ಕೇಂದ್ರದಲ್ಲಿ ಬಿಜೆಪಿಗೆ ಇನ್ನೂ 50 ವರ್ಷ ಅಧಿಕಾರ: ಜಮಾಲ್ ಸಿದ್ದಿಕಿ ವಿಶ್ವಾಸ
ಬೆಂಗಳೂರು, ಜೂ.4: ಬಿಜೆಪಿ ಸರ್ವಸ್ಪರ್ಶಿ, ಸರ್ವವ್ಯಾಪಿ ಮತ್ತು ಸರ್ವರ ಅಭಿವೃದ್ಧಿಗೆ ಯತ್ನಿಸುವ ಪಕ್ಷ ಎಂದು ತಿಳಿಸುವ ಮೂಲಕ ಅದು ಅಲ್ಪಸಂಖ್ಯಾತರ ವಿರೋಧಿ ಎಂಬ ತಪ್ಪು ಮಾಹಿತಿಯನ್ನು ದೂರಮಾಡಲು ಮೋರ್ಚಾ ಯತ್ನಿಸಬೇಕಿದೆ. ಈ ಮೂಲಕ ಸಬ್ ಕಾ ವಿಕಾಸ್ ಚಿಂತನೆಯನ್ನು ಸಾಕಾರಗೊಳಿಸಬೇಕಿದೆ ಎಂದು ಬಿಜೆಪಿ ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಅಧ್ಯಕ್ಷ ಜಮಾಲ್ ಸಿದ್ದಿಕಿ ತಿಳಿಸಿದರು.
ಶನಿವಾರ ನಗರದ ಮಲ್ಲೇಶ್ವರದಲ್ಲಿರುವ ಬಿಜೆಪಿ ಕಚೇರಿಯಲ್ಲಿ ನಡೆದ ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ಅವರು, ಕೇಂದ್ರ ಸರಕಾರ ಮಾಡಿದ ಉತ್ತಮ ಕಾರ್ಯಗಳಿಂದಾಗಿ ಬಿಜೆಪಿ ಇನ್ನೂ 50 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಆದರೆ, ಕೇಂದ್ರದ ಸರ್ವತೋಮುಖ ಅಭಿವೃದ್ಧಿ ಕಾರ್ಯಗಳ ಕುರಿತು ನಾವು ಜನರಿಗೆ ತಿಳಿಸುವ ಅಗತ್ಯವಿದೆ.ಬಿಜೆಪಿ ದೇಶದ ಮಾತ್ರವಲ್ಲ, ಜಗತ್ತಿನ ಅತಿ ದೊಡ್ಡ ರಾಜಕೀಯ ಪಕ್ಷವಾಗಿದೆ. ಬಿಜೆಪಿಯಲ್ಲಿ ವಿಶ್ವಕ್ಕೇ ನೇತೃತ್ವ ನೀಡಬಲ್ಲ ಮಹಾನ್ ನಾಯಕ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವ ಇದೆ. ಈ ಪಕ್ಷದಡಿ ಮೋರ್ಚಾದ ಪದಾಧಿಕಾರಿಗಳಾದ ನಾವೆಲ್ಲರೂ ಧನ್ಯತಾ ಭಾವವನ್ನು ಹೊಂದಿರಬೇಕು ಎಂದು ಅವರು ತಿಳಿಸಿದರು.
ಮೋದಿಯವರ ಸರಕಾರ ಕಳೆದ 8 ವರ್ಷಗಳಲ್ಲಿ ಬಡವರ ಸೇವೆ, ಸುಶಾಸನ ಮತ್ತು ಬಡವರ ಏಳಿಗೆಗಾಗಿ ನಿರಂತರ ಕಾರ್ಯನಿರ್ವಹಿಸಿದೆ. ಭ್ರಷ್ಟಾಚಾರರಹಿತವಾಗಿ ಅದು ಕೆಲಸ ಮಾಡಿದೆ. ಆದರೆ, ವಿರೋಧ ಪಕ್ಷದವರು ಕುರ್ಚಿಗಾಗಿ ಏನನ್ನು ಮಾಡಲೂ ಸಿದ್ಧರಿದ್ದಾರೆ.
ಅಲ್ಪಸಂಖ್ಯಾತರು ಸೇರಿದಂತೆ ಎಲ್ಲರನ್ನು ಸಮಾನವಾಗಿ ನೋಡುವ ಬಿಜೆಪಿ ಸರಕಾರ ಕೇಂದ್ರದ್ದು. ಕ್ರಿಶ್ಚಿಯನ್, ಮುಸ್ಲಿಮರು ಹೆಚ್ಚು ಸಂಖ್ಯೆಯಲ್ಲಿ ಇರುವ ಕಡೆ ವಿದ್ಯುತ್, ಮನೆ ಮತ್ತು ರಸ್ತೆ ಸಂಪರ್ಕ ನೀಡುವುದಿಲ್ಲ ಎಂಬ ಮಾತು ಯಾವತ್ತೂ ಬಂದಿಲ್ಲ ಎಂದು ಅವರು ನುಡಿದರು.
