ಕಾಂಗ್ರೆಸ್‍ನಲ್ಲಿ ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸೂತ್ರ: ರಣದೀಪ್ ಸಿಂಗ್ ಸುರ್ಜೆವಾಲ

Update: 2022-06-02 12:34 GMT

ಬೆಂಗಳೂರು, ಜೂ.2: ಪಕ್ಷದಲ್ಲಿ ನಾಯಕರ ಕುಟುಂಬಗಳು ಅಥವಾ ಸಂಬಂಧಿಗಳಿಗೆ ಟಿಕೆಟ್ ನೀಡುವ ವಿಚಾರವಾಗಿ ನಿರ್ಣಯ ಕೈಗೊಳ್ಳಲಾಗಿದ್ದು, ಒಂದು ಕುಟುಂಬಕ್ಕೆ ಒಂದು ಟಿಕೆಟ್ ಸೂತ್ರವನ್ನು ಅಳವಡಿಸಿಕೊಳ್ಳಲಾಗಿದೆ ಎಂದು ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ತಿಳಿಸಿದ್ದಾರೆ.

ಗುರುವಾರ ನಗರದ ಹೊರವಲಯದಲ್ಲಿರುವ ಖಾಸಗಿ ರೆಸಾರ್ಟ್‍ನಲ್ಲಿ ಕೆಪಿಸಿಸಿ ವತಿಯಿಂದ ಆಯೋಜಿಸಲಾಗಿರುವ ‘ನವ ಸಂಕಲ್ಪ ಶಿಬಿರ’ದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಅವರು, ಹಾಗೆಂದು ಒಂದು ಕುಟುಂಬದಲ್ಲಿ ಮತ್ತೊಬ್ಬರನ್ನು ಸಂಪೂರ್ಣವಾಗಿ ನಿರಾಕರಿಸುವುದಿಲ್ಲ. ಅಂತಹವರು ಪಕ್ಷಕ್ಕಾಗಿ 5 ವರ್ಷಗಳ ಕಾಲ ದುಡಿದಿದ್ದರೆ ಅವರಿಗೆ ಅವಕಾಶ ನೀಡಲಾಗುವುದು ಎಂದರು.

ಪಕ್ಷದ ನಾಯಕರ ಕುಟುಂಬ ಸದಸ್ಯರಿಗೆ ಏಕಾಏಕಿ ಕರೆತಂದು ಟಿಕೆಟ್ ನೀಡುವುದಿಲ್ಲ. ಮೊದಲು ಪಕ್ಷದ ಕೆಲಸದಲ್ಲಿ ತೊಡಗಿಸಿಕೊಂಡು ನಂತರ ಅವರು ಅವಕಾಶದ ಅರ್ಹತೆ ಪಡೆಯಬೇಕಿದೆ. ಈ ಚಿಂತನ ಶಿಬಿರದಲ್ಲಿ ತೆಗೆದುಕೊಳ್ಳುವ ನಿರ್ಣಯಗಳು ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ರಾಜ್ಯದಲ್ಲಿ ಮತ್ತೆ ಅಧಿಕಾರಕ್ಕೆ ಬರಲು ದಾರಿ ಮಾಡಿಕೊಡಲಿವೆ ಎಂಬ ವಿಶ್ವಾಸ ನನಗಿದೆ ಎಂದು ಅವರು ಹೇಳಿದರು.

