×
Ad

ದೇಶದ ಉಳಿವಿಗಾಗಿ ಸಂಘಟಿತ ಹೋರಾಟ: ಅಮೃತ್ ಶೆಣೈ

Update: 2022-05-31 20:51 IST

ಉಡುಪಿ : ಭಾರತೀಯ ಕಿಸಾನ್ ಯೂನಿಯನ್ (ಬಿಕೆಯು) ವಕ್ತಾರ ಹಾಗೂ ಹಿರಿಯ ರಾಷ್ಟ್ರೀಯ ರೈತ ನಾಯಕ ರಾಕೇಶ್ ಟಿಕಾಯತ್ ಅವರ ಮೇಲೆ ಬೆಂಗಳೂರಿನಲ್ಲಿ ಸೋಮವಾರ ದುಷ್ಕರ್ಮಿಗಳು ನಡೆಸಿದ ಹಲ್ಲೆ ಖಂಡಿಸಿ ಉಡುಪಿ ಸಹಬಾಳ್ವೆ ವತಿಯಿಂದ ಅಜ್ಜರಕಾಡಿನ ಹುತಾತ್ಮ ಸ್ಮಾರಕದ ಮುಂಭಾಗದಲ್ಲಿ ಮಂಗಳವಾರ ಸಂಜೆ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿತ್ತು.

ಪ್ರತಿಭಟನಕಾರರನ್ನುದ್ದೇಶಿಸಿ ಮಾತನಾಡಿದ ಸಹಬಾಳ್ವೆಯ ಅಧ್ಯಕ್ಷ ಅಮೃತ ಶೆಣೈ ಅವರು, ಬಿಜೆಪಿಯ ಶಾಸಕರು ಹಾಗೂ ಸಂಸದರು ಗೂಂಡಾಗಳಂತೆ ಹೇಳಿಕೆಗಳನ್ನು ನೀಡುತಿದ್ದು, ಪಕ್ಷದ ಹಿರಿಯ ನಾಯಕರೇ ಕಾನೂನನ್ನು ಕಾಲಕಸದಂತೆ ನೋಡುತಿದ್ದಾರೆ. ಈ ಅನ್ಯಾಯದ ವಿರುದ್ಧ ಶಾಂತಿ, ಸೌಹಾರ್ದತೆ, ಸಹೋದರತ್ವ, ಸಾಮರಸ್ಯ ಬಯಸುವ ಬಹುಸಂಖ್ಯಾತರಾದ ನಾವು ಹೋರಾಟಕ್ಕಿಳಿಯದೇ ಅನ್ಯ ಮಾರ್ಗವಿಲ್ಲ. ಇಲ್ಲದಿದ್ದರೆ ಈ ದೇಶ ಉಳಿಯಲ್ಲ ಎಂದರು.

ಪ್ರಧಾನಿ ನರೇಂದ್ರ ಮೋದಿ ಹೆಸರು ಕೂಗುತ್ತಾ ಕಾನೂನು ಕೈಗೆತ್ತಿಕೊಂಡ ಪುಂಡರು, ಕಿಡಿಗೇಡಿಗಳ ತಂಡ ಟಿಕಾಯತ್ ಅವರ ಮೇಲೆ ಹಲ್ಲೆ ನಡೆಸಿದೆ. ಕಳೆದ ೮ ವರ್ಷಗಳಿಂದ ಸರಕಾರದ ಲೋಪಗಳನ್ನು ಪ್ರಶ್ನಿಸುವ, ಪ್ರತಿಭಟಿಸುವವರ ವಿರುದ್ಧ ಧ್ವನಿ ಎತ್ತದಂತೆ ಭೀತಿ ಹುಟ್ಟಿಸುವ ಹುನ್ನಾರ ನಡೆಯುತ್ತಿದೆ ಎಂದವರು ಹೇಳಿದರು.

