ಕಾಲ ಬದಲಾದಂತೆ ಕ್ರೈಮ್ ಸ್ವರೂಪ ಬದಲು : ಎಡಿಜಿಪಿ ಅಲೋಕ್‌ ಕುಮಾರ್

Update: 2022-05-26 16:07 GMT
ಎಡಿಜಿಪಿ ಅಲೋಕ್ ಕುಮಾರ್

ಉಡುಪಿ: ರಾಜ್ಯ ಕಾನೂನು ಮತ್ತು ಸುವ್ಯವಸ್ಥೆ ಎಡಿಜಿಪಿ ಅಲೋಕ್ ಕುಮಾರ್ ಅವರು ಗುರುವಾರ ನಗರದ ಎಸ್ಪಿ ಕಚೇರಿಯಲ್ಲಿ ಜಿಲ್ಲಾಮಟ್ಟದ ಪೊಲೀಸ್ ಅಧಿಕಾರಿಗಳ ಸಭೆ ನಡೆಸಿದರು. 

ಸಭೆಯ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕರ್ನಾಟಕ ಕರಾವಳಿ ಭಾಗ ಸೂಕ್ಷ್ಮ ಪ್ರದೇಶ ವಾಗಿದ್ದು, ಸದ್ಯ ನಾನು ಮೂರನೇ ರೇಂಜ್ ನೋಡುತ್ತಿದ್ದೇನೆ. ಎಲ್ಲಾ  ರೇಂಜ್ ನೋಡಬೇಕಾಗಿರುವುದರಿಂದ ಅಧಿಕಾರಿಗಳು ಯಾರಿದ್ದಾರೆ, ಏನೇನು ಪರಿಸ್ಥಿತಿ ಇದೆ ನೋಡಬೇಕು ಎಂದರು.

ಹಿಂದಿನಿಂದಲೂ ಕರಾವಳಿ ಸೂಕ್ಷ್ಮ ಪ್ರದೇಶವಾಗಿಯೇ ಇದೆ. ಹಿಜಾಬ್ ಪ್ರಕರಣದಿಂದ ಕರಾವಳಿ ಸೂಕ್ಷ್ಮ ಪ್ರದೇಶವಾಗಿದ್ದಲ್ಲ. ಹಿಂದಿನಿಂದಲೂ ಕರಾವಳಿ ಸೂಕ್ಷ್ಮ ಪ್ರದೇಶವೇ. ಕಾಲ ಕಾಲಕ್ಕೆ ಬೇರೆ ಬೇರೆ ಸ್ವರೂಪದಲ್ಲಿ ಬದಲಾಗುತ್ತಿರುತ್ತದೆ. ಹಿಂದೆ ಅಂಡರ್‌ ವರ್ಲ್ಡ್ ಇಲ್ಲಿ ಜೋರಾಗಿತ್ತು, ಅದು ಬದಲಾಯಿತು. ಈಗ ಬೇರೆ ಸಮಸ್ಯೆ ಆರಂಭವಾಗಿದೆ. ಪೋಲಿಸರು ಯಾವುದೇ ಸಮಸ್ಯೆ ಎದುರಿಸಲು ಸಮರ್ಥರಾಗಿದ್ದಾರೆ. ಮುಂದೆ ಕೂಡ ಯಾವುದೇ ಸಮಸ್ಯೆ ಬಂದರೂ ಅದನ್ನು ಎದುರಿಸಲು ಸಮರ್ಥರಿದ್ದಾರೆ ಎಂದು  ಇಲಾಖೆಯನ್ನು ಸಮರ್ಥಿಸಿಕೊಂಡರು.

ಉಡುಪಿಯಲ್ಲಿ ಆತ್ಮಹತ್ಯೆ ಹೆಚ್ಚಳ: ಜನರು ಆತ್ಮಹತ್ಯೆ ಮಾಡಲು ಉಡುಪಿಯನ್ನು ಯಾಕೆ ಆಯ್ಕೆ ಮಾಡಿಕೊಳ್ಳುತ್ತಿ ದ್ದಾರೆ ಗೊತ್ತಿಲ್ಲ, ಅದರ ಬಗ್ಗೆ ವಿಶ್ಲೇಷಣೆ ಮಾಡುತ್ತಿದ್ದೇವೆ. ಚೆಕ್ ಪೋಸ್ಟ್ ಮತ್ತು ವಾಹನ ತಪಾಸಣೆ ಹೆಚ್ಚು ಮಾಡಬೇಕು, ಈ ರೀತಿಯ ಘಟನೆಗೆ ಕಡಿವಾಣ ಹಾಕುತ್ತೇವೆ ಎಂದರು.

