ಅಂತಾರಾಷ್ಟ್ರೀಯ ಟೆಲಿಫೋನ್ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ವಂಚನೆ: ಆರೋಪಿಗಳ ಬಂಧನ

Update: 2022-06-01 12:37 GMT

ಬೆಂಗಳೂರು, ಜೂ.1: ಅಂತರ್‍ರಾಷ್ಟ್ರೀಯ ಟಿಲಿಫೋನ್ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸಿ ವಂಚನೆ ನಡೆಸುತ್ತಿದ್ದ ಜಾಲವನ್ನು ಸಿಸಿಬಿ ಪೋಲಿಸರು ಭೇದಿಸುವಲ್ಲಿ ಯಶಸ್ವಿಯಾಗಿದೆ.

ಬುಧವಾರ ಈ ಕುರಿತು ಸುದ್ದಿಗೋಷ್ಠಿಯನ್ನುದ್ದೇಶಿಸಿ ನಗರ ಪೊಲೀಸ್ ಆಯುಕ್ತ ಪ್ರತಾಪ್ ರೆಡ್ಡಿ, ಪ್ರಕರಣ ಸಂಬಂಧ ರವಿಚಂದ್ರ, ಸುಬೈರ್, ಮನು, ಇಸ್ಮಾಯಿಲ್ ಶರೀಫ್ ಹಾಗೂ ಶಾಹೀರ್ ಎಂಬುವರನ್ನು ಬಂಧಿಸಲಾಗಿದೆ ಎಂದರು.

*ಮಧ್ಯಪ್ರಾಚ್ಯ ರಾಷ್ಟ್ರಗಳಿಂದ ಅನಾಮಧೇಯ ವ್ಯಕ್ತಿಯು ಮಹದೇವಪುರದ ಸಿ ಟ್ರಂಕ್‍ಕಾಲ್ ಡಿವೈಜ್ ಮೂಲಕ ದಕ್ಷಿಣ ಕನ್ನಡ ಜಿಲ್ಲೆಯ ಲೆಟ್ಟನೆಗೆ ಮಡ್ಲೂರು ಗ್ರಾಮದ ಚಂದ್ರಹಾಸ್ ಎಂಬುವರಿಗೆ ಕರೆ ಮಾಡಿ ಶರತ್ ಮಡಿವಾಳನ ಕೊಲೆಯಾದ ರೀತಿ ಸಂಜೆಯೊಳಗೆ ನಿನ್ನ ಹೆಣವೂ ಬೀಳುತ್ತದೆ ಎಂದು ಬೆದರಿಕೆ ಕರೆ ಮಾಡಿದ್ದು, ಈ ಬಗ್ಗೆ ಪುತ್ತೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು*. ಪ್ರಕರಣವನ್ನು ಎಲ್ಲ ಆಯಾಮಗಳಿಂದ ತನಿಖೆ ಕೈಗೊಳ್ಳಲಾಗಿತ್ತು.

ಈ ಸಂಬಂಧ ಬಂದ ಸುಳಿವು ಆಧರಿಸಿ ಅಂತರ್‍ರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುವ ಜಾಲವನ್ನು ಪತ್ತೆ ಹಚ್ಚಲಾಯಿತು. ಬಂಧಿತರಲ್ಲಿ ಕೆಲವರು ಕೇರಳ ಮೂಲದವರಾಗಿದ್ದು, ಮಹದೇವಪುರದ ಸ್ಥಳೀಯ ಮತ್ತೊಬ್ಬನ ಜತೆ ಸೇರಿ ಕಾಲ್‍ಸೆಂಟರ್‍ಗಳಿಗೆ ನೀಡಲಾಗುವ ಏರ್‍ಟೆಲ್ ಕಂಪೆನಿಯ ಸಿಪ್‍ಟ್ರಂಕ್‍ಕಾಲ್ ಡಿವೈಜ್‍ನ್ನು ಪಡೆದು ಐಕಾನ್ ಟೂರ್ ಅಂಡ್ ಟ್ರಾವಲ್ಸ್ ಎಂಬ ಹೆಸರಿನ ಕಂಪೆನಿಯ ಹೆಸರಿನ ದಾಖಲೆಗಳನ್ನು ಸೃಷ್ಟಿಸಿ ಏರ್‍ಟೆಲ್ ಕಂಪೆನಿಯ 180 ಕೋಡ್‍ಗಳಿರುವ ಸ್ಥಿರದೂರವಾಣಿಯನ್ನು ಪಡೆದುಕೊಂಡು ಅನಧಿಕೃತವಾಗಿ ಟೆಲ್‍ಫೋನ್ ಕರೆಗಳನ್ನು ಪರಿವರ್ತಿಸುವ ಉಪಕರಣಗಳನ್ನಿಟ್ಟುಕೊಂಡು ಅಂತರ್‍ರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳನ್ನಾಗಿ ಪರಿವರ್ತಿಸುತ್ತಿದ್ದರು ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದರು.

