×
Ad

ದ.ಕ. ಜಿಲ್ಲಾಧಿಕಾರಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆ ಬಗೆಹರಿಸಲು ಯು.ಟಿ. ಖಾದರ್ ಆಗ್ರಹ

Update: 2022-05-26 21:54 IST

ಮಂಗಳೂರು : ನಗರರ ಹಂಪನಕಟ್ಟೆಯಲ್ಲಿರುವ ಮಂಗಳೂರು ವಿವಿ ಕಾಲೇಜಿನಲ್ಲಿ ಹಿಜಾಬ್‌ಗೆ ಕೆಲವು ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿರುವ ಪ್ರಕರಣವು ಗಂಭೀರಗೊಳ್ಳುವ ಮುನ್ನ ದ.ಕ. ಜಿಲ್ಲಾಧಿಕಾರಿ ತಕ್ಷಣ ಮಧ್ಯಪ್ರವೇಶಿಸಿ ಸಮಸ್ಯೆಯನ್ನು ಬಗೆಹರಿಸಬೇಕು ಎಂದು ರಾಜ್ಯ ವಿಧಾನ ಸಭೆಯ ವಿಪಕ್ಷ ಉಪನಾಯಕ ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

ಈ ಬಗ್ಗೆ ಗುರುವಾರ ರಾಜ್ಯ ಮುಖ್ಯ ಕಾರ್ಯದರ್ಶಿ ರವಿ ಕುಮಾರ್ ಅವರನ್ನು ವಿಧಾನ ಪರಿಷತ್ ಸದಸ್ಯ ನಸೀರ್ ಅಹ್ಮದ್ , ಅಬ್ದುಲ್ ಜಬ್ಬಾರ್ ಜೊತೆ ಭೇಟಿಯಾಗಿ ಧಾರ್ಮಿಕ ಸೂಕ್ಷ್ಮ ವಿಷಯಗಳನ್ನು ಎಳೆದು ತಂದು ಗೊಂದಲ ಸೃಷ್ಟಿಸುವ ಪ್ರಯತ್ನ ನಡೆಯುತ್ತಿದೆ. ಹಾಗಾಗಿ ಜಿಲ್ಲಾಧಿಕಾರಿ ಕೂಡಲೇ ಮಧ್ಯ ಪ್ರವೇಶಿಸಿ ಕಾಲೇಜು ಪ್ರಾಂಶುಪಾಲರು, ಕಾನೂನು ತಜ್ಞರ ಜೊತೆ ಸಭೆ ನಡೆಸಿ ಪರಿಸ್ಥಿತಿಯನ್ನು ತಿಳಿಗೊಳಿಸಬೇಕು. ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ನೋಡಿಕೊಳ್ಳಬೇಕು ಎಂದು ಒತ್ತಾಯಿಸಿದರು.

ಸುಮಾರು 1500ಕ್ಕೂ ಹೆಚ್ಚು ವಿದ್ಯಾರ್ಥಿಗಳಿರುವ ಕಾಲೇಜಲ್ಲಿ ಇದ್ದಕ್ಕಿದ್ದ ಹಾಗೆ ಕೆಲವು ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುವುದರ ಹಿಂದೆ ಸಂಘಟನೆಗಳ ಕೈವಾಡವಿದೆ. ಇಂತಹ ಪರಿಸ್ಥಿತಿ ನಿರ್ಮಾಣವಾಗಲು ಜಿಲ್ಲಾಡಳಿತದ ವೈಫಲ್ಯವೇ ಕಾರಣ. ವಿವಿ ಕಾಲೇಜಿನಲ್ಲಿ ಹಿಂದಿನಿಂದಲೂ ಶಿರವಸ್ತ್ರಕ್ಕೆ ಅವಕಾಶವಿತ್ತು. ಈಗ ಇದ್ದಕ್ಕಿದ್ದ ಹಾಗೆ ತರಗತಿಯಲ್ಲಿ ಶಿರವಸ್ತ್ರಕ್ಕೆ ಅವಕಾಶವಿಲ್ಲ ಎಂದು ನಿರ್ಧಾರ ತೆಗೆದುಕೊಳ್ಳಲಾಗಿದೆ. ಅಂತಹ ನಿರ್ಧಾರ ತೆಗೆದುಕೊಳ್ಳುವುದಿದ್ದರೂ ಮುಂದಿನ ಶೈಕ್ಷಣಿಕ ವರ್ಷದಿಂದ ತೆಗೆದುಕೊಳ್ಳಬಹುದಿತ್ತು.  ಆದರೂ ಕಾಲೇಜು ಆವರಣದಲ್ಲಿ ಶಿರವಸ್ತ್ರಕ್ಕೆ ನಿರ್ಬಂಧವಿಲ್ಲ. ಪ್ರತಿಭಟನೆ ನಡೆಸುವ ವಿದ್ಯಾರ್ಥಿಗಳಿಗೆ ಇದನ್ನು ಸ್ಪಷ್ಟಪಡಿಸುವ ಜವಾಬ್ದಾರಿ ಜಿಲ್ಲಾಧಿಕಾರಿಗಳದ್ದಾಗಿದೆ. ಅವರು ಕ್ಯಾಂಪಸ್‌ನಲ್ಲಿ ರಾಜಕೀಯ ಹಸ್ತಕ್ಷೇಪಕ್ಕೆ ಅವಕಾಶ ಕೊಡಬಾರದು ಎಂದು ಯು.ಟಿ. ಖಾದರ್ ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News