ಮಂಕಿಪಾಕ್ಸ್ ಪ್ರಕರಣ ಉಲ್ಬಣ; 20ಕ್ಕೂ ಅಧಿಕ ದೇಶಗಳಲ್ಲಿ 200ರಷ್ಟು ಪ್ರಕರಣ: ವಿಶ್ವ ಆರೋಗ್ಯಸಂಸ್ಥೆ

Update: 2022-05-28 17:02 GMT

ಜಿನೆವಾ, ಮೇ 28: ವಿಶ್ವದಾದ್ಯಂತ 20ಕ್ಕೂ ಅಧಿಕ ದೇಶಗಳಲ್ಲಿ ಮಂಕಿಪಾಕ್ಸ್ನ 200ರಷ್ಟು ಪ್ರಕರಣ ವರದಿಯಾಗಿದ್ದು ಈ ಅಸಹಜ ಸಾಂಕ್ರಾಮಿಕ ಕಾಯಿಲೆಯು ಉಲ್ಬಣಿಸುತ್ತಿದ್ದರೂ ಹತೋಟಿ ಸಾಧ್ಯ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದೆ.      

ಆಫ್ರಿಕಾ ಖಂಡಕ್ಕೆ ಸೀಮಿತವಾಗಿದ್ದ ಈ ಸಾಂಕ್ರಾಮಿಕ ವಿಶ್ವದೆಲ್ಲೆಡೆ ಅಸಾಮಾನ್ಯ ರೀತಿಯಲ್ಲಿ ಪ್ರಸಾರವಾಗಿರುವ ಬಗ್ಗೆ ಹಲವು ಉತ್ತರವಿಲ್ಲದ ಪ್ರಶ್ನೆಗಳಿವೆ. ಆದರೆ ವೈರಸ್ನಲ್ಲಿ ಯಾವುದೇ ಅನುವಂಶಿಕ ಬದಲಾವಣೆ ಕಾರಣ ಎಂಬುದಕ್ಕೆ ಯಾವುದೇ ಪುರಾವೆಗಳಿಲ್ಲ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದು, ಪ್ರಪಂಚದಾದ್ಯಂತ ಲಭ್ಯವಿರುವ ಸೀಮಿತ ಲಸಿಕೆ ಮತ್ತು ಔಷಧಿಗಳನ್ನು ಸಮಾನವಾಗಿ ಹಂಚಿಕೊಳ್ಳುವ ವ್ಯವಸ್ಥೆ ರೂಪಿಸುವ ಬಗ್ಗೆ ಪ್ರಸ್ತಾವಿಸಿದೆ. ಸೋಂಕಿನ ಮೊದಲ ಅನುಕ್ರಮತೆ(ಸೀಕ್ವೆನ್ಸಿಂಗ್)ಯು ಈ ತಳಿಯು ಸ್ಥಳೀಯ ದೇಶಗಳಲ್ಲಿ ಕಂಡು ಬಂದ ತಳಿಗಿಂತ ಭಿನ್ನವಾಗಿಲ್ಲ ಎಂಬುದನ್ನು ತೋರಿಸಿದೆ.

ಆದ್ದರಿಂದ ಈ ಹೆಚ್ಚಳಕ್ಕೆ ಮಾನವನ ವರ್ತನೆಯಲ್ಲಿನ ಬದಲಾವಣೆ ಕಾರಣವಾಗಿರಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆಯ ಸಾಂಕ್ರಾಮಿಕ ಕಾಯಿಲೆಗೆ ಸಂಬಂಧಿಸಿದ ವಿಭಾಗದ ನಿರ್ದೇಶಕಿ ಡಾ. ಸಿಲ್ವಿ ಬ್ರಿಯಾಂಡ್ ಶುಕ್ರವಾರ ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ. ಆಫ್ರಿಕಾದಲ್ಲಿ ಈ ಹಿಂದೆ ರೋಗ ಹೇಗೆ ಏಕಾಏಕಿ ವಿಕಸನಗೊಂಡಿದೆ ಎಂಬುದರ ಆಧಾರದಲ್ಲಿ ಗಮನಿಸಿದರೆ ಈಗಿನ ಪರಿಸ್ಥಿತಿ ಹತೋಟಿಯಲ್ಲಿದೆ ಎನ್ನಬಹುದು. ಆದರೂ ಮುಂದಿನ ದಿನದಲ್ಲಿ ಇನ್ನಷ್ಟು ಪ್ರಕರಣ ಪತ್ತೆಯಾಗುವ ನಿರೀಕ್ಷೆಯಿದ್ದು ಇದು ಗರಿಷ್ಟ ಮಟ್ಟವೇ ಅಥವಾ ಸಮುದಾಯದಲ್ಲಿ ಪತ್ತೆಯಾಗದ ಇನ್ನಷ್ಟು ಪ್ರಕರಣಗಳಿವೆಯೇ ಎಂಬುದು ಸ್ಪಷ್ಟವಾಗಿಲ್ಲ. ಸಿಡುಬು ರೋಗದ ಲಸಿಕೆ ಮಂಕಿಪಾಕ್ಸ್ಗೂ ಪರಿಣಾಮಕಾರಿಯಾಗುತ್ತದೆಯೇ ಎಂಬ ಬಗ್ಗೆ ಬ್ರಿಟನ್, ಜರ್ಮನಿ, ಕೆನಡಾ ಮತ್ತು ಅಮೆರಿಕದ ವಿಜ್ಞಾನಿಗಳು ಸಂಶೋಧನೆ ನಡೆಸುತ್ತಿದ್ದಾರೆ.

