ರೋಹಿತ್ ಚಕ್ರತೀರ್ಥ ಬಂಧಿಸಿ ಕ್ರಮ ಕೈಗೊಳ್ಳಲು ವಕೀಲರು, ಚಿಂತಕರ ಆಗ್ರಹ

Update: 2022-05-30 15:25 GMT

ಬೆಂಗಳೂರು, ಮೇ 30: ನಾಡಗೀತೆ ಮತ್ತು ರಾಷ್ಟ್ರಕವಿ ಕುವೆಂಪು ಅವರನ್ನು ಅವಮಾನಿಸಿದ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯನ್ನು ರದ್ದುಪಡಿಸಿ, ಸಾಹಿತಿ ಬರಗೂರು ರಾಮಚಂದ್ರಪ್ಪ ಸಮಿತಿ ಪಠ್ಯವನ್ನು ಅಳವಡಿಸಬೇಕೆಂದು ಒತ್ತಾಯಿಸಿ ವಕೀಲರು, ಪ್ರಗತಿಪರ ಚಿಂತಕರು, ಸಾಹಿತಿಗಳು, ದಲಿತ ಮುಖಂಡರು, ಸಿಟಿ ಸಿವಿಲ್ ಅಂಡ್ ಸೆಷನ್ಸ್ ಕೋರ್ಟ್ ಮುಂಭಾಗ ಶುಕ್ರವಾರ ಪ್ರತಿಭಟನೆ ನಡೆಸಿದರು. 

ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಹಿರಿಯ ವಕೀಲ ಸಿ.ಎಚ್.ಹನುಮಂತರಾಯ ಅವರು, ನಾಡಗೀತೆಯನ್ನು ವಿಕೃತಗೊಳಿಸಿ ರಾಷ್ಟ್ರಕವಿ ಕುವೆಂಪು ಅವರಿಗೆ ಅಪಮಾನ ಮಾಡಿರುವ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷ ರೋಹಿತ್ ಚಕ್ರತೀರ್ಥ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಹಾಗೂ ಈ ಹಿಂದಿನ ಬರಗೂರು ರಾಮಚಂದ್ರಪ್ಪ ಅವರ ನೇತೃತ್ವದ ಸಮಿತಿಯ ಪಠ್ಯವನ್ನೇ ಮುಂದುವರೆಸಬೇಕೆಂದು  ಒತ್ತಾಯಿಸಿದರು.

ಕರ್ನಾಟಕದ ಮೇಲೆ ಸಾಂಸ್ಕೃತಿಕ ದಬ್ಬಾಳಿಕೆ ಆಗುತ್ತಿದ್ದರೂ ಸರಕಾರ ಮೌನ ವಹಿಸಿದೆ. ಅಲ್ಲದೆ, ಕರ್ನಾಟಕಕ್ಕೆ ರೋಹಿತ್ ಚಕ್ರತೀರ್ಥ ಅವರ ಕೊಡುಗೆ ಏನು? ಸಾರಾ ಅಬೂಬಕರ್, ಪಿ.ಲಂಕೇಶ್, ಲಲಿತಾನಾಯಕ್ ಸೇರಿ ಅನೇಕರ ಪಠ್ಯ ತೆಗೆಯುವ ಮೂಲಕ ಜಾತಿ ರಾಜಕೀಯ ಮಾಡಲಾಗುತ್ತಿದೆ. ಈ ವಿಷಯವನ್ನು ನಾವು ಇಲ್ಲಿಗೆ ಬಿಡುವುದಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ರೋಹಿತ್ ಚಕ್ರತೀರ್ಥ ನೇತೃತ್ವದ ಪಠ್ಯಪುಸ್ತಕ ಪರಿಷ್ಕರಣ ಸಮಿತಿಯನ್ನು ಈ ಕೂಡಲೇ ರದ್ದು ಮಾಡಬೇಕು. ಹಾಗೂ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಬೇಕು. ನಾವು ಈ ವಿರುದ್ಧ ಕಾನೂನಾತ್ಮಕ ಹೋರಾಟಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು. 

ರೋಹಿತ್ ಚಕ್ರತೀರ್ಥ ಅವರ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ 7 ಜನರ ಪೈಕಿ 6 ಜನರು ಒಂದೇ ಕೋಮಿನವರಿದ್ದಾರೆ. ಇಂಥ ಸಮಿತಿಯಿಂದ ಯಾವುದೇ ಸಾಮಾಜಿಕ ನ್ಯಾಯ ಸೀಗಲು ಸಾಧ್ಯವಿಲ್ಲ. ಆದರೆ, ಬರಗೂರು ಅವರ ಸಮಿತಿಯಲ್ಲಿ ಎಲ್ಲ ಕೋವಿನ ವಿದ್ವಾಂಸರಿದ್ದರೂ, ಅವರು ಉತ್ತಮ ಪಠ್ಯವನ್ನು ಆಯ್ಕೆ ಮಾಡಿದ್ದರೂ ಮೌಢ್ಯದ ವಿರುದ್ಧವಾಗಿದ್ದವು. ಹೀಗಾಗಿ, ಬರಗೂರು ಅವರ ಸಮಿತಿಯ ಪಠ್ಯವನ್ನೇ ಮುಂದುವರೆಸಬೇಕೆಂದು ಹೇಳಿದರು.  

