×
Ad

ಅಂಬ್ಲಮೊಗರು ಶಾಲೆಯಲ್ಲಿ ಯುಕೆಜಿ ಉದ್ಘಾಟನೆ

Update: 2022-06-02 17:22 IST

ಕೊಣಾಜೆ: ಅಂಬ್ಲಮೊಗರು ದ.ಕ ಜಿಲ್ಲಾ ಪಂಚಾಯತಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲೆಯತ್ತ ಸಮುದಾಯ ಕಾರ್ಯಕ್ರಮ, ನೂತನ ಯು.ಕೆ.ಜಿ ತರಗತಿ ಉದ್ಘಾಟನೆ ಮತ್ತು ಪದ್ಮಶ್ರೀ ಪುರಸ್ಕೃತ ಹರೇಕಳ ಹಾಜಬ್ಬರಿಗೆ ಸನ್ಮಾನ ಕಾರ್ಯಕ್ರಮ ಮಂಗಳವಾರ ನಡೆಯಿತು.

ಕಾರ್ಯಕ್ರಮವನ್ನು ಮುಂಬೈ ಉದ್ಯಮಿ ಹೇರಂಬ ಇಂಡಸ್ಟ್ರೀಸ್ ಲಿಮಿಟೆಡ್ ಅಧ್ಯಕ್ಷರಾದ ಕನ್ಯಾನ ಸದಾಶಿವ ಶೆಟ್ಟಿ ಅವರು ದೀಪ ಬೆಳಗಿಸಿ ಉದ್ಘಾಟಿಸಿದರು. ಬಳಿಕ ಮಾತನಾಡಿದ ಅವರು ಮಕ್ಕಳು ವಿದ್ಯಾಬ್ಯಾಸದ ಕಡೆಗೆ ಹೆಚ್ಚು ಒಲವು ತೋರುವಂತಾಗಬೇಕು, ಇದಕ್ಕಾಗಿ  ಹೆತ್ತವರು ಪ್ರೇರೇಪಿಸಬೇಕು ಎಂದು ಹೇಳಿದರು.

ಶಾಸಕ ಯು.ಟಿ.ಖಾದರ್ ಮಾತನಾಡಿ ನಮ್ಮ ಮಕ್ಕಳಿಗೆ ಶಿಕ್ಷಣದ ಜೊತೆಗೆ ಪ್ರೀತಿ, ಏಕತೆ, ಸೌಹಾರ್ದತೆ ಬಗ್ಗೆ ತಿಳಿಸಬೇಕು, ಸಮಾಜದಲ್ಲಿ ಯಾವುದೇ ಕಷ್ಟ ಬಂದರೂ ಅದನ್ನು ಎದುರಿಸುವ ಬಗ್ಗೆ ನೀತಿ  ಪಾಠವನ್ನು ತಿಳಿಸಿ, ಎಲ್ಲಾ ಜಾತಿ ಎಲ್ಲಾಮತ ದವರೊಂದಿಗೆ ಜೊತೆಯಾಗಿರಬೇಕು ಸಂದೇಶವನ್ನು ತಿಳಿಹೇಳಬೇಕು ಎಂದರು.

ಇದೇ ಸಂದರ್ಭದಲ್ಲಿ ಪದ್ಮಶ್ರೀ ಪುರಸ್ಕೃತ ಶಿಕ್ಷಣ ಸಂತ  ಹರೇಕಳ ಹಾಜಬ್ಬ ಅವರನ್ನು ಸನ್ಮಾನಿಸಲಾಯಿತು.

ಹರೇಕಳ ಗ್ರಾಮ ಪಂಚಾಯತ್ ಅಧ್ಯಕ್ಷೆ ಶ್ರೀಮತಿ ಲತಾ, ಉಪಾಧ್ಯಕ್ಷ ಮೊಹಮ್ಮದ್ ಇಕ್ಬಾಲ್, ಕ್ಷೇತ್ರ ಶಿಕ್ಷಣಾಧಿಕಾರಿ ಡಾ.ಪ್ರಶಾಂತ್ ಕುಮಾರ್, ಮುನ್ನೂರು ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ರೆಹನಾ, ಶಾಲಾಭಿವೃದ್ಧಿ ಸಮಿತಿಯ ಅಧ್ಯಕ್ಷ ಅಬುಸಾಲಿ, ಮಾಜಿ ತಾಲೂಕು ಪಂಚಾಯತ್ ಸದಸ್ಯ ಸುದರ್ಶನ್ ಶೆಟ್ಟಿ, ಮಾಜಿ ಗ್ರಾಮ ಪಂಚಾಯತ್ ಅಧ್ಯಕ್ಷ ಸಂಜೀವ ಶೆಟ್ಟಿ, ವಿಠಲ್ ಶೆಟ್ಟಿ, ಮತ್ತು ಪ್ರಮುಖರಾದ ಸದಾಶಿವ ಶೆಟ್ಟಿ ಪಡ್ಯಾರಮನೆ ಉಪಸ್ಥಿತರಿದ್ದರು.

ಇದೇ ಸಂದರ್ಭದಲ್ಲಿ ಪದವಿ ಪೂರ್ವ ಕಾಲೇಜು ಸ್ಥಾಪನೆ ಮತ್ತು ಅಡುಗೆ ಸಿಬ್ಬಂದಿಗಳ ವೇತನ ಹೆಚ್ಚಳಕ್ಕೆ ಶಾಸಕ ಯು.ಟಿ.ಖಾದರ್ ಅವರಿಗೆ ಶಾಲಾ ಮುಖ್ಯೋಪದ್ಯಾಯರು ಮತ್ತು ಶಾಲಾಭಿವೃದ್ಧಿ ಸಮಿತಿ ವತಿಯಿಂದ ಮನವಿ ಸಲ್ಲಿಸಲಾಯಿತು.

ಶಾಲಾ ಮುಖ್ಯ ಶಿಕ್ಷಕರಾದ ಜಗದೀಶ್ ಶೆಟ್ಟಿ ಸ್ವಾಗತಿಸಿ ಪ್ರಾಸ್ತವಿಕವಾಗಿ ಮಾತನಾಡಿದರು, ಶಿಕ್ಷಕಿ ಗೀತಾ ಕಾರ್ಯಕ್ರಮ ನಿರೂಪಿಸಿದರು, ಶಿಕ್ಷಕರಾದ ಅಹ್ಮದ್ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News