ಈ ಸಭೆಯಲ್ಲಿ ಆರ್ಥಿಕತೆ, ಬೆಲೆ ಏರಿಕೆ, ಸಾಮಾಜಿಕ ನ್ಯಾಯ, ಪಕ್ಷದ ಸಂಘಟನೆ, ಕೃಷಿ ಹಾಗೂ ರೈತರು, ಯುವಕರು, ಮಹಿಳೆಯರು, ಶಿಕ್ಷಣ ಹಾಗೂ ಉದ್ಯೋಗ, ಶೈಕ್ಷಣಿಕ ವಿಚಾರವಾಗಿ ಚರ್ಚೆ ನಡೆಸಲು ಸಮಿತಿಗಳನ್ನು ರಚಿಸಲಾಗಿದ್ದು, ಈ ಎಲ್ಲ ಸಮಿತಿಗಳು ಚರ್ಚೆ ನಡೆಸಿದ ನಂತರ ಸಭೆಯ ನಿರ್ಣಯಗಳನ್ನು ಕೈಗೊಳ್ಳಲಾಗುವುದು. ಈ ನಿರ್ಣಯಗಳು ನಮ್ಮನ್ನು ನಾವು ಪುನರ್ ಸಂಘಟಿಸಿಕೊಳ್ಳಲು ಒಂದು ದಾರಿ ದೀಪವಾಗಲಿದೆ ಎಂದು ಸುರ್ಜೇವಾಲ ತಿಳಿಸಿದರು.

ನಮ್ಮ ಸಂಕಲ್ಪ ಶಿಬಿರ ಮುಂದಿನ ದಿನಗಳಲ್ಲಿ ಎದುರಾಗಲಿರುವ ಚುನಾವಣೆಗಳನ್ನು ಎದುರಿಸಲು ಸೈದ್ಧಾಂತಿಕ, ರಾಜಕೀಯ ಹಾಗೂ ಸಂಘಟನಾತ್ಮಕ ವಿಚಾರವಾಗಿ ಅನೇಕ ಅವಕಾಶ ದಾರಿಗಳನ್ನು ನಮಗೆ ನೀಡಲಿದೆ. ದೇಶದಲ್ಲಿ ಜನರ ಆಶೀರ್ವಾದದೊಂದಿಗೆ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರುವುದಾದರೆ ಅದು ಕರ್ನಾಟಕ ರಾಜ್ಯದಲ್ಲಿ ಎಂಬ ನಂಬಿಕೆ ನನಗಿದೆ ಎಂದು ಅವರು ಹೇಳಿದರು. 

ಬ್ಲಾಕ್, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಸಮಿತಿಯಲ್ಲಿನ ಎಲ್ಲ ಹುದ್ದೆಗಳನ್ನು ಮುಂದಿನ 90-180 ದಿನಗಳಲ್ಲಿ ಭರ್ತಿ ಮಾಡಬೇಕಿದೆ. ಮುಂದಿನ 15 ದಿನಗಳಲ್ಲಿ ಕೆಪಿಸಿಸಿಯ ಪದಾಧಿಕಾರಿಗಳ ಪಟ್ಟಿಯನ್ನು ಪೂರ್ಣಗೊಳಿಸಬೇಕು. ನಂತರ ಜಿಲ್ಲಾ ಹಾಗೂ ಬ್ಲಾಕ್ ಹಾಗೂ ಇತರೆ ಘಟಕಗಳಲ್ಲಿ ಎಲ್ಲ ಹುದ್ದೆಗಳನ್ನು ಭರ್ತಿ ಮಾಡಲಾಗುವುದು. ಕೆಪಿಸಿಸಿ ಪದಾಧಿಕಾರಿಗಳಿಗೆ ಮುಂದಿನ ದಿನಗಳಲ್ಲಿ ಜಿಲ್ಲೆ ಹಾಗೂ ಕ್ಷೇತ್ರಗಳ ಉಸ್ತುವಾರಿ ನೀಡಲಾಗುವುದು. ಈ ಎಲ್ಲ ವಿಚಾರವಾಗಿ ನಾನು ಚರ್ಚೆ ಮಾಡಿ, ಮೇಲ್ವಿಚಾರಣೆ ಮಾಡುತ್ತೇನೆ ಎಂದು ಅವರು ಹೇಳಿದರು.

