ಕರಕುಶಲ ನಿಗಮದಲ್ಲಿ ಭ್ರಷ್ಟಾಚಾರ ಆರೋಪ: ಬೇಳೂರು ರಾಘವೇಂದ್ರ ಶೆಟ್ಟಿ ಬಂಧನಕ್ಕೆ ಆಪ್ ಒತ್ತಾಯ

Update: 2022-06-02 12:53 GMT

ಬೆಂಗಳೂರು: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ಅಧ್ಯಕ್ಷ ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧದ ಕೇಳಿಬರುತ್ತಿರುವ ಆರೋಪಗಳನ್ನು ಗಂಭೀರವಾಗಿ ಪರಿಗಣಿಸಿ, ಶೀಘ್ರವೇ ಅವರನ್ನು ಹುದ್ದೆಯನ್ನು ವಜಾಗೊಳಿಸಿ ಬಂಧಿಸಬೇಕು ಎಂದು ಆಮ್‌ ಆದ್ಮಿ ಪಾರ್ಟಿ ಆಗ್ರಹಿಸಿದೆ.

ಪ್ರೆಸ್‌ಕ್ಲಬ್‌ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಆಮ್‌ ಆದ್ಮಿ ಪಾರ್ಟಿ ರಾಜ್ಯ ವಕ್ತಾರ ಹಾಗೂ ಮಾಜಿ ಕೆಎಎಸ್‌ ಅಧಿಕಾರಿ ಕೆ.ಮಥಾಯ್, “ಕರಕುಶಲ ನಿಗಮದ ಕೇಂದ್ರ ಕಚೇರಿಯ ಸಿಸಿಟಿವಿ ಕ್ಯಾಮೆರಾ ದೃಶ್ಯಾವಳಿಗಳ ರೆಕಾರ್ಡಿಂಗ್‌ ಇರುವ ಡಿವಿಆರ್‌ನಲ್ಲಿ ಮಾಹಿತಿ ತಿರುಚಿರುವ ಆರೋಪವು ರಾಘವೇಂದ್ರ ಶೆಟ್ಟಿ ಮೇಲಿದೆ. 25 ಕೋಟಿ ರೂ. ಅಕ್ರಮ ನಡೆಸಿ ಪ್ರಧಾನ ವ್ಯವಸ್ಥಾಪಕ ಹುದ್ದೆಯಿಂದ ವಜಾಗೊಂಡಿದ್ದ ಕಿಶೋರ್‌ ಕುಮಾರ್‌ ಎಂಬುವವರನ್ನು ಮರಳಿ ಅದೇ ಹುದ್ದೆಗೆ ನೇಮಕ ಮಾಡಲು ವಿಫಲ ಯತ್ನ ನಡೆಸಿದ್ದಾರೆ. ಇದಕ್ಕಾಗಿ  5 ಕೋಟಿ ರೂ. ಹಣದ ವ್ಯವಹಾರದ ಮಾತುಕತೆ ನಡೆದಿರುವ ಮಾಹಿತಿಯಿದೆ. ಕಚೇರಿ ಸಿಬ್ಬಂದಿಯ ಹಾಜರಾತಿ ವಿವರ ಒದಗಿಸದೇ ಮಾಸಿಕ 5 ಲಕ್ಷದಷ್ಟು ವೇತನ ಮತ್ತು ಇತರ ವೆಚ್ಚ ಪಡೆಯಲಾಗುತ್ತಿದ್ದಾರೆ. ನಿಗಮದ ಅಧಿಕಾರಿಗಳಿಂದ ಬಲವಂತವಾಗಿ ಊಟ ತರಿಸಿಕೊಂಡು ಬಳಸಿದ್ದಾರೆ. ಮಹಿಳಾ ಆಪ್ತ ಸಹಾಯಕಿಯೇ ಬೇಕು ಎಂಬ ಬೇಡಿಕೆಯನ್ನು ಇಟ್ಟಿದ್ದಲ್ಲದೇ, ಮಹಿಳೆಯರ ಜೊತೆ ಅಸಭ್ಯವಾಗಿ ವರ್ತಿಸಿದ ಆರೋಪ ಕೂಡ ಅವರ ಮೇಲಿದೆ” ಎಂದು ಹೇಳಿದರು.

