ಬೆಂಗಳೂರಿನಲ್ಲಿ ಸಾರ್ವಜನಿಕರ ಗಮನಸೆಳೆಯುತ್ತಿರುವ ‘ಶೂದ್ರಸ್’ ತಟ್ಟೆ ಇಡ್ಲಿ!

Update: 2022-05-27 13:07 GMT

ಬೆಂಗಳೂರು, ಮೇ 27: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಹಲವು ಕಡೆಗಳಲ್ಲಿ ತಲೆ ಎತ್ತಿರುವ ಬ್ರಾಹ್ಮಣ್ ಕೆಫೆ, ಬ್ರಾಹ್ಮಣರ ಉಪಾಹಾರ ಮಂದಿರ, ಅಯ್ಯಂಗಾರ್ ಪುಳಿಯೋಗರೆ ಮಾದರಿಯಲ್ಲಿಯೇ ವ್ಯಕ್ತಿಯೊಬ್ಬರು 'ಶೂದ್ರಸ್ ತಟ್ಟೆ ಇಡ್ಲಿ' ಹೊಟೇಲ್ ಆರಂಭಿಸಿದ್ದು, ಸಾರ್ವಜನಿಕರ ಮೆಚ್ಚುಗೆಗೆ ಪಾತ್ರವಾಗಿದೆ.

ನಗರದ ವಿದ್ಯಾರಣ್ಯಪುರ ಬಸ್ ನಿಲ್ದಾಣ ಸಮೀಪದ ರಾಷ್ಟ್ರಕವಿ ಕುವೆಂಪು ರಸ್ತೆಯ ನರಸೀಪುರ ಲೇಔಟ್‌ನಲ್ಲಿ ಮಂಡ್ಯ ಮೂಲದ ಎನ್.ಟಿ.(ನಲ್ಲಹಳ್ಳಿ ತಮ್ಮಣ್ಣ) ರಾಜೇಂದ್ರ ಎಂಬವರು ‘ಶೂದ್ರಸ್ ತಟ್ಟೆ ಇಡ್ಲಿ’ ಸಸ್ಯಾಹಾರಿ ಹೊಟೇಲ್ ಆರಂಭಿಸಿದ್ದು, ಹೊಟೇಲ್ ಹೆಸರಿನ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಜಾತಿ ಆಧಾರಿತ ಬೇಡ ಎನ್ನುವ ಒಂದು ಸಮುದಾಯವೇ ಈಗ ಅವರದ್ದೇ ಜಾತಿಯನ್ನು ಬ್ರ್ಯಾಂಡ್ ಮಾಡಿಕೊಂಡು ವ್ಯಾಪಾರ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಇಂತಹ ಸಂದರ್ಭದಲ್ಲಿ ಅವರ ವಿರುದ್ಧವಾಗಿ ಚಳವಳಿ ಮಾದರಿಯಲ್ಲಿಯೇ ಶೂದ್ರಸ್ ಹೆಸರು ಹುಟ್ಟುಹಾಕಿ, ವ್ಯಾಪಾರ ಮಾಡುವ ಈ ವ್ಯಾಪಾರಿಯ ಧೈರ್ಯ ಮೆಚ್ಚಲೇಬೇಕೆಂದು ರಾಜೇಂದ್ರ ಅವರ ಕಾಯಕವನ್ನು ಬಣ್ಣಿಸಿ ಹಲವರು ಸಾಮಾಜಿಕ ಜಾಲತಾಣಗಳಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ನಲ್ಲಹಳ್ಳಿ ತಮ್ಮಣ್ಣ ರಾಜೇಂದ್ರ- ಹೊಟೇಲ್ ಮಾಲಕ 

ಸ್ವತಃ ಈ ಕುರಿತು ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿದ ಹೊಟೇಲ್ ಮಾಲಕ ನಲ್ಲಹಳ್ಳಿ ತಮ್ಮಣ್ಣ ರಾಜೇಂದ್ರ, 20 ವರ್ಷಗಳಿಂದ ಹೊಟೇಲ್ ವ್ಯಾಪಾರದಲ್ಲಿ ತೊಡಗಿಸಿಕೊಂಡಿದ್ದೇನೆ. ಇದೇ ಸ್ಥಳದಲ್ಲಿ ಮಹದೇಶ್ವರ ಹೆಸರಿನಲ್ಲಿ ಹೊಟೇಲ್ ನಡೆಸಲಾಗುತಿತ್ತು. ಆದರೆ, ಇತ್ತೀಚಿಗೆ ಹೊಟೇಲ್ ಉದ್ಯಮದಲ್ಲಿ ಮೇಲ್ಜಾತಿಯ ಜನ ಜಾತಿಯನ್ನೇ ಅಸ್ತ್ರವನ್ನಾಗಿಸಿಕೊಂಡು, ದಪ್ಪ ದಪ್ಪ ಅಕ್ಷರಗಳಲ್ಲಿ ಬೋರ್ಡ್ ಬರೆಸಿ ಯಶಸ್ಸು ಗಳಿಸುತ್ತಿರುವಾಗ, ನಾವು ಏಕೆ ನಮ್ಮನ್ನು ಗುರುತಿಸಬಾರದು?. ಇಂತಹ ಸಂದರ್ಭದಲ್ಲಿ ನಮ್ಮನ್ನು ಗುರುತಿಸುವ ಶೂದ್ರ ಬ್ರ್ಯಾಂಡ್‌ನಲ್ಲಿಯೇ ಹೊಟೇಲ್ ಹೆಸರು ಬದಲಾಯಿಸಿದೆ ಎಂದರು.