ಎಲ್ಲ ಘಟಕಗಳ ಮುಖ್ಯಸ್ಥರು ಇಲ್ಲಿದ್ದು, ಅವರು ತಮ್ಮ ಪದಾಧಿಕಾರಿಗಳ ಹುದ್ದೆಯನ್ನು ಪೂರ್ಣಗೊಳಿಸಬೇಕು. ಬ್ಲಾಕ್ ಹಾಗೂ ಗ್ರಾಮ ಸಮಿತಿ ನಡುವೆ ಮಂಡಲ ಸಮಿತಿ ಇರಬೇಕು. ನೀವೆಲ್ಲರೂ ಜಿಲ್ಲಾ ಕಚೇರಿಯಲ್ಲಿ ಸಭೆ ಮಾಡಿ ಈ ಸಮಿತಿಯ ವ್ಯಾಪ್ತಿ ನಿರ್ಧರಿಸಬೇಕು. ನಂತರ ವಾರ್ಡ್ ಹಾಗೂ ಗ್ರಾಮ ಸಮಿತಿಗಳನ್ನು ರಚಿಸಲಾಗುವುದು ಸುರ್ಜೇವಾಲ ತಿಳಿಸಿದರು.

ಮುಂದಿನ 20 ದಿನಗಳಲ್ಲಿ ರಾಜ್ಯ ಮಟ್ಟದ ವಾರ್ ರೂಮ್ ರಚಿಸಲಾಗುವುದು. ದಿನನಿತ್ಯದ ಅಜೆಂಡಾವನ್ನು ಎಲ್ಲರಿಗೂ ಕಳುಹಿಸಿಕೊಡಲಾಗುವುದು. ಪರಿಶಿಷ್ಟ ಜಾತಿ, ಪಂಗಡ, ಅಲ್ಪಸಂಖ್ಯಾತರು, ಹಿಂದುಳಿದವರು, ಮಹಿಳೆಯರು, ಯುವಕರು, ವಿದ್ಯಾರ್ಥಿಗಳ ವಿಚಾರ ಚರ್ಚೆ ಮಾಡಬೇಕು. ಹಿರಿಯರನ್ನು ಕಡೆಗಣಿಸದೇ, ಹೊಸ ಮುಖಗಳಿಗೆ ಅವಕಾಶ ನೀಡಲು ಪಕ್ಷ ತೀರ್ಮಾನಿಸಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಶೇ.50ರಷ್ಟು ಅವಕಾಶವನ್ನು 50 ವರ್ಷದೊಳಗಿನವರಿಗೆ ನೀಡಲು ಉದಯಪುರ ಸಭೆಯಲ್ಲಿ ತೀರ್ಮಾನಿಸಲಾಗಿದೆ ಎಂದು ಅವರು ಹೇಳಿದರು.

ಬಡವರು, ಶೋಷಿತರು, ದಲಿತರು, ಹಿಂದುಳಿದವರು, ಮಹಿಳೆಯರು, ಅಲ್ಪಸಂಖ್ಯಾತರು, ಯುವಕರು ಹಾಗೂ ಪರಿಶಿಷ್ಟರ ಧ್ವನಿಯಾಗದೇ ನಾವು ಯಶಸ್ಸು ಸಾಧಿಸಲು ಸಾಧ್ಯವಿಲ್ಲ. ನಮ್ಮ ಎಲ್ಲ ಸಮಿತಿಗಳಲ್ಲಿ ಹಾಗೂ ಟಿಕೆಟ್ ಹಂಚಿಕೆಯಲ್ಲಿ ಈ ಎಲ್ಲ ವರ್ಗದವರಿಗೆ ಅವಕಾಶ ನೀಡಬೇಕು. ಪಕ್ಷದಲ್ಲಿ ಯಾವುದೇ ಪದಾಧಿಕಾರಿಗಳ ಹುದ್ದೆಯ ಗರಿಷ್ಠ ಕಾಲಮಿತಿ 5 ವರ್ಷಗಳಿಗೆ ನಿಗದಿ ಮಾಡಲಾಗಿದೆ ಎಂದು ಸುರ್ಜೇವಾಲ ತಿಳಿಸಿದರು.

