40 ಕೋಟಿ ರೂಪಾಯಿ ಮೌಲ್ಯದ ಬಿಡಿಎ ಸ್ವತ್ತು ವಶ

Update: 2022-05-31 14:08 GMT

ಬೆಂಗಳೂರು, ಮೇ 31: ಒತ್ತುವರಿ ತೆರವು ಕಾರ್ಯಾಚರಣೆಯನ್ನು ಮುಂದುವರಿಸಿರುವ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಮಂಗಳವಾರ ಜೆಪಿ ನಗರದಲ್ಲಿ ಸುಮಾರು 40 ಕೋಟಿ ರೂಪಾಯಿ ಮೌಲ್ಯದ 16 ಗುಂಟೆ ಜಾಗವನ್ನು ವಶಕ್ಕೆ ಪಡೆದಿದೆ.

ಜೆಪಿ ನಗರದ ಮೊದಲನೇ ಹಂತದ ಮಾರೇನಹಳ್ಳಿಯ ಸರ್ವೇ ನಂಬರ್ 35 ರಲ್ಲಿನ 16 ಗುಂಟೆ ಜಾಗ ಬಿಡಿಎಗೆ ಸೇರಿತ್ತು. ಆದರೆ, ಈ ಜಾಗ ತಮ್ಮದು ಎಂದು ಪ್ರತಿಪಾದಿಸಿದ್ದ ಕೆಲವರು ಹಲವು ವರ್ಷಗಳಿಂದ ಜಾಗವನ್ನುಬಿಟ್ಟುಕೊಟ್ಟಿರಲಿಲ್ಲ. ಹಲವು ಬಾರಿ ತೆರವುಗೊಳಿಸುವಂತೆ ಸೂಚನೆ ನೀಡಿದ್ದರೂ ಒತ್ತುವರಿದಾರರು ಜಾಗವನ್ನು ಬಿಡಿಎಗೆ ಬಿಟ್ಟುಕೊಟ್ಟಿರಲಿಲ್ಲ.

ಈ ಹಿನ್ನೆಲೆಯಲ್ಲಿ ಬಿಡಿಎ ಕಾರ್ಯಪಾಲಕ ಅಭಿಯಂತರ ಸುರೇಶ್ ಮತ್ತು ಸಹಾಯಕ ಕಾರ್ಯಪಾಲಕ ಅಭಿಯಂತರ ರವಿನಂದನ್ ಅವರನ್ನೊಳಗೊಂಡ ಬಿಡಿಎ ಅಧಿಕಾರಿಗಳು ಜಾಗೃತ ದಳದ ಪೊಲೀಸ್ ಅಧಿಕಾರಿಗಳಾದ ಭಾಸ್ಕರ್ ಮತ್ತು ರವಿಕುಮಾರ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಬಂದೋಬಸ್ತಿನಲ್ಲಿ ಜಾಗದ ಖಚಿತತೆಯ ವಿವರಗಳನ್ನು ಪಡೆದುಕೊಂಡು ಜಾಗದಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ಶೆಡ್ ಅನ್ನು ತೆರವುಗೊಳಿಸಿ ಜಾಗಕ್ಕೆ ಬೇಲಿ ಹಾಕಿದ್ದಾರೆ.

ಈ ಜಾಗವನ್ನು ವಶದಲ್ಲಿಟ್ಟುಕೊಂಡಿದ್ದ ಮಾಲಕರಿಗೆ ಈಗಾಗಲೇ ಬಿಡಿಎ ಪಕ್ಕದಲ್ಲಿಯೇ ಇರುವ ಜಾಗವನ್ನು ಹಂಚಿಕೆ ಮಾಡಿತ್ತು. ಆದರೆ, ಇದರ ಜೊತೆಗೇ 16 ಗುಂಟೆ ಜಾಗವೂ ತಮ್ಮದೆಂದು ಪ್ರತಿಪಾದಿಸಿ ಮಾಲಕರು ಸದರಿ ಜಾಗವನ್ನು ತಮ್ಮ ವಶದಲ್ಲಿಟ್ಟುಕೊಂಡಿದ್ದರು.

ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಮತ್ತು ಆಯುಕ್ತ ರಾಜೇಶ್ ಗೌಡ ಅವರ ಮಾರ್ಗದರ್ಶನದಲ್ಲಿ ಈ ಒತ್ತುವರಿ ತೆರವು ಕಾರ್ಯಾಚರಣೆ ನಡೆದಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್.ಆರ್.ವಿಶ್ವನಾಥ್, ಬಿಡಿಎಗೆ ಸೇರಿದ ಇನ್ನೂ ನೂರಾರು ಎಕರೆಯಷ್ಟು ಜಾಗವನ್ನು ವಶಕ್ಕೆ ತೆಗೆದುಕೊಳ್ಳುವ ಪ್ರಕ್ರಿಯೆ ಜಾರಿಯಲ್ಲಿದೆ. ಬಿಡಿಎ ಜಾಗವನ್ನು ಒತ್ತುವರಿ ಮಾಡಿಕೊಂಡಿರುವವರು ಎಷ್ಟೇ ಪ್ರಭಾವಿಗಳಿದ್ದರೂ ಅವರಿಂದ ಬಿಡಿಎ ಜಾಗವನ್ನು ಸ್ವಾಧೀನಕ್ಕೆ ತೆಗೆದುಕೊಳ್ಳಲಾಗುತ್ತದೆ ಎಂದು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News