ಬಾವಿ ಕಾಣೆಯಾಗಿದೆ, ಹುಡುಕಿ ಕೊಡಿ !: ಬಂಟ್ವಾಳ ಠಾಣೆಗೆ ನರಿಕೊಂಬು ಪಿಡಿಒ ದೂರು

Update: 2022-05-28 04:45 GMT

ಬಂಟ್ವಾಳ, ಮೇ 28: ಮನುಷ್ಯ, ಪ್ರಾಣಿ, ಸೊತ್ತು ಕಾಣೆಯಾದ ಬಗ್ಗೆ ಪೊಲೀಸ್ ಠಾಣೆಗಳಲ್ಲಿ ದೂರು ದಾಖಲಾಗುವುದು ಸಹಜ. ಆದರೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ 'ಬಾವಿಯೊಂದು ನಾಪತ್ತೆಯಾಗಿದೆ, ಹುಡುಕಿಕೊಡಿ' ಎಂಬ ದೂರು ದಾಖಲಾಗಿದೆ. ಈ ದೂರು ನೀಡಿದವರು ನರಿಕೊಂಬು ಗ್ರಾಮದ ಪಂಚಾಯತ್ ಅಭಿವೃದ್ಧಿ ಅಧಿಕಾರಿ(ಪಿ.ಡಿ.ಒ.) !

ನರಿಕೊಂಬು ಗ್ರಾಮ ಪಂಚಾಯತ್ ವ್ಯಾಪ್ತಿಯ ನೇಲ್ಯಡ್ಕ ಎಂಬಲ್ಲಿ ಮಹಾತ್ಮ ಗಾಂಧಿ ರಾಷ್ಟ್ರೀಯ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ ನಿರ್ಮಿಸಿದ ಬಾವಿ ಕಾಣೆಯಾಗಿದ್ದು ಇದನ್ನು ಹುಡುಕಿಕೊಡುವಂತೆ ನರಿಕೊಂಬು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶಿವಗೊಂಡಪ್ಪ ಬಿರಾದರ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ನರಿಕೊಂಬು ಗ್ರಾಮದ ನೇಲ್ಯಡ್ಕ ನಿವಾಸಿ ದಯಾನಂದ ಪೂಜಾರಿ ಎಂಬವರು ಆ ಬಾವಿಯನ್ನು ಮಣ್ಣು ಹಾಕಿ ಮುಚ್ಚಿ ಅತಿಕ್ರಮಣ ಮಾಡಿದ್ದಾರೆ ಎಂದು ಪಿಡಿಒ ದೂರಿನಲ್ಲಿ ಆರೋಪಿಸಿದ್ದಾರೆ.

ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿಯಲ್ಲಿ 2012-13ನೇ ಸಾಲಿನಲ್ಲಿ ಸಾರ್ವಜನಿಕವಾಗಿ ತೆರೆದ ಬಾವಿಯನ್ನು 73,305 ರೂ. ಅನುದಾನದಲ್ಲಿ ಮಾಡಲಾಗಿತ್ತು. ಪ್ರಸಕ್ತ ತೆರೆದ ಸಾರ್ವಜನಿಕ ಬಾವಿಯನ್ನು ಸ್ಥಳೀಯ ದಯಾನಂದ ಪೂಜಾರಿ ಕಾನೂನುಬಾಹಿರವಾಗಿ ಸಂಪೂರ್ಣವಾಗಿ ಮುಚ್ಚಿ ಬಾವಿಯ ಸ್ಥಳವನ್ನು ಆಕ್ರಮಿಸಿಕೊಂಡಿದ್ದಾರೆ. ಈ ರೀತಿ ಸರಕಾರಕ್ಕೆ ಆರ್ಥಿಕ ನಷ್ಟವುಂಟು ಮಾಡಿದ ದಯಾನಂದ ಪೂಜಾರಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕೆಂದು ಪಿಡಿಒ ದೂರಿನಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News