ನಮ್ಮ ದೇಶದ ತ್ರಿವರ್ಣ ಧ್ವಜವನ್ನೇ ವಿರೋಧಿಸಿ, ಭಗವಾಧ್ವಜ ಹಾರಿಸಬೇಕೆಂಬ ಮನಸ್ಥಿತಿಯನ್ನು ಹೊಂದಿದ್ದ ಹೆಡ್ಗೆವಾರ್ ಅವರ ಭಾಷಣವನ್ನು ಪಠ್ಯದಲ್ಲಿ ಅಳವಡಿಸಲು ಮುಂದಾಗಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಅವರು, ಈ ಕೂಡಲೇ ಪಠ್ಯದಿಂದ ಮೌಢ್ಯದ ಬೀಜವನ್ನು ಹಾಕುವ ಜನರನ್ನು ಕೈಬಿಡಬೇಕು. ಮೌಢ್ಯವನ್ನು ವಿರೋಧಿಸುವಂತಹ ಸಾಹಿತಿಗಳ ಬರಹವನ್ನು ಪಠ್ಯದಲ್ಲಿ ಅಳವಡಿಸಬೇಕೆಂದು ಹೇಳಿದರು. 

ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಸಿ.ಎಸ್.ದ್ವಾರಕಾನಾಥ್ ಮಾತನಾಡಿ, ಪಸ್ತುತ ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಯ ಅಧ್ಯಕ್ಷರಾಗಿರುವವರ ಹೆಸರನ್ನು ಹೇಳಲೂ ಬೇಸರವಾಗುತ್ತದೆ. ಡಾ.ಬಿ.ಆರ್.ಅಂಬೇಡ್ಕರ್, ಬಸವಣ್ಣ ಅವರ ಮೇಲೆ ಏನು ದ್ವೇಷ ಇತ್ತೋ ಅದೇ ದ್ವೇಷ ಇಂದು ಕುವೆಂಪು ಅವರ ಮೇಲು ಕೂಡ ಕೋಮುವಾದಿಗಳಿಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು. ರೋಹಿತ್ ಅವರಂತಹ ವ್ಯಕ್ತಿಗಳಿಗೆ ಸಮಾನತೆ, ಸಹೋದರತ್ವ ಯಾವುದೂ ಬೇಕಾಗಿಲ್ಲ. ಅವರಿಗೆ, ಬರೀ ಕೋಮುವಾದ, ಪೌರೋಹಿತ್ಯ ಅಷ್ಟೇ ಬೇಕಾಗಿದೆ ಎಂದರು. 

ಪ್ರತಿಭಟನೆಯಲ್ಲಿ ಹಿರಿಯ ಸಾಹಿತಿ ಎಸ್.ಜಿ.ಸಿದ್ದರಾಮಯ್ಯ, ದಲಿತ ಮುಖಂಡ ಮಾವಳ್ಳಿ ಶಂಕರ್, ಬೆಂಗಳೂರು ವಕೀಲರ ಸಂಘದ ಮಾಜಿ ಅಧ್ಯಕ್ಷ ಎ.ಪಿ.ರಂಗನಾಥ್, ವಕೀಲ ಸೂರ್ಯ ಮುಕುಂದ್‍ರಾಜ್, ಜನವಾದಿ ಮಹಿಳಾ ಸಂಘಟನೆಯ ಮುಖಂಡೆ ಕೆ.ಎಸ್.ವಿಮಲಾ, ಕೋಟೇಶ್ವರ್ ರಾವ್, ಪ್ರೊ.ಹರಿರಾಮ್ ಪಾಲ್ಗೊಂಡಿದ್ದರು. 

ಚಕ್ರತೀರ್ಥ ಸಮಿತಿಯಿಂದ ಸಾಮಾಜಿಕ ನ್ಯಾಯ ಮರೀಚಿಕೆ 

ರೋಹಿತ್ ಚಕ್ರತೀರ್ಥ ಅವರ ಪಠ್ಯಪುಸ್ತಕ ಪರಿಷ್ಕರಣೆ ಸಮಿತಿಯಲ್ಲಿ 7 ಜನರ ಪೈಕಿ 6 ಜನರು ಒಂದೇ ಕೋಮಿನವರಿದ್ದಾರೆ. ಇಂಥ ಸಮಿತಿಯಿಂದ ಯಾವುದೇ ಸಾಮಾಜಿಕ ನ್ಯಾಯ ಸಿಗಲು ಸಾಧ್ಯವಿಲ್ಲ. ಆದರೆ, ಬರಗೂರು ಅವರ ಸಮಿತಿಯಲ್ಲಿ ಎಲ್ಲ ಕೋವಿನ ವಿದ್ವಾಂಸರಿದ್ದರೂ, ಅವರು ಉತ್ತಮ ಪಠ್ಯವನ್ನು ಆಯ್ಕೆ ಮಾಡಿದ್ದರೂ ಮೌಢ್ಯದ ವಿರುದ್ಧವಾಗಿದ್ದವು. ಹೀಗಾಗಿ, ಬರಗೂರು ಅವರ ಸಮಿತಿಯ ಪಠ್ಯವನ್ನೇ ಮುಂದುವರೆಸಬೇಕೆಂದು ವಕೀಲ ಸಿ.ಎಚ್.ಹನುಮಂತರಾಯ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News