ಬೆಂಗಳೂರು: ಪಿಜಿಯಲ್ಲಿ ಯುವತಿ ಆತ್ಮಹತ್ಯೆ
Update: 2022-05-31 00:13 IST
ಬೆಂಗಳೂರು, ಮೇ 30: ಸ್ಪರ್ಧಾತ್ಮಕ ಪರೀಕ್ಷೆಗೆ ತರಬೇತಿ ಪಡೆಯುತ್ತಿದ್ದ ಯುವತಿಯೊಬ್ಬಳು ಅತಿಥಿಗೃಹದ ಕಟ್ಟಡದಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದುಬಂದಿದೆ.
ತುಮಕೂರು ಜಿಲ್ಲೆ ಪಾವಗಡ ತಾಲೂಕಿನ ಪವಿತ್ರಾ(23) ಆತ್ಮಹತ್ಯೆಗೆ ಶರಣಾದ ಯುವತಿ ಎಂದು ಪೊಲೀಸರು ಹೇಳಿದ್ದಾರೆ.
ನಗರದ ಸಂಸ್ಥೆಯೊಂದರಲ್ಲಿ ತರಬೇತಿ ಪಡೆಯಲು ಕೆಲ ತಿಂಗಳ ಹಿಂದೆ ಈಕೆ ಬೆಂಗಳೂರಿಗೆ ಬಂದಿದ್ದು, ಗೋವಿಂದರಾಜ ನಗರದಲ್ಲಿರುವ ಅತಿಥಿ ಗೃಹ(ಪಿಜಿ)ದಲ್ಲಿ ವಾಸವಿದ್ದಳು. ರವಿವಾರ ಮಧ್ಯಾಹ್ನ ಕೊಠಡಿಯಲ್ಲಿ ಯಾರೂ ಇಲ್ಲದ ವೇಳೆ ನೇಣು ಬಿಗಿದುಕೊಂಡಿದ್ದಾಳೆ.
ಸಂಜೆ ಸ್ನೇಹಿತೆಯರು ಬಂದಾಗ ಘಟನೆ ಬೆಳಕಿಗೆ ಬಂದಿದೆ. ಯುವತಿಯ ಸ್ನೇಹಿತೆಯರ ಹೇಳಿಕೆ ದಾಖಲಿಸಿಕೊಂಡು ಗೋವಿಂದರಾಜ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.