ರೈತರಿಗೆ ನೆರವಾಗುವ ಕಿಸಾನ್ ಸಮ್ಮಾನ್ ಯೋಜನೆಯನ್ನು ಬಿಜೆಪಿ ಸರಕಾರ ಜಾರಿಗೊಳಿಸಿದೆ. ಯಾವುದೇ ಯೋಜನೆಗಳಲ್ಲಿ ಭೇದಭಾವ ಅಲ್ಲಿಲ್ಲ. “ಸಬ್ ಕಾ ಸಾಥ್, ಸಬ್ ಕಾ ವಿಶ್ವಾಸ್” ಘೋಷಣೆಯಂತೆ ಕೇಂದ್ರ ಸರಕಾರ ಕೆಲಸ ಮಾಡುತ್ತಿದೆ. ನಾವು ಸಮಾಜದ ಎಲ್ಲರಿಗೂ ಯೋಜನೆಗಳ ಪ್ರಯೋಜನ ತಲುಪುವಂತೆ ನೋಡಿಕೊಳ್ಳಬೇಕು ಎಂದು ಜಮಾಲ್ ಸಿದ್ದಿಕಿ ಮನವಿ ಮಾಡಿದರು.
ರಾಜ್ಯ ಅಲ್ಪಸಂಖ್ಯಾತರ ಮೋರ್ಚಾ ಅಧ್ಯಕ್ಷ ಸೈಯದ್ ಸಲಾಂ ಅತ್ಯುತ್ತಮವಾಗಿ ಕೆಲಸ ಮಾಡುತ್ತಿದ್ದಾರೆ. ಮುಂದೆ ಅವರು ರಾಷ್ಟ್ರೀಯ ಅಧ್ಯಕ್ಷ ಆಗಲಿ. ಬಿಜೆಪಿ ಇಂಥ ಕನಸುಗಳಿಗೆ ಅವಕಾಶ ಮಾಡಿಕೊಡುತ್ತದೆ. ಅದು ನನಸಾಗಲೂ ಅವಕಾಶವಿದೆ. ಆದರೆ, ಕುಟುಂಬ ರಾಜಕಾರಣ ಮಾಡುವ ಜೆಡಿಎಸ್, ಕಾಂಗ್ರೆಸ್ ಪಕ್ಷದಲ್ಲಿ ಇಂಥ ಕನಸು ಕಾಣಲು ಸಾಧ್ಯವಿಲ್ಲ ಎಂದು ಅವರು ನುಡಿದರು.
ಜನಸಂಘದ ಪದಾಧಿಕಾರಿಗಳನ್ನು ಹಿಂದೆ ತಮಾಷೆ ಮಾಡುವ ದಿನಗಳಿದ್ದವು. ಆದರೆ, ಈಗ ಕಾಲ ಬದಲಾಗಿದೆ ಎಂದು ಅವರು ನುಡಿದರು.
ಪಕ್ಷವನ್ನು ಬಲಪಡಿಸಲು ಸಾಮಾಜಿಕ ಜಾಲತಾಣವನ್ನು ಬಳಸಿಕೊಳ್ಳಬೇಕು. ವಾಟ್ಸಪ್, ಫೇಸ್ ಬುಕ್, ಟ್ವಿಟರ್ ಮತ್ತಿತರ ಸಾಮಾಜಿಕ ಜಾಲತಾಣ, ಮುದ್ರಣ ಮಾಧ್ಯಮವನ್ನು ಪ್ರಚಾರಕಾರ್ಯಕ್ಕೆ ಬಳಸಿಕೊಳ್ಳಿ. ಮತದಾರರನ್ನು ತಲುಪಲು ಮತ್ತು ಮುಖಂಡರಿಗೆ ವಿಷಯ ತಿಳಿಸಲು ಸಾಮಾಜಿಕ ಜಾಲತಾಣದ ಸಮರ್ಪಕ ಬಳಕೆ ಅತ್ಯಗತ್ಯ ಎಂದು ಅವರು ವಿವರಿಸಿದರು.
ಸಭೆಯಲ್ಲಿ ರಾಷ್ಟ್ರೀಯ ಉಪಾಧ್ಯಕ್ಷರಾದ ಡಾ.ಅಬ್ದುಲ್ ಸಲಾಮ್, ನೋಬಲ್ ಮ್ಯಾಥ್ಯೂ, ಅಲ್ಪಸಂಖ್ಯಾತರ ಮೋರ್ಚಾದ ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯ ಅನಿಶ್, ಅಲ್ಪಸಂಖ್ಯಾತರ ಮೋರ್ಚಾದ ರಾಜ್ಯ ಅಧ್ಯಕ್ಷ ಸೈಯದ್ ಸಲಾಮ್, ಕೆಎಂಡಿಸಿ ಅಧ್ಯಕ್ಷ ಮುಖ್ತಾರ್ ಹುಸೇನ್ ಪಠಾಣ್, ಕರ್ನಾಟಕ ಕ್ರೈಸ್ತ ಅಭಿವೃದ್ಧಿ ಮಂಡಳಿಯ ಅಧ್ಯಕ್ಷ ಶಾಂತಕುಮಾರ್, ರಾಜ್ಯ ಹಜ್ ಸಮಿತಿ ಅಧ್ಯಕ್ಷ ರವೂಫುದ್ದೀನ್ ಕಛೇರಿವಾಲಾ ಮತ್ತು ಇತರ ಪದಾಧಿಕಾರಿಗಳು ಉಪಸ್ಥಿತರಿದ್ದರು.