×
Ad

ಮಳಲಿ ವಿವಾದ; ಮಸೀದಿಯ ಪ್ರಮುಖರ ಜೊತೆ ಸಭೆ ನಡೆಸಲಾಗಿದೆ: ಶಾಸಕ ಡಾ.‌ಭರತ್ ಶೆಟ್ಟಿ

Update: 2022-05-29 21:54 IST

ಮಂಗಳೂರು, ಮೇ 29: ಮಳಲಿಯ ವಿವಾದದ ಜಾಗದಲ್ಲಿ ಸರ್ವೇ ನಡೆದರೆ ನೈಜ ವಿಷಯ ಬಹಿರಂಗವಾಗುತ್ತದೆ ಎಂದು ಹಿಂದೂ ಬಾಂಧವರು ಬಯಸುತ್ತಿದ್ದಾರೆ. ಈ ಸಂಬಂಧ ಮಸೀದಿಯ ಪ್ರಮುಖರ ಜೊತೆ ಸಭೆ ನಡೆಸಲಾಗಿದೆ ಎಂದು ಮಂಗಳೂರು ಉತ್ತರ ವಿಧಾನ ಸಭಾ ಶಾಸಕ ಡಾ.‌ ಭರತ್ ಶೆಟ್ಟಿ ತಿಳಿಸಿದ್ದಾರೆ.

ಅವರು ಮಳಲಿಯ ಸ್ಥಳೀಯ ಜನಪ್ರತಿನಿಧಿಗಳು, ವಿಹಿಂಪ ಹಾಗೂ ಮಸೀದಿಯ ಪ್ರಮುಖರೊಂದಿಗೆ ನಗರದ ಸಕ್ಯೂಟ್ ಹೌಸ್ ನಲ್ಲಿ ಸಭೆ ನಡೆಸಿದ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದರು.

ಮಳಲಿ ಪರಿಸರದಲ್ಲಿ 3-4 ದೇವಸ್ಥಾನಗಳು ಈ ಹಿಂದೆ ಕಾಲಾಂತರದಲ್ಲಿ ಕಣ್ಮರೆಯಾಗಿರುವ ಬಗ್ಗೆ ಇತಿಹಾಸದಲ್ಲಿ ಉಲ್ಲೇಖವಿದೆ. ಯಾವುದೇ ದೇವಾಲಯ ಬಹಳ ಕಾಲದಿಂದ ಜೀರ್ಣಾವಸ್ಥೆಯಲ್ಲಿ ಇದ್ದು, ಜೀರ್ಣೋದ್ಧಾರಗೊಳ್ಳದೆ ಇದ್ದರೆ ಊರಿಗೆ ಕೆಡುಕು ಎನ್ನುವುದು ಹಿಂದೂಗಳಲ್ಲಿ ನಂಬಿಕೆ ಇದೆ. ಅದಕ್ಕೆ ಆ ಮಸೀದಿಯ ಪ್ರಮುಖರ ಸಹಕಾರದೊಂದಿಗೆ ಮುಂದಿನ ಕ್ರಮ ತೆಗೆದುಕೊಳ್ಳುವ ಬಗ್ಗೆ ಸಭೆ ನಡೆಸಿದ್ದೇನೆ ಎಂದರು.

ಸದ್ಯ ಮಳಲಿಯ ವಿವಾದದ ಪ್ರದೇಶವನ್ನು ನಿರ್ಬಂಧಿತ ವಲಯ ಎಂದು ನ್ಯಾಯಾಲಯ ಗುರುತಿಸಿದೆ. ಅಲ್ಲಿ ಯಾರಿಗೂ ಪ್ರವೇಶವಿಲ್ಲ. ಅಷ್ಟಮಂಗಲ ಪ್ರಶ್ನೆ ಇಡುವುದು ಸ್ಥಳೀಯರ ನಂಬಿಕೆಯ ವಿಷಯ. ಅವರು ಎಲ್ಲಿ, ಯಾವಾಗ ಇಡುತ್ತಾರೆ ಎನ್ನುವುದು ಅವರ ಖಾಸಗಿ ನಿರ್ಧಾರ. ಒಟ್ಟಿನಲ್ಲಿ ಸೌಹಾರ್ದವಾಗಿ ಈ ವಿಷಯ ಅಂತ್ಯವಾಗಲಿ ಎನ್ನುವ ಕಾರಣಕ್ಕೆ ಸರ್ವ ಪ್ರಯತ್ನ ಮಾಡಲಾಗುತ್ತಿದೆ ಎಂದು ಶಾಸಕರು ಹೇಳಿದರು.

ಶಾಸಕರ ಸಭೆಯ ಕುರಿತು ಮಾತನಾಡಿರುವ ಡಿವೈಎಫ್ ಐ ಮುಖಂಡ‌‌ ಮುನೀರ್ ಕಾಟಿಪಳ್ಳ, "ಮಳಲಿ ಮಸೀದಿಯನ್ನು ಕೋಮುವಾದಿ ಅಜೆಂಡಾದೊಂದಿಗೆ ಬಿಜೆಪಿ ಸಹೋದರ ಸಂಘಟನೆ ವಿಎಚ್ ಪಿ ವಿವಾದವಾಗಿಸಿದ ನಂತರ ಶಾಸಕ ಭರತ್ ಶೆಟ್ಟಿ ಸಂತ್ರಸ್ತರಾದ ಸ್ಥಳೀಯ ಮುಸ್ಲಿಮರೊಂದಿಗೆ ಮಾತೇ ಆಡಿರಲಿಲ್ಲ. ಬದಲಿಗೆ ಹೊರಗಡೆಯಿಂದ ಮಳಲಿ ಪ್ರವೇಶಿಸಿ ಸ್ಥಳೀಯ ಗ್ರಾಮಸ್ಥರನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟಲು ಯತ್ನಿಸುತ್ತಿದ್ದರು. ಮಸೀದಿ ಬಿಟ್ಟು ಕೊಡಲು ಒತ್ತಡ ಹೇರುತ್ತಿದ್ದ ಶರಣ್ ಪಂಪ್ ವೆಲ್ ನೇತೃತ್ವದ ವಿಎಚ್ ಪಿ ಮುಖಂಡರು ಸಭೆಯಲ್ಲಿ ಕಾಣಿಸಿಕೊಳ್ಳುತ್ತಿದ್ದರು. ಈಗ ದಿಢೀರ್ ಆಗಿ ಮಳಲಿ ಮಸೀದಿ ಆಡಳಿತ ಮಂಡಳಿಯವರನ್ನು ಮಂಗಳೂರಿಗೆ ಕರೆಸಿ ಮಳಲಿ ಗ್ರಾಮಕ್ಕೆ ಸಂಬಂಧಪಡದ, ಕೋಮುವಾದಿ ಮುಖಂಡ ಶರಣ್ ಪಂಪ್ ವೆಲ್ ಸಮ್ಮುಖ ಮಾತಾಡಿಸಿದ್ದಾರೆ" ಎಂದು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News