ಬಿಎ ವ್ಯಾಸಂಗ ಮಾಡಿರುವ ನನಗೆ, ನಮ್ಮ ಜನರ ಸಂಕಷ್ಟ, ನೋವು, ಹೋರಾಟದ ಹಿನ್ನೆಲೆ ಗೊತ್ತಿದೆ. ಹೊಟೇಲ್ ಹೆಸರಿಟ್ಟಾಗ ಕೆಲವರು ಮಾತ್ರ ಏಕೆ ನಾವು ನಮ್ಮನ್ನು ಕೀಳಾಗಿ ಶೂದ್ರ ಎಂದು ಕರೆದುಕೊಳ್ಳಬೇಕು ಎಂದರು. ಆದರೆ, ಬಹುತೇಕರು ಈ ಹೆಸರಿಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಹೀಗಾಗಿಯೇ, ನಾನು ಈ ಹೆಸರನ್ನೇ ಮುಂದುವರಿಸುವೆ ಎಂದು ನುಡಿದರು.

ಹೆಚ್ಚಿದ ಗ್ರಾಹಕರ ಸಂಖ್ಯೆ: ಮೊದಲಿನಿಂದಲೇ ರಾಜೇಂದ್ರ ಹೊಟೇಲ್ ರುಚಿ ಎಂದರೆ ಈ ಭಾಗದ ಜನರಿಗೆ ಅಚ್ಚುಮೆಚ್ಚು. ಇದೀಗ, ಹೊಟೇಲ್ ಹೆಸರು ಶೂದ್ರಸ್ ಎಂದು ಬದಲಾಯಿಸಿದಾಗ ಗ್ರಾಹಕರ ಸಂಖ್ಯೆ ಹೆಚ್ಚಾಗಿದೆ. ಜತೆಗೆ, ದೂರದ ಪ್ರದೇಶಗಳಿಂದಲೂ ಬರುತ್ತಿದ್ದಾರೆ ಎಂದು ರಾಜೇಂದ್ರ ಸಂತಸ ವ್ಯಕ್ತಪಡಿಸಿದರು.

ಹೆಸರು ನೋಡಿ ಬಂದೆ!

ಈ ಹೊಟೇಲ್ ಅನ್ನು ಬಸ್ಸಿನಿಂದ ದಿನನಿತ್ಯ ನೋಡುತ್ತಿದ್ದೆ. ಇದರ ಹೆಸರು ನೋಡಿ ಯಾರೋ ನಮ್ಮವರೇ ಆರಂಭಿಸಿದ್ದಾರೆ ಎನ್ನುವ ಭಾವನೆ. ಹೀಗಾಗಿಯೇ ಇಂದು ತಿಂಡಿಗೆ ಶೂದ್ರಸ್ ಹೊಟೇಲ್‍ಗೆ ಬಂದೆ ಗ್ರಾಹಕ ನವೀನ್ ಗೌಡ ನುಡಿದರು.


ಶೂದ್ರ ಎನ್ನುವುದು ನಮ್ಮ ಒಗ್ಗಟ್ಟು

ಶೂದ್ರ ಎನ್ನುವುದು ನಮ್ಮ ಒಗ್ಗಟ್ಟು ಆಗಿದೆ. ಅಲ್ಲದೆ, ಯಾರು ನಾವೆಲ್ಲರೂ ಒಂದು ಎನ್ನುತ್ತಾರೋ, ಅವರೇ ಜಾತಿ ಆಧಾರಿತ ಹೊಟೇಲ್ ಆರಂಭಿಸಿದ್ದಾರೆ. ಹೀಗಿರುವಾಗ ನಾವೇಕೆ, ಶೂದ್ರ ಎಂದು ಹೆಸರಿಡಬಾರದು. ನಮ್ಮವರು ಇದನ್ನು ಅಪ್ಪಿಕೊಳ್ಳುತ್ತಾರೆ ಎನ್ನುವ ವಿಶ್ವಾಸ ಇದೆ.

-ಎನ್.ಟಿ.ರಾಜೇಂದ್ರ, ಮಾಲಕ

Writer - ಸಮೀರ್ ದಳಸನೂರು

contributor

Editor - ಸಮೀರ್ ದಳಸನೂರು

contributor

Similar News