ಆಳ ಸಮುದ್ರ ಗಣಿಗಾರಿಕೆಗೆ ಕಟ್ಟುನಿಟ್ಟಿನ ಪರಿಸರ ನಿಯಮ: ಜಿ7 ದೇಶಗಳ ಸಹಮತ

Update: 2022-05-28 18:19 GMT

ಬರ್ಲಿನ್, ಮೇ 28: ಆಳ ಸಮುದ್ರ ಗಣಿಗಾರಿಕೆಗೆ ಕಟ್ಟುನಿಟ್ಟಿನ ಪರಿಸರ ನಿಯಮ ರೂಪಿಸಲು ಮತ್ತು ಸಮುದ್ರ ಪರಿಸರಕ್ಕೆ ಗಂಭೀರ ಹಾನಿಯಾಗದಿದ್ದರೆ ಮಾತ್ರ ಇಂತಹ ಗಣಿಗಾರಿಕೆಗೆ ಅನುಮತಿ ನೀಡುವ ಬಗ್ಗೆ ಜಿ7 ದೇಶಗಳು ಶುಕ್ರವಾರ ಸಹಮತ ವ್ಯಕ್ತಪಡಿಸಿವೆ.

ಆಳ ಸಮುದ್ರ ಗಣಿಗಾರಿಕೆಯು ಅತ್ಯಂತ ಕಟ್ಟುನಿಟ್ಟಿನ ಪರಿಸರ ಮಾನದಂಡದ ಅಡಿಯಲ್ಲಿ ಮಾತ್ರ ನಡೆಯಬೇಕೆಂದು ನಾವು ನಿರ್ಧರಿಸಿದ್ದೇವೆ ಎಂದು ಬರ್ಲಿನ್ನಲ್ಲಿ ನಡೆದ ಜಿ7 ದೇಶಗಳ ಸಚಿವರ ಸಮಾವೇಶದ ಬಳಿಕ ಜರ್ಮನಿಯ ಪರಿಸರ ಸಚಿವೆ ಸ್ಟೆಫಿ ಲೆಮ್ಕೆ ಸುದ್ಧಿಗೋಷ್ಟಿಯಲ್ಲಿ ಹೇಳಿದರು.

ಯಾವುದೇ ರಾಷ್ಟ್ರೀಯ ಸಮುದ್ರವ್ಯಾಪ್ತಿಯ ಹೊರಗಿನ ಪ್ರದೇಶಗಳಲ್ಲಿ ಆಳ ಸಮುದ್ರ ತಳದ ಗಣಿಗಾರಿಕೆಯನ್ನು ನಿಯಂತ್ರಿಸುವ ನಿಯಮಗಳನ್ನು ವಿಶ್ವಸಂಸ್ಥೆಯ ಸಹಸಂಸ್ಥೆ ‘ಇಂಟರ್ನ್ಯಾಷನಲ್ ಸೀಬರ್ಡ್ ಅಥಾರಿಟಿ (ಐಎಸ್ಎ) ರೂಪಿಸುತ್ತಿದೆ. ಜಾಗತಿಕ ಕಾನೂನು ಅಸ್ತಿತ್ವಕ್ಕೆ ಬರುವವರೆಗೆ ಸಮುದ್ರ ತಳದ ಗಣಿಗಾರಿಕೆಗೆ ಅವಕಾಶವಿಲ್ಲ. ಭವಿಷ್ಯದಲ್ಲಿ ಸಂಭವನೀಯ ಆಳಸಮುದ್ರ ಗಣಿಗಾರಿಕೆಗೆ ಸಂಬಂಧಿಸಿದಂತೆ, ಸಮುದ್ರ ಪರಿಸರಕ್ಕೆ ಹಾನಿಯನ್ನು ತಡೆಗಟ್ಟುವ ಸಲುವಾಗಿ ಮಾನವ ಚಟುವಟಿಕೆಯನ್ನು ನಿಯಂತ್ರಿಸುವ ಅನನ್ಯ ಅವಕಾಶವನ್ನು ನಾವು ಸ್ಪಷ್ಟಪಡಿಸಿದ್ದೇವೆ ಎಂದು ಸಮಾವೇಶದ ಅಂತ್ಯದಲ್ಲಿ ಹೊರಡಿಸಿದ ಹೇಳಿಕೆಯಲ್ಲಿ ಉಲ್ಲೇಖಿಸಲಾಗಿದೆ. ಆಳ ಸಮುದ್ರ ಪರಿಸರಕ್ಕೆ ಯಾವುದೇ ಗಂಭೀರ ಹಾನಿಯಾಗುವುದಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರೆ ಮಾತ್ರ ಭವಿಷ್ಯದಲ್ಲಿ ಆಳ ಸಮುದ್ರ ಗಣಿಗಾರಿಕೆಗೆ ಐಎಸ್ಎ ಸಮಿತಿ ಅನುಮತಿ ಒದಗಿಸಲಿದೆ ಎಂದು ಹೇಳಿಕೆ ತಿಳಿಸಿದೆ. 

ಆಳ ಸಮುದ್ರ ಗಣಿಗಾರಿಕೆಯಲ್ಲಿ ಪೆಸಿಫಿಕ್ ಸಾಗರದ ಸುಮಾರು 6 ಕಿ.ಮೀ ಆಳದ ತಳದಲ್ಲಿರುವ ಬಟಾಟೆ ಗಾತ್ರದ ಕಲ್ಲುಗಳಲ್ಲಿರುವ ಕೋಬಾಲ್ಟ್, ನಿಕೆಲ್ ಹಾಗೂ ಇತರ ಬ್ಯಾಟರಿ ಲೋಹಗಳನ್ನು ಹೀರಿ ತೆಗೆಯಲಾಗುತ್ತದೆ. ಆಳ ಸಮುದ್ರ ಗಣಿಗಾರಿಕೆಯಿಂದ ಸಮುದ್ರದ ತಳದಲ್ಲಿ ನೆಲೆ ಕಂಡುಕೊಂಡಿರುವ ಕೆಲವು ಜೀವಿಗಳಿಗೆ ತೊಂದರೆಯಾಗುವುದರಿಂದ ಅದನ್ನು ನಿಷೇಧಿಸಬೇಕು ಎಂದು ಹಲವು ವಿಜ್ಞಾನಿಗಳು ಹಾಗೂ ಪರಿಸರವಾದಿಗಳು ಆಗ್ರಹಿಸಿದ್ದಾರೆ. ನಿಷೇಧ ಅವಧಿ ರೂಪಿಸುವ ವಿಶ್ವ ವನ್ಯಜೀವಿ ನಿಧಿಯ ಕರೆಗೆ ಕಾರು ಉತ್ಪಾದಕ ಸಂಸ್ಥೆ ಬಿಎಂಡಬ್ಲ್ಯೂ, ಗೂಗಲ್ ಮುಂತಾದ ಪ್ರಮುಖ ಸಂಸ್ಥೆಗಳು ಧ್ವನಿಗೂಡಿಸಿವೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News