ಗೋ ಸಾಗಾಟ ಕುರಿತಂತೆ ಕಾನೂನಿನ ಇತಿ ಮಿತಿಯಲ್ಲಿ ಕ್ರಮ ಕೈಗೊಳ್ಳಲು ನಾವು ಸಿದ್ದರಿದ್ದೇವೆ. ಯಾರು ಸಹ ಕಾನೂನನ್ನು ಕೈಗೆತ್ತಿಕೊಳ್ಳಬಾರದು. ಪೊಲೀಸ್ ಇಲಾಖೆಗೆ ಮಾಹಿತಿ ನೀಡಿ, ಪೊಲೀಸರು ಕ್ರಮ ಕೈಗೊಳ್ಳುತ್ತಾರೆ ಎಂದರು.

ಪಾಟೀಲ್ ಆತ್ಮಹತ್ಯೆ ಪ್ರಕರಣ: ಸಂತೋಷ್ ಪಾಟೀಲ್ ಆತ್ಮಹತ್ಯೆ ಪ್ರಕರಣದಲ್ಲಿ ತಾಂತ್ರಿಕ ವಿಚಾರಗಳ ಬಗ್ಗೆ ತನಿಖೆ ನಡೆಯುತ್ತಿದೆ. ಇದಕ್ಕೆ ಇನ್ನೂ ಸ್ವಲ್ಪ ಕಾಲಾವಕಾಶ ಬೇಕು. ಸಾಕಷ್ಟು ಗುತ್ತಿಗೆ ಪಡೆದಿದ್ದರು. ಅದರ ಲೆಕ್ಕ ಪರಿಶೋಧನೆಗೆ ಸಮಯ ಹಿಡಿಯುತ್ತದ. ತಕ್ಷಣ ತನಿಖೆ ಮುಗಿಯುವುದಿಲ್ಲ. ಅಂತಿಮ ನಿರ್ಣಯಕ್ಕೆ ಬರಲು ಎಲ್ಲಾ ಆಯಾಮದಲ್ಲಿ ತನಿಖೆ ಮಾಡುತ್ತಿದ್ದೇವೆ. ಎಫ್‌ಎಸ್‌ಎಲ್ ವರದಿ ಇನ್ನೂ ಬಂದಿಲ್ಲ ಎಂದು ತಿಳಿಸಿದರು.

ಮಂಗಳೂರಿನಲ್ಲಿ ಮತ್ತೆ ಹಿಜಾಬ್ ವಿವಾದದ ಕುರಿತು ಮಾತನಾಡಿದ ಅಲೋಕ್ ಕುಮಾರ್, ಸಮಸ್ಯೆಗಳು ಇದ್ದೆ ಇರುತ್ತದೆ. ಕಾನೂನು ಸುವ್ಯವಸ್ಥೆ ಭಂಗ ಆಗಲು ಬಿಡುವುದಿಲ್ಲ. ಜನರು ತಮ್ಮ ತಮ್ಮ ಅಭಿಪ್ರಾಯಕ್ಕೆ ತಕ್ಕಂತೆ ಪ್ರತಿಭಟನೆ ಮಾಡುತ್ತಾರೆ, ಆದರೆ ನಮ್ಮವರು ಸ್ಥಳಕ್ಕೆ ತೆರಳಿ ಬಂದೋಬಸ್ತ್ ನೀಡಿದ್ದಾರೆ. ಯಾವುದೇ ಅಹಿತಕರ ಘಟನೆಗೆ ಆಸ್ಪದ ನೀಡಿಲ್ಲ ಎಂದರು.

ಪೊಲೀಸ್ ಪ್ರಮೋಶನ್ ವಿಚಾರ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಸೀನಿಯಾರಿಟಿ ಆಧಾರದಲ್ಲಿ ಮಹಿಳಾ ಎಎಸ್‌ಐ ಮತ್ತು ಪುರುಷ ಎಎಸ್‌ಐ ಪ್ರಮೋಶನ್ ವಿಚಾದಲ್ಲಿ ಸಮಸ್ಯೆ ಇದ್ದರೇ ಅವರವರ ಎಸ್ಪಿಯ ಗಮನಕ್ಕೆ ತರಬೇಕು. ಕೋರ್ಟ್ ಆದೇಶ ಏನಿದೆ ಎಂಬುದನ್ನು ತಿಳಿದು ನಿಯಮಗಳ ಪ್ರಕಾರ ಕ್ರಮ ಕೈಗೊಳ್ಳುತ್ತೇವೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News