೆ‌ ನೀಡಿದೆ.

ಬುಧವಾರ ಹಿಂದುತ್ವ ಸಂಘಟನೆಗಳು 'ತಾಂಬುಲ‌ ಪ್ರಶ್ನೆ' ಕಾರ್ಯಕ್ರಮದ‌ ಬಳಿಕ ಪಬ್ಲಿಕ್‌‌ ಟಿವಿ ಜಮಾಅತ್ ಅಥವಾ ಊರಿಗೆ ಸಂಬಂಧವೇ ಇಲ್ಲದ ಖಾಲಿದ್ ಎಂಬಾತನನ್ನು ಸ್ಟೂಡಿಯೊಗೆ‌ ಕರೆಸಿ ಮಳಲಿ ಮಸೀದಿಯ ಕುರಿತು ಮಾತುಕತೆ ನಡೆಸಿದ್ದಾರೆ. ಆದರೆ, ಟಿವಿಯಲ್ಲಿ ಮಾತನಾಡಿರುವ ಖಾಲಿದ್ ಎಂಬಾತ ನಮ್ಮ ಜಮಾಅತ್ ಕಮಿಟಿಯ ಸದಸ್ಯನೂ ಅಲ್ಲ, ನಮ್ಮ ಜಮಾಅತ್ ನವನೇ ಅಲ್ಲ. ಈತ ಯಾರು ? ಯಾತಕ್ಕಾಗಿ ಮಸೀದಿಯ ವಿಚಾರದಲ್ಲಿ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾನೆ ಎಂದು ತಿಳಿದಿಲ್ಲ ಎಂದು ಜಮಾಅತ್ ಸಮಿತಿ ಸ್ಪಷ್ಟಪಡಿಸಿದೆ.

ಟಿವಿಯಲ್ಲಿ‌ ಮಾತನಾಡುತ್ತಾ ಖಾಲಿದ್‌ "ಮಸೀದಿ‌ ಇರುವ ಸ್ಥಳದಲ್ಲಿ‌ ಯಾವುದೇ ಸಂಶೋಧನೆ‌ಗಳು ನಡೆದು ಅಲ್ಲಿ ದೇವಸ್ಥಾನ ಇರುವುದು ಗೊತ್ತಾದರೆ, ಆ ಸ್ಥಳವನ್ನು ಬಿಟ್ಟು ಕೊಡುತ್ತೇವೆ.‌ ನಮಗೆ ಮಸೀದಿ ನಿರ್ಮಾಣಕ್ಕೆ ಬೇರೆ ಸ್ಥಳ ನೀಡಲಿ" ಎಂದು ಹೇಳಿದ್ದಾರೆ. ಅಲ್ಲದೆ, ಈ ಬಗ್ಗೆ ಜಮಾಅತ್ ನವರು ಅವರಲ್ಲಿ ಹೇಳಿಕೊಂಡಿದ್ದಾರೆ ಎಂದು ಅವರು ಸ್ಟುಡಿಯೊದಲ್ಲಿ ತಿಳಿಸಿದ್ದಾರೆ. ಈ ರೀತಿ ಹೇಳಿಕೆ ಕೊಡಲು ಈ ಖಾಲಿದ್ ಎಂಬಾತ ಯಾರು ಎಂದು ಪ್ರಶ್ನಿಸಿರುವ ಜಮಾಅತ್ ಮುಖಂಡರು, ಖಾಲಿದ್ ಅವರಿಗೆ ಮಸೀದಿಯ ವಿಚಾರವಾಗಿ ಮಾಹಿತಿ ನೀಡಿದ ಜಮಾಅತ್ ನವರ  ಹೆಸರನ್ನು ಇದೇ ವಾಹಿನಿಯ ಮೂಲಕ ಬಹಿರಂಗ ಪಡಿಸಬೇಕು ಎಂದು ಒತ್ತಾಯಿಸಿದೆ.

ಜಮಾಅತ್ ಕಮಿಟಿ ಮತ್ತು ಊರಿನ ಮುಸ್ಲಿಮರು ಒಂದಾಗಿ ನಿಂತಿದ್ದೇವೆ. ಯಾರೋ ಎಲ್ಲಿಯೋ ಕುಳಿತು ಹೇಳಿಕೆಗಳನ್ನು ನೀಡುತ್ತಿದ್ದರೆ ಅದು ಜಮಾಅತ್ ಕಮಿಟಿಯ ಹೇಳಿಕೆಯಾಗುವುದಿಲ್ಲ ಎಂದಿರುವ ಸಮಿತಿಯ ಮುಖಂಡರು, ನಾವು ಕಾನೂನು ರೀತಿಯ ಹೋರಾಟ ಮಾಡಲಿದ್ದೇವೆ ಹೊರತು ಯಾವುದೇ ಮಾತುಕತೆಗಳಿಗೆ ಸಿದ್ಧರಿಲ್ಲ ಎಂದು ಸ್ಪಷ್ಟನೆ‌ ನೀಡಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News