ಜಿಲ್ಲಾಧ್ಯಕ್ಷರಾಗಿ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ 5 ವರ್ಷ ಪೂರ್ಣಗೊಳಿಸಿರುವವರು ಬೇರೆಯವರಿಗೆ ಅವಕಾಶ ನೀಡುವತ್ತ ಗಮನಹರಿಸಬೇಕು. ಆ ಮೂಲಕ ಬೇರೆ ಜವಾಬ್ದಾರಿ ವಹಿಸಿಕೊಳ್ಳಲು ಸಿದ್ಧರಾಗಬೇಕು. ಪಕ್ಷದ ಸಂಘಟನೆಯಲ್ಲಿ ಶಿವಕುಮಾರ್ ಸಕ್ರಿಯವಾಗಿ ತೊಡಗಿದ್ದಾರೆ. ಆದರೂ ಪಿಸಿಸಿ ಅಧಿವೇಶನಗಳು, ಡಿಸಿಸಿ ಸಭೆಗಳು ನಡೆಯುತ್ತಿಲ್ಲ ಎಂದು ಅವರು ಹೇಳಿದರು. 

ಹೀಗಾಗಿ ಅಧ್ಯಕ್ಷರು ತಮ್ಮ ಕಾರ್ಯಾಧ್ಯಕ್ಷರು ಹಾಗೂ ಜಿಲ್ಲಾಧ್ಯಕ್ಷರ ಜತೆಗೂಡಿ ಚರ್ಚೆ ಮಾಡಿ ಮೂರು ತಿಂಗಳಿಗೊಮ್ಮೆ ಜಿಲ್ಲಾ ಕಾಂಗ್ರೆಸ್ ಸಮಿತಿ ಸಭೆ ನಡೆಯಬೇಕು. 6 ತಿಂಗಳಿಗೊಮ್ಮೆ ವರ್ಷಕ್ಕೆ ಎರಡು ಬಾರಿ ಪ್ರದೇಶ ಕಾಂಗ್ರೆಸ್ ಸಮಿತಿಯ ಸಭೆ ನಡೆಸಬೇಕು.  ಇಲ್ಲಿ ಸಾಕಷ್ಟು ವಿಚಾರಗಳ ಬಗ್ಗೆ ಚರ್ಚೆ ಮಾಡಬಹುದು ಎಂದು ಅವರು ಸೂಚಿಸಿದರು.

ನಾಯಕರು ಮಾಧ್ಯಮಗಳ ಮುಂದೆ ಪಕ್ಷಕ್ಕೆ ಧಕ್ಕೆಯಾಗುವ ರೀತಿಯಲ್ಲಿ ಹೇಳಿಕೆಗಳನ್ನು ನೀಡುವುದನ್ನು ನಿಲ್ಲಿಸಬೇಕು. ನಿಮ್ಮ ಭಿನ್ನಾಭಿಪ್ರಾಯಗಳನ್ನು ಪಕ್ಷದ ಆಂತರಿಕ ವೇದಿಕೆಯಲ್ಲಿ ಚರ್ಚೆಮಾಡಿ. 150ಕ್ಕೂ ಹೆಚ್ಚು ಕ್ಷೇತ್ರಗಳನ್ನು ಗೆಲ್ಲುವಂತೆ ಪಕ್ಷ ಸಂಘಟಿಸಬೇಕು. ಈ ಸಂಖ್ಯಾ ಬಲ ಇದ್ದರೆ ಹೆಚ್ಚು ಪರಿಷತ್ ಹಾಗೂ ರಾಜ್ಯಸಭೆ ಸ್ಥಾನಗಳಿಗೆ ಆಯ್ಕೆ ಮಾಡುವ ಅವಕಾಶ ನಮಗೂ ಸಿಗುತ್ತದೆ ಎಂದು ಸುರ್ಜೇವಾಲ ಹೇಳಿದರು. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News