ಮೋದಿ ಸರಕಾರ ಧ್ವನಿ ಇಲ್ಲದವರಿಗೆ ಧ್ವನಿ ನೀಡಿದೆ: ಸಚಿವ ಡಾ.ಅಶ್ವತ್ಥ ನಾರಾಯಣ

Update: 2022-05-31 14:32 GMT

ಬೆಂಗಳೂರು, ಮೇ 31: ‘ಪ್ರಧಾನಿ ಮೋದಿ ಅವರ ಸರಕಾರವು ದೇಶದಲ್ಲಿ ಸಕಾರಾತ್ಮಕ ಪರಿವರ್ತನೆ ತಂದಿದ್ದು, ದುರ್ಬಲರಿಗೆ ದನಿ ಮತ್ತು ಶಕ್ತಿಗಳನ್ನು ನೀಡಿದೆ' ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಸಿ.ಎನ್.ಅಶ್ವತ್ಥ ನಾರಾಯಣ ಅವರು ಇಂದಿಲ್ಲಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ರಾಮನಗರದಲ್ಲಿ ಏರ್ಪಡಿಸಿದ್ದ ‘ಆಜಾದಿ ಕಾ ಅಮೃತ ಮಹೋತ್ಸವ'ದಲ್ಲಿ ಮಾತನಾಡಿದ ಅವರು, ‘ಮೋದಿಯವರು ದುರ್ಬಲರು, ರೈತರು ಮತ್ತು ಮಹಿಳೆಯರ ಸಬಲೀಕರಣಕ್ಕಾಗಿ ಹಲವು ವಿನೂತನ ಯೋಜನೆಗಳನ್ನು ಘೋಷಿಸಿ, ಅವುಗಳನ್ನು ಕಾಲಮಿತಿಯಲ್ಲಿ ಜಾರಿಗೆ ತಂದು, ಬದ್ಧತೆಯನ್ನು ಪ್ರದರ್ಶಿಸಿದ್ದಾರೆ. ರಾಜಕೀಯ ಲಾಭಗಳನ್ನು ಮೀರಿದ ದೂರದರ್ಶಿತ್ವ ಇರುವ ನಾಯಕರಿಗೆ ಮಾತ್ರ ಇದು ಸಾಧ್ಯ' ಎಂದು ಬಣ್ಣಿಸಿದರು. ಯೋಜನೆಗಳ ಫಲಾನುಭವಿಗಳೊಂದಿಗೆ ಸಂವಾದ ನಡೆಸಿ, ಅವರ ಅಭಿಪ್ರಾಯಗಳನ್ನು ಆಲಿಸಿದರು.

ಸಭೆಯ ಬಳಿಕ ಅವರು, ಮೋದಿ ಅವರು ಹಿಮಾಚಲ ಪ್ರದೇಶದಿಂದ ಮಾಡಿದ ಭಾಷಣದ ನೇರ ಪ್ರಸಾರವನ್ನು ವೀಕ್ಷಿಸಿದರು. ಶೌಚಾಲಯ ನಿರ್ಮಾಣ, ಅಡುಗೆ ಅನಿಲ ಸಂಪರ್ಕ, ವಿದ್ಯುತ್ ಸೌಲಭ್ಯ, ರೈತ ಸಮ್ಮಾನ್, ಕೊರೋನ ಲಸಿಕೆ ಇವೆಲ್ಲ ಮೋದಿಯವರ ಅಸಾಧಾರಣ ಸಾಧನೆಗಳಾಗಿವೆ ಎಂದು ಅವರು ನುಡಿದರು.

‘ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ ಭಾರತದಲ್ಲಿ ಇವೆಲ್ಲ ಏಕೆ ಸಾಧ್ಯವಾಗಿರಲಿಲ್ಲ ಎನ್ನುವ ಅವಲೋಕನ ಆಗಬೇಕು. ಹಾಗೆಯೇ, ಜನರು ಶಿಕ್ಷಣವೇ ತಮ್ಮ ಪ್ರಗತಿಗೆ ಇರುವ ಏಕೈಕ ದಾರಿ ಎನ್ನುವುದನ್ನು ಅರಿಯಬೇಕು. ಜಾಗತಿಕ ಸ್ಪರ್ಧೆಯ ಯುಗದಲ್ಲಿ ಭಾರತವು ಮೋದಿ ನಾಯಕತ್ವದಲ್ಲಿ ಅಗ್ರಪಂಕ್ತಿಯಲ್ಲಿ ಬೆಳಗುತ್ತಿದೆ. ಅವರು ರೂಪಿಸಿರುವ ಎನ್‍ಇಪಿ, ನವಭಾರತ ನಿರ್ಮಾಣಕ್ಕೆ ಸೋಪಾನವಾಗಿದೆ ಎಂದು ಅವರು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಅವಿನಾಶ್ ಮೆನನ್, ಎಸ್ಪಿ ಸಂತೋಷ ಬಾಬು, ಜಿಪಂ ಸಿಇಒ ಇಕ್ರಂ, ಹೆಚ್ಚುವರಿ ಜಿಲ್ಲಾಧಿಕಾರಿ ಜವರೇಗೌಡ, ನಗರಸಭೆ ಅಧ್ಯಕ್ಷೆ ಪಾರ್ವತಮ್ಮ, ಜಯಲಕ್ಷ್ಮಿ, ರಮೇಶ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News