ಈ ಸಂಶೋಧನೆಯನ್ನು ವಿಶ್ವ ಆರೋಗ್ಯ ಸಂಸ್ಥೆಯ ತಜ್ಞರು ಗಮನಿಸುತ್ತಿದ್ದು ಶೀಘ್ರವೇ ಮಾರ್ಗದರ್ಶನ ಒದಗಿಸಲಿದ್ದಾರೆ ಎಂದು ಬ್ರಿಯಾಂಡ್ ಮಾಹಿತಿ ನೀಡಿದ್ದಾರೆ. ಇತ್ತೀಚೆಗೆ ಸ್ಪೇನ್ ಮತ್ತು ಬೆಲ್ಜಿಯಂನಲ್ಲಿ ನಡೆದಿದ್ದ 2 ರೇವ್ ಪಾರ್ಟಿಗಳಲ್ಲಿನ ಲೈಂಗಿಕ ಚಟುವಟಿಕೆ ಮಂಕಿಪಾಕ್ಸ್ ಸಾಂಕ್ರಾಮಿಕವು ಯುರೋಪ್, ಅಮೆರಿಕ, ಇಸ್ರೇಲ್, ಆಸೆ್ಟ್ರೀಲಿಯಾ ಮತ್ತಿತರ ದೇಶಗಳಲ್ಲಿ ದಿಢೀರ್ ಉಲ್ಬಣಕ್ಕೆ ಕಾರಣವಾಗಿರಬಹುದು ಎಂದು ಸೋಮವಾರ ವಿಶ್ವ ಆರೋಗ್ಯಸಂಸ್ಥೆಯ ಹಿರಿಯ ಸಲಹೆಗಾರರೊಬ್ಬರು ಹೇಳಿದ್ದರು. ಮಧ್ಯ ಮತ್ತು ಪಶ್ಚಿಮ ಆಫ್ರಿಕಾದ ಕಾಡುಗಳಲ್ಲಿರುವ ದಂಶಕಗಳು  (ಬಲಿಷ್ಟವಾದ ಹಲ್ಲನ್ನು ಹೊಂದಿರುವ ಹಂದಿ, ಮುಂಗುಸಿಯಂತಹ ಪ್ರಾಣಿಗಳು) ಹಾಗೂ ಸಸ್ತನಿಗಳಿಂದ ಮಾನವನಿಗೆ ಪ್ರಸಾರವಾಗುವ ಈ ಸೋಂಕು ಇದುವರೆಗೆ ಆಫ್ರಿಕಾದ ಗಡಿದಾಟಿ ಮುಂದುವರಿದಿರಲಿಲ್ಲ. ಸುಮಾರು 200ರಷ್ಟು ಪ್ರಕರಣ ವರದಿಯಾಗಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಹೇಳಿದ್ದರೂ, ಪತ್ತೆಯಾಗಿರುವ ಪ್ರಕರಣಗಳ ಸಂಖ್ಯೆ 500ರಷ್ಟಿರಬಹುದು ಎಂದು ಆರೋಗ್ಯತಜ್ಞರು ಎಚ್ಚರಿಸಿದ್ದಾರೆ. 

ಶುಕ್ರವಾರದವರೆಗೆ ಬ್ರಿಟನ್ನಲ್ಲಿ 106, ಸ್ಪೇನ್ನಲ್ಲಿ 98, ಪೋರ್ಚುಗಲ್ನಲ್ಲಿ 74 ಪ್ರಕರಣ ವರದಿಯಾಗಿದೆ. ಏಡ್ಸ್ ರೋಗದಂತೆ ಲೈಂಗಿಕ ಚಟುವಟಿಕೆಯಿಂದ ಪ್ರಸಾರವಾಗುವ ಸಾಂಕ್ರಾಮಿಕ ಇದಾಗಿರುವುದರಿಂದ ಜನಸಾಮಾನ್ಯರ ಮೇಲೆ ಪರಿಣಾಮ ಬೀರುವ ಸಾಧ್ಯತೆ ಕಡಿಮೆ. ಆದರೆ ಇದರ ಪ್ರಸರಣವನ್ನು ನಿರ್ಬಂಧಿಸದಿದ್ದರೆ ಇತರರ ಮೇಲೆಯೂ ಪರಿಣಾಮ ಬೀರಬಹುದು ಎಂದು ವಿಜ್ಞಾನಿಗಳು ಎಚ್ಚರಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News