‘ಬೇಳೂರು ರಾಘವೇಂದ್ರ ಶೆಟ್ಟಿರವರ ಆಪ್ತ ಕಾರ್ಯದರ್ಶಿ ಹುದ್ದೆಯಲ್ಲಿದ್ದ ಶ್ರೀಕಾಂತ ಚೌರಿ ಎಂಬಾತ ಪೊಲೀಸ್‌ ಸಬ್‌ ಇನ್‌ಸ್ಪೆಕ್ಟರ್‌ ನೇಮಕಾತಿ ಪರೀಕ್ಷಾ ಅಕ್ರಮದಲ್ಲಿ ಬಂಧಿತನಾಗಿದ್ದಾನೆ. ರಾಘವೇಂದ್ರ ಶೆಟ್ಟಿ ಕೂಡ ಈ ಅಕ್ರಮದಲ್ಲಿ ಭಾಗಿಯಾಗಿರುವ ಸಾಧ್ಯತೆ ಇದ್ದು, ಈ ಬಗ್ಗೆಯೂ ತನಿಖೆ ನಡೆಸಬೇಕು. ನಿಗಮದ ಬೋರ್ಡ್ ಮೀಟಿಂಗ್‌ಗಳ ಸಭೆಗಳಲ್ಲಿ ಅವರು ಜೋರಾಗಿ ಕೂಗುತ್ತಾ ಅಶಾಂತಿ ವಾತಾವರಣ ಉಂಟು ಮಾಡಿದ್ದರು. ಖಿನ್ನತೆಗೊಳಗಾಗಿ ಆತ್ಮಹತ್ಯೆ ಮಾಡಿಕೊಂಡರೆ ರೂಪಾ ಕಾರಣ ಎಂದು ಐದಾರು ಬಾರಿ ಕೂಗಿ ಒತ್ತಡ ಹೇರಿದ್ದರು ಎಂದು ಗೊತ್ತಾಗಿದೆ. ಪದೇ ಪದೇ ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಹೇಳುವ ಮೂಲಕ ಬೆದರಿಕೆ ಮತ್ತು ಒತ್ತಡ ಹೇರುತ್ತಿರುವ ರಾಘವೇಂದ್ರ ಶೆಟ್ಟಿ ವಿರುದ್ಧ ಆತ್ಮಹತ್ಯೆ ಬೆದರಿಕೆ ದೂರನ್ನು ಠಾಣೆಯಲ್ಲಿ ದಾಖಲಿಕೊಂಡು ಕ್ರಮ ಕೈಗೊಳ್ಳಬೇಕು” ಎಂದು ಕೆ.ಮಥಾಯ್‌ ಆಗ್ರಹಿಸಿದರು.

ಎಎಪಿ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್‌ ವಿ ಸದಂ ಮಾತನಾಡಿ, “ಕರಕುಶಲ ನಿಗಮದ ಷೋರೂಂಗಳಿಂದ ಲಕ್ಷಗಟ್ಟಲೆ ಬೆಲೆಬಾಳುವ ಗಂಧದ ವಸ್ತುಗಳ ಕಳ್ಳತನ ಸೇರಿದಂತೆ ಅನೇಕ ಗಂಭೀರ ಆರೋಪಗಳು ಬೇಳೂರು ರಾಘವೇಂದ್ರ ಶೆಟ್ಟಿ ವಿರುದ್ಧ ಕೇಳಿಬಂದಿವೆ. ಷೋರೂಂಗಳಿಂದ ಕದ್ದ ವಸ್ತುಗಳನ್ನು ಮಂತ್ರಿಗಳಿಗೆ ಉಡುಗೊರೆ ನೀಡಲಾಗಿದ್ದು, ಈ ಕುರಿತು ಆತನನ್ನು ಬಂಧಿಸಿ ವಿಚಾರಣೆ ಮಾಡಬೇಕು. ಆತ ಅಧಿಕಾರ ವಹಿಸಿಕೊಳ್ಳುವ ಸಂದರ್ಭದಲ್ಲಿ ವಿನಯ್‌ ಗುರೂಜಿಯವರನ್ನು ಕಚೇರಿಗೆ ಕರೆಸಿ ಹೋಮಹವನಗಳನ್ನು ಮಾಡಿಸಿದ್ದು, ಇದರ ಖರ್ಚನ್ನೂ ನಿಗಮದಿಂದ ಪಡೆದಿದ್ದಾರೆ. ಜೊತೆಗೆ, ಮಾಜಿ ಸಿಎಂ ಯಡಿಯೂರಪ್ಪನವರ ಮನೆಯಲ್ಲೂ ಹೋಮಗಳನ್ನು ಮಾಡಿಸಿದ್ದು, ಅದರ ಲೆಕ್ಕವನ್ನೂ ನಿಗಮದ ಖರ್ಚಿಗೆ ಸೇರಿಸಲಾಗಿದೆ. ನಿಗಮದ ವ್ಯವಸ್ಥಾಪಕ ನಿರ್ದೇಶಕಿ ಡಿ.ರೂಪಾರವರು ರಾಘವೇಂದ್ರ ಶೆಟ್ಟಿ ವಿರುದ್ಧ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಲಿಖಿತ ದೂರು ನೀಡಿದ್ದರೂ ಸರ್ಕಾರ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಆತನನ್ನು ಹುದ್ದೆಯಿಂದ ಕೂಡಲೇ ವಜಾ ಮಾಡಿ ಬಂಧಿಸಬೇಕು ಹಾಗೂ ಆರೋಪಗಳ ಸಮಗ್ರ ತನಿಖೆ ನಡೆಸಿ ಕಠಿಣ ಕ್ರಮ ಕೈಗೊಳ್ಳಬೇಕು” ಎಂದು ಒತ್ತಾಯಿಸಿದರು

ಪತ್ರಿಕಾಗೋಷ್ಠಿಯಲ್ಲಿ ಎಎಪಿಯ ಬೆಂಗಳೂರು ಗ್ರಾಮಾಂತರ ಜಿಲ್ಲಾ ಉಸ್ತುವಾರಿ ಬಿ.ಕೆ.ಶಿವಪ್ಪ ಹಾಗೂ ಬೆಂಗಳೂರು ನಗರ ಪ್ರಧಾನ ಕಾರ್ಯದರ್ಶಿ ಜಗದೀಶ್ ಚಂದ್ರ ಹಾಜರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News