ಆಡಳಿತ ಪಕ್ಷದ ಇಂಥಾ ಗೂಂಡಾ ಸಂಸ್ಕೃತಿ ವಿರುದ್ಧ ನಾವು ಇಂದು ಮಾತನಾಡದೇ ಹೋದರೆ ಮುಂದೆ ಪ್ರತಿಭಟನಾಕಾರರನ್ನು ಸಾಮೂಹಿಕವಾಗಿ ಕೊಲ್ಲುವುದಕ್ಕೂ ಇವರು ಹಿಂದೆ ನೋಡಲ್ಲ. ಈಗಾಗಲೇ ಕೆಲ ರಾಜ್ಯಗಳಲ್ಲಿ ಬಿಜೆಪಿ ಅಧಿಕಾರ ಕಳೆದುಕೊಂಡಿದೆ. ಬಿಜೆಪಿ ಅನ್ಯಾಯದ ವಿರುದ್ಧ ಮಾತನಾಡದೇ ಹೋದರೆ ದೇಶಕ್ಕೆ ಉಳಿಗಾಲವಿಲ್ಲ ಎಂದರು.

ಚಿಂತಕ ಪ್ರೊ.ಕೆ. ಫಣಿರಾಜ್ ಮಾತನಾಡಿ, ಸರಕಾರದ ಅನ್ಯಾಯ, ಆರ್‌ಎಸ್‌ಎಸ್ ಸಿದ್ಧಾಂತಗಳ ಬಗ್ಗೆ ಜನಾಂದೋಲನ, ಸಂವಿಧಾನ ಎತ್ತಿ ಹಿಡಿಯುವ ಕಾರ್ಯಕ್ಕೆ ಮುಂದಾದರೆ, ವೈಚಾರಿಕ ಸಂಘರ್ಷ ಬಿಟ್ಟು ಹಲ್ಲೆ ಮಾಡಲಾಗುತ್ತಿದೆ. ಈ ಕುತಂತ್ರಗಳ ಹಿಂದೆ ಆರ್‌ಎಸ್‌ಎಸ್, ಬಿಜೆಪಿಯ ವಿಚಾರಧಾರೆಯೇ ಇದೆ. ವೈಯಕ್ತಿಕ ಸಭೆಗಳಿಗೆ ಹೋಗಿ ಈ ರೀತಿಯ ಹಲ್ಲೆ ನಡೆಸಲಾಗುತ್ತದೆ. ಇನ್ನೊಂದೆರಡು ತಿಂಗಳಿನಲ್ಲಿ ಈ ಸ್ಥಿತಿ ನಮ್ಮ ಮಧ್ಯೆಯೂ ಬಂದು ತಲುಪಬಹುದು ಎಂದವರು ಕಳವಳ ವ್ಯಕ್ತಪಡಿಸಿದರು.

ದಸಂಸ ಮುಖಂಡ ಸುಂದರ್ ಮಾಸ್ತರ್ ಸಹ ಮಾತನಾಡಿದರು. ಉಡುಪಿ ಜಿಲ್ಲಾ ಮುಸ್ಲಿಂ ಒಕ್ಕೂಟದ ಅಧ್ಯಕ್ಷ ಇಬ್ರಾಹಿಂ ಕೋಟ, ನಗರಸಭೆ ವಿರೋಧ ಪಕ್ಷದ ನಾಯಕ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಕಾಂಚನ್, ಮುಖಂಡರಾದ ಹುಸೇನ್ ಕೋಡಿಬೆಂಗ್ರೆ, ಪ್ರಶಾಂತ್ ಜತ್ತನ್ನ, ಉದ್ಯಾವರ ನಾಗೇಶ್ ಕುಮಾರ್, ಇಕ್ಬಾಲ್ ಮನ್ನಾ, ಶಶಿಧರ್ ಗೊಲ್ಲ, ಶರತ್ ಶೆಟ್ಟಿ ಲಕ್ಷ್ಮೀನಗರ, ಸಾಯಿರಾಜ್ ಕಿದಿಯೂರು ಮುಂತಾದವರು ಉಪಸ್ಥಿತರಿದ್ದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News