×
Ad

ಮಕ್ಕಳ ಲಸಿಕೆ ಹೆಸರಲ್ಲೂ ರಾಜಕೀಯ; ಸಚಿವರ ರಾಜೀನಾಮೆಗೆ ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಆಗ್ರಹ

Update: 2022-05-31 00:21 IST

ಬೆಂಗಳೂರು, ಮೇ 30: ರಾಜ್ಯ ಸರಕಾರದ ಸಚಿವರು ದಿನಕ್ಕೊಂದು ಸುಳ್ಳು ಮಾಹಿತಿ ನೀಡುತ್ತಾ ರಾಜ್ಯದ ಜನರ ಹಾದಿ ತಪ್ಪಿಸುತ್ತಿದ್ದಾರೆ ಎನ್ನುವುದು ಪದೇ ಪದೇ ಸಾಬೀತಾಗುತ್ತಲೇ ಇರುತ್ತದೆ. ಇದಕ್ಕೆ ತಾಜಾ ಉದಾಹರಣೆಯೆಂದರೆ ರಾಜ್ಯದ ಎಲ್ಲಾ ಮಕ್ಕಳಿಗೂ ಲಸಿಕೆ ಹಾಕಲಾಗಿದೆ ಎಂದು ಆರೋಗ್ಯ ಸಚಿವರು ಹೇಳಿದ ಹೇಳಿಕೆಯೇ ಸಾಕ್ಷಿಯಾಗಿದೆ ಎಂದು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ರಾಜ್ಯಾಧ್ಯಕ್ಷ ತಾಹೀರ್ ಹುಸೇನ್ ದೂರಿದ್ದಾರೆ.

ರಾಜ್ಯದ ಕೆಲ ಜಿಲ್ಲೆಗಳಲ್ಲಿ 17 ವರ್ಷದೊಳಗಿನ ಮಕ್ಕಳಿಗೆ 1, 2ನೇ ಡೋಸ್ ಬಾಕಿ ಉಳಿದಿವೆ ಎಂದು ಪತ್ರಿಕಾ ಮಾಧ್ಯಮ ಅಂಕಿ ಅಂಶಗಳ ಸಮೇತ ವರದಿ ನೀಡಿದ್ದರೂ, ಗಾಢ ನಿದ್ರೆಯಲ್ಲಿ ಇರುವ ಸರಕಾರ ಮಾತ್ರ, ಅಧಿಕಾರಿಗಳು ನೀಡುವ ಬೇಜವಾಬ್ದಾರಿಯ ಲೆಕ್ಕವನ್ನು ನೀಡುವ ಮೂಲಕ ಎಲ್ಲವೂ ಸರಿಯಾಗಿದೆ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿರುವುದು ಖಂಡನೀಯ ಎಂದು ಅವರು ಹೇಳಿದ್ದಾರೆ.

ಕೋವಿಡ್ ಪ್ರಕರಣಗಳನ್ನು ತಹಬದಿಗೆ ತರಲು ಸಾಕಷ್ಟು ಪ್ರಯತ್ನಗಳು ನಡೆದಿರುವುದು ಸರಿಯಷ್ಟೆ. ಆದರೆ, ವಾಸ್ತವದಲ್ಲಿ ಕಾಟಾಚಾರದ ಸರ್ವೆಗಳು, ಲಸಿಕಾ ಅಭಿಯಾನ ನಡೆದಿರುವುದು ಮಾತ್ರ ದುರಂತವೇ ಸರಿ. ಇನ್ನು ಆರೋಗ್ಯ ಸಚಿವರು ಯಾವುದನ್ನೂ ಗಂಭೀರವಾಗಿ ಪರಿಗಣಿಸದೇ, ವಾಸ್ತವಿಕತೆಯನ್ನು ಪರಿಶೀಲನೆ ಮಾಡದೇ ಹೇಳಿಕೆ ನೀಡಿರುವುದು ಅವರ ಸ್ಥಾನಕ್ಕೆ ಶೋಭೆ ತರುವುದಿಲ್ಲ ಎಂದು ತಾಹೀರ್ ಹುಸೇನ್ ತಿಳಿಸಿದ್ದಾರೆ. 

ಕೂಡಲೇ ಆಗಿರುವ ಪ್ರಮಾದವನ್ನು ಸರಿಪಡಿಸಿಕೊಂಡು ರಾಜ್ಯದ ಎಲ್ಲ್ಲ ಶಾಲಾ ಮಕ್ಕಳಿಗೂ ಲಸಿಕೆ ನೀಡುವ ಕಾರ್ಯ ಪೂರ್ಣಗೊಳಿಸಬೇಕು. ಇಲ್ಲವಾದಲ್ಲಿ ತಮ್ಮ ಕೆಲಸದಲ್ಲಿ ವಿಫಲ ಆಗಿದೆ ಎಂದು ಆರೋಗ್ಯ ಸಚಿವರು ರಾಜೀನಾಮೆ ನೀಡಬೇಕೆಂದು ಅವರು ಪತ್ರಿಕಾ ಪ್ರಕಟಣೆಯಲ್ಲಿ ಒತ್ತಾಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News