ಬೆಂಗಳೂರಿನ ಚಿಕ್ಕಸಂದ್ರ, ಹೆಸರುಘಟ್ಟ ಮುಖ್ಯರಸ್ತೆಯಲ್ಲಿ ಬಾಡಿಗೆಗೆ ಮನೆಯೊಂದನ್ನು ಪಡೆದು ಉತ್ತರಪ್ರದೇಶ, ಮಧ್ಯಪ್ರದೇಶ ಹಾಗೂ ಪಶ್ಚಿಮ ಬಂಗಾಳ ಸೇರಿ ಇತರೆ ರಾಜ್ಯದ ಬಿಎಸ್‍ಎನ್‍ಎಲ್ ಸಿಮ್ ಕಾರ್ಡ್‍ಗಳನ್ನು ಪಡೆದು ಸಿಮ್ ಬಾಕ್ಸ್ ಡಿವೈಜ್‍ಗಳಿಗೆ ಅಳವಡಿಸಿ ಎಕ್ಸ್‍ಟೆಲ್ ಕಂಪೆನಿಯ ಇಂಟರ್ ನೆಟ್ ಬಳಸಿ ಅಂತರ್‍ರಾಷ್ಟ್ರೀಯ ಕರೆಗಳನ್ನು ಸ್ಥಳೀಯ ಕರೆಗಳಾಗಿ ಪರಿವರ್ತಿಸಿ ಅಕ್ರಮ ದೂರವಾಣಿ ಸಂಪರ್ಕ ಇಟ್ಟುಕೊಂಡಿದ್ದರು ಎಂದು ತಿಳಿಸಿದರು. 

ಅಕ್ರಮ ಟೆಲಿಫೋನ್ ಪರಿವರ್ತನಾ ಕೇಂದ್ರದಿಂದ ಬರುವ ಅಂತರ್‍ರಾಷ್ಟ್ರೀಯ ಕರೆಗಳ ಮೂಲವನ್ನು ಪತ್ತೆ ಮಾಡಲು ಸಾಧ್ಯವಿಲ್ಲ. ಕರೆ ಮಾಡುವ ವ್ಯಕ್ತಿ ವಾಯ್ಸ್ ಓವರ್ ಇಂಟರ್‍ನೆಟ್ ಪೋರ್ಟೋಕಾಲ್ ಮೂಲಕ ಮಾಡುತ್ತಿದ್ದು, ಕರೆ ಸ್ವೀಕರಿಸುವ ವ್ಯಕ್ತಿಗೆ ಸ್ಥಳೀಯ ಟೆಲಿಫೋನ್ ಪರಿವರ್ತನಾ ಕೇಂದ್ರಗಳ ಮೊಬೈಲ್ ನಂಬರ್ ಕಾಣಿಸುತ್ತಿದ್ದು, ಈ ಕರೆಗಳು ಯಾವುದೇ ನಿಯಂತ್ರಣಕ್ಕೆ ಒಳಪಟ್ಟಿರುವುದಿಲ್ಲ ಎಂದು ತಿಳಿಸಿದರು. 

ಆರೋಪಿಗಳಿಂದ 16 ಸಿಮ್ ಬಾಕ್ಸ್, ಡಿವೈಜ್, 2 ಸಿಪ್‍ಟ್ರಂಕ್‍ಕಾಲ್ ಡಿವೈಜ್, 205 ಸಿಮ್‍ಕಾರ್ಡ್‍ಗಳು, 5 ಲ್ಯಾಪ್‍ಟಾಪ್, 2 ಡೆಸ್‍ಟಾಪ್, 9 ಮೊಬೈಲ್‍ಗಳನ್ನು ಜಪ್ತಿ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಪತ್ರಿಕಾಗೋಷ್ಠಿಯಲ್ಲಿ ಜಂಟಿ ಪೊಲೀಸ್ ಆಯುಕ್ತ ರಮಣಗುಪ್ತ ಸೇರಿದಂತೆ ಪ್